ಸಾರಾಂಶ
ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರುವ ರಾಜೀವ್ ತಾರಾನಾಥರು ಮತ್ತೆ ಈ ಸಂಗೀತ ನಾಡಿನಲ್ಲಿ ಹುಟ್ಟಿಬರಲಿ.
ಧಾರವಾಡ:
ಪಂ. ರಾಜೀವ್ ತಾರಾನಾಥರು ದೇಶದ ಶ್ರೇಷ್ಠ ಸಂಗೀತಗಾರರು. ಸ್ಪಷ್ಟವಾದಿ, ನೇರ ನಿಷ್ಠುರರಾಗಿದ್ದ ರಾಜೀವ್ ಅವರು ಅತ್ಯುತ್ತಮ ಮಾನವತಾವಾದಿಯೂ ಆಗಿದ್ದರು ಎಂದು ಪದ್ಮಭೂಷಣ ಪಂ. ಎಂ. ವೆಂಕಟೇಶಕುಮಾರ ಹೇಳಿದರು.ನಿಧನರಾದ ಹಿರಿಯ ಸರೋದ್ ಕಲಾವಿದ ಪಂ. ರಾಜೀವ್ ತಾರಾನಾಥರಿಗೆ ಇಲ್ಲಿಯ ಮನೋಹರ ಗ್ರಂಥಮಾಲೆ ಅಟ್ಟದಲ್ಲಿ ಗುರುವಾರ ನಡೆದ ನುಡಿ-ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರುವ ರಾಜೀವ್ ತಾರಾನಾಥರು ಮತ್ತೆ ಈ ಸಂಗೀತ ನಾಡಿನಲ್ಲಿ ಹುಟ್ಟಿಬರಲಿ ಎಂದರು.ಹಿರಿಯ ಲೇಖಕ ಜಿ.ಸಿ. ತಲ್ಲೂರ ಮಾತನಾಡಿ, ಇಂತಹ ಕಲಾವಿದರು ಅಪರೂಪ. ಸಂಗೀತ ಎಲ್ಲರ ಮನಸ್ಸು ತಟ್ಟಬೇಕು. ಸಂಗೀತದಲ್ಲಿ ಶುದ್ಧತೆ ಇದೆ. ಪ್ರಮಾಣ ಬದ್ಧತೆ ಇದೆ. ಸಂಸ್ಕೃತಿ, ಸಂಸ್ಕಾರ ಇದೆ. ಅದನ್ನು ಸಾಧಿಸಿ ತೋರಿಸಿದವರು ಪಂ. ರಾಜೀವ ತಾರನಾಥ ಎಂದು ಹೇಳಿದರು.
ರಮಾಕಾಂತ ಜೋಶಿ, ರಾಜೀವ್, ಜಿ.ಬಿ. ಜೋಶಿ ಮತ್ತು ಮನೋಹರ ಗ್ರಂಥಮಾಲೆ ನಂಟು ಆರು ದಶಕಗಳದು. ಅಟ್ಟಕ್ಕೆ ಪದೇ ಪದೇ ಬಂದು ಸಂತೋಷ ಪಡುತ್ತಿದ್ದರು. ಅವರೊಬ್ಬ ಶ್ರೇಷ್ಠ ವ್ಯಕ್ತಿ. ಅತ್ಯುತ್ತಮ ವಿಮರ್ಶಕರೂ ಆಗಿದ್ದ ಅವರು ಸಾಹಿತ್ಯದಿಂದ ತುಸು ವಿಮುಖರಾಗಿ ಪೂರ್ತಿಯಾಗಿ ಸಂಗೀತದತ್ತ ವಾಲಿ ಭಾರತದ ಶ್ರೇಷ್ಠ ಸರೋದ್ ವಾದಕರಲ್ಲಿ ಒಬ್ಬರಾದರು ಎಂದರು.ಸಭೆಯಲ್ಲಿದ್ದ ಶ್ಯಾಮಸುಂದರ ಬಿದರಕುಂದಿ, ವಿ.ಟಿ. ನಾಯಕ, ಶಂಕರ ಕುಂಬಿ, ಪ್ರಕಾಶ ಗರುಡ, ಶ್ರೀನಿವಾಸ ವಾಡಪ್ಪಿ, ಕೃಷ್ಣಾ ಕಟ್ಟಿ, ಶಶಿಧರ ನರೇಂದ್ರ, ಅರಣ್ಯ ಕುಮಾರ, ವೀರಣ್ಣ ಪತ್ತಾರ, ಸುಜಾತಾ ಗುರವ ನುಡಿನಮನ ಸಲ್ಲಿಸಿದರು. ಅಶೋಕ ಮೊಕಾಶಿ, ಸಮೀರ ಜೋಶಿ, ಸಾಧನಾ ಮಿರಜಕರ, ಎಸ್.ಎನ್. ದೇಶಪಾಂಡೆ, ವಿಶ್ವನಾಥ ಕೋಳಿವಾಡ ಇದ್ದರು. ಹ.ವೆಂ. ಕಾಖಂಡಿಕಿ ನಿರೂಪಿಸಿದರು.