ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮೈಸೂರಿನಲ್ಲಿ ಸಂಘಟನೆಗೊಂಡಿರುವ ಚಾಮರಾಜೇಶ್ವರಿ ಅಕ್ಕನ ಬಳಗದಿಂದ ಅಕ್ಕಮಹದೇವಿ ಜಯಂತಿ ಅಂಗವಾಗಿ ರುದ್ರಭೂಮಿ ಕಾಯಕ ಜೀವಿ ನೀಲಮ್ಮ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಮೈಸೂರಿನ ಕುವೆಂಪು ನಗರದ ಜೆಎಸ್‌ಎಸ್ ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷೆ ಮಾದಲಾಂಬಿಕಾ ಹಾಗೂ ಪದಾಧಿಕಾರಿಗಳು ನೀಲಮ್ಮ ಅವರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ, ಸನ್ಮಾನಿಸುವ ಮೂಲಕ ಅವರ ಸೇವೆಯನ್ನು ಗುಣಗಾನ ಮಾಡಿದರು.ಅಕ್ಕಮಹದೇವಿ ಸಂಶೋಧನಾ ಮತ್ತು ವಿಸ್ತರಣಾ ಪೀಠದ ನಿರ್ದೇಶಕಿ ಪ್ರೊ. ಕವಿತಾರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ೧೨ನೇ ಶತಮಾನದಲ್ಲಿ ಶರಣೆ ಅಕ್ಕ ಮಹದೇವಿ ರಚನೆ ಮಾಡಿದ ವಚನಗಳು ಹಾಗೂ ಅವರಿದ್ದ ಸಮಾನತೆ ಮತ್ತು ಸ್ತ್ರಿ ಸ್ವಾತಂತ್ರ್ಯದ ಬಗ್ಗೆ ಅವರಲ್ಲಿದ್ದ ಸಂವೇದನೆಗಳನ್ನು ತಿಳಿಸಿದರು. ಪ್ರಪಂಚದಲ್ಲಿರುವುದು ಎರಡನೇ ಜಾತಿ ಒಂದು ಹೆಣ್ಣು ಮತ್ತೊಂದು ಗಂಡು ಜಾತಿ. ಇಬ್ಬರು ಸಮಾನರು, ಇಲ್ಲಿ ಯಾರು ಮೇಲು ಅಲ್ಲ, ಕೀಳು ಅಲ್ಲ. ಸಮ ಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸಿದವರು ಅಕ್ಕ ಮಹಾದೇವಿ, ಅನುಭವ ಮಂಟಪದಲ್ಲಿ ವಚನಗಳನ್ನು ರಚನೆ ಮಾಡಿ, ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಪ್ರಥಮ ಮಹಿಳಾ ಹೋರಾಟಗಾರರು ಎಂಬ ಕೀರ್ತಿಗೆ ಅಕ್ಕಮಹದೇವಿ ಭಾಜನರಾಗಿದ್ದರು. ಅವರ ತ್ಯಾಗ ಮತ್ತು ಸ್ವಾಭಿಮಾನದ ಬದುಕು ನಮಗೆ ಮಾದರಿಯಾಗಬೇಕೆಂದು ತಿಳಿಸಿದರು. ಬಳಗದ ಅಧ್ಯಕ್ಷೆ ಮಾದಲಾಂಬಿಕೆ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಾಮರಾಜನಗರ ಪ್ರದೇಶದಿಂದ ಮೈಸೂರಿನಲ್ಲಿ ನೆಲೆಸಿರುವ ನಾವೆಲ್ಲರೂ ಒಟ್ಟಾಗಿ ಚಾಮರಾಜೇಶ್ವರಿ ಅಕ್ಕನ ಬಳಗವನ್ನು ರಚನೆ ಮಾಡಿಕೊಂಡು ಸಂಘಟನೆ ಮಾಡುವ ಜೊತೆಗೆ ಅಕ್ಕಮಹಾದೇವಿ ಸೇರಿದಂತೆ ಶರಣ ಪರಂಪರೆಯನ್ನು ಪ್ರಚುರಪಡಿಸುವ ಜೊತೆಗೆ ಸಮಾಜವನ್ನು ಸಂಘಟನೆ ಮಾಡುವ ಉದ್ದೇಶವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಂಡಿರುವ ನೀಲಮ್ಮ ಅವರ ಸಾಧನೆಯನ್ನು ಗಮನಿಸಿ, ಅವರನ್ನು ಸನ್ಮಾನಿಸುವ ಉತ್ತಮ ಕಾರ್ಯವನ್ನು ಬಳಗ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಅಕ್ಕ ಮಹದೇವಿ ಅವರ ಚಿಂತನೆಯನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳೋಣ ಎಂದರು. ಕಾರ್ಯಕ್ರಮದಲ್ಲಿ ಕದಳಿ ಮಹಿಳಾ ಬಳಗದ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಬಸವ ಬಳಗದ ಒಕ್ಕೂಟದ ಅಧ್ಯಕ್ಷ ಎಂ. ಪ್ರದೀಪ್‌ಕುಮಾರ್, ಬಳಗದ ಉಪಾಧ್ಯಕ್ಷೆ ಮಂಜುಳಾ ನಂಜುಂಡಸ್ವಾಮಿ, ಕಾರ್ಯದರ್ಶಿ ಪ್ರತಿಮಾ ಮಂಜುನಾಥ್, ಹಿರಿಯ ಸಲಹೆಗಾರರಾದ ಮಂಗಳ ಮುದ್ದಮಾದಪ್ಪ, ವಿಜಯ ಚಿನ್ನಸ್ವಾಮಿ, ಇಂದಿರಾ ಪರಶಿವಯ್ಯ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಹಾಗೂ ಬಳದ ಸದಸ್ಯರು ಉಪಸ್ಥಿತರಿದ್ದರು.