ಸಾಹಿತಿ ಪಂಚಾಕ್ಷರಿ ಹಿರೇಮಠ ಅವರಿಗೆ ಶ್ರದ್ಧಾಂಜಲಿ

| Published : Mar 16 2025, 01:51 AM IST

ಸಾರಾಂಶ

ಡಾ. ಪಂಚಾಕ್ಷರಯ್ಯ ಹಿರೇಮಠ ಅವರ ನಿಧನದ ಹಿನ್ನೆಲೆಯಲ್ಲಿ ಶನಿವಾರ ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದರು.

ಧಾರವಾಡ: ಹಿರಿಯ ಸಾಹಿತಿ, ಏಕೀಕರಣದ ಹೋರಾಟಗಾರ ಮತ್ತು ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದ್ದ ಡಾ. ಪಂಚಾಕ್ಷರಯ್ಯ ಹಿರೇಮಠ ಅವರ ನಿಧನದ ಹಿನ್ನೆಲೆಯಲ್ಲಿ ಶನಿವಾರ ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದರು.

ಬಹು ಭಾಷಾ ಪಂಡಿತರಾಗಿದ್ದ ಡಾ. ಪಂಚಾಕ್ಷರಿ ಹಿರೇಮಠರು ರಂಭಾಪುರಿ ಪೀಠದ ಹಲವಾರು ಗ್ರಂಥಗಳಿಗೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಪೀಠದ ಮುಖವಾಣಿ ರಂಭಾಪುರಿ ಬೆಳಗು ಪತ್ರಿಕೆಗೆ ಕೆಲವು ವರ್ಷಗಳ ಕಾಲ ಸಂಪಾದಕರಾಗಿ ಕಾರ್ಯ ನಿರ್ವಹಿಸಿ ಪತ್ರಿಕೆಗೆ ಮೆರುಗು ತಂದಿದ್ದನ್ನು ಮರೆಯುವಂತಿಲ್ಲ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಅವರು ಶ್ರೀ ಪೀಠದೊಡನೆ ನಿಕಟ ಸಂಪರ್ಕ ಹೊಂದಿದ್ದರು. ಅವರ ಅಗಲಿಕೆ ನೋವನ್ನುಂಟು ಮಾಡಿದೆ ಎಂದು ರಂಭಾಪುರಿ ಸ್ವಾಮೀಜಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಇನ್ನು, ಜಯನಗರ ಹಿರೇಮಠರ ಮನೆಗೆ ತೆರಳಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮೃತರ ಪಾರ್ಥಿವ ಶರೀರಕ್ಕೆ ಪುಷ್ಪಾರ್ಪಣೆ ಮಾಡಿ,ಗೌರವ ಸಲ್ಲಿಸಿದರು. ಮೃತರ ಪತ್ನಿ ಶಾಂತಾದೇವಿ, ಪುತ್ರರಾದ ಜಯದೇವ, ಮೃತ್ಯುಂಜಯ ಮತ್ತು ಪುತ್ರಿ ವಿಜಯಶ್ರೀ ಅವರಿಗೆ ಜಿಲ್ಲಾಧಿಕಾರಿಗಳು ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಮೇಯರ್ ಈರೇಶ ಅಂಚಟಗೇರಿ, ಡಾ. ಬಸವರಾಜ ಕಟ್ಟಿಮನಿ ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಮಕ್ಕಳ ವೈದ್ಯ‌ ಅರುಣ ಜೋಶಿ ಸೇರಿದಂತೆ ಅನೇಕರು ಕಂಬನಿ ಮಿಡಿದರು. ಬೆಳಗ್ಗೆಯಿಂದ ಮಧ್ಯಾಹ್ನ ವರೆಗೆ ಅವರ ಮನೆಯಲ್ಲಿ ಸಾರ್ವಜನಿಕರ ದರ್ಶನ ನಂತರ ಪಾರ್ಥೀವ ಶರೀರವನ್ನು ಕೊಪ್ಪಳದ ಅವರ ಸ್ವಗ್ರಾಮಕ್ಕೆ ಅಂತ್ಯಕ್ರಿಯೆಗೆ ಒಯ್ಯಲಾಯಿತು.