ಸಾರಾಂಶ
ಡಾ.ಎಚ್.ಎನ್.ನಾಗರಾಜು ಜಿಲ್ಲೆಯಲ್ಲಿ ತಹಸೀಲ್ದಾರ್, ಉಪವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿಯಾಗಿ ೧೮ ವರ್ಷಗಳು ಸತತವಾಗಿ ಜಿಲ್ಲೆಗೆ ಸೇವೆ ಸಲ್ಲಿಸಿದ್ದು, ತಮ್ಮ ೧೦ ವರ್ಷಗಳ ಸೇವಾವಧಿ ಇರುವಾಗಲೇ ಸನ್ಯಾಸತ್ವ ಸ್ವೀಕಾರದ ಅಚಲ ನಿರ್ಧಾರ ಕೈಗೊಂಡಿರುವುದಕ್ಕೆ ಅವರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯ.
ಕನ್ನಡಪ್ರಭ ವಾರ್ತೆ ಮಂಡ್ಯ
ನಾಗರಿಕ ಸಮಿತಿಯಿಂದ ವಿಶ್ವ ಒಕ್ಕಲಿಗ ಮಠದ ಉತ್ತರಾಧಿಕಾರಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರಿಗೆ ಗೌರವ ಸಮರ್ಪಣಾ ಸಮಾರಂಭ ಏ.೧೮ರ ಬೆಳಿಗ್ಗೆ ೧೧ ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.ಡಾ.ಎಚ್.ಎನ್.ನಾಗರಾಜು ಜಿಲ್ಲೆಯಲ್ಲಿ ತಹಸೀಲ್ದಾರ್, ಉಪವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿಯಾಗಿ ೧೮ ವರ್ಷಗಳು ಸತತವಾಗಿ ಜಿಲ್ಲೆಗೆ ಸೇವೆ ಸಲ್ಲಿಸಿದ್ದು, ತಮ್ಮ ೧೦ ವರ್ಷಗಳ ಸೇವಾವಧಿ ಇರುವಾಗಲೇ ಸನ್ಯಾಸತ್ವ ಸ್ವೀಕಾರದ ಅಚಲ ನಿರ್ಧಾರ ಕೈಗೊಂಡಿರುವುದಕ್ಕೆ ಅವರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಶ್ರೀಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಅವರು ದಿವ್ಯಸಾನ್ನಿಧ್ಯ ವಹಿಸಲಿದ್ದು, ಉದ್ಯಮಿ ಕೆ.ಎಚ್. ವೆಂಕಟರಮಣೇಗೌಡ ಅವರು ವಿಶ್ವ ಒಕ್ಕಲಿಗ ಮಠದ ಉತ್ತರಾಧಿಕಾರಿ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ಗೌರವಿಸುವರು. ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಜಯರಾಂ ರಾಯಪುರ ಅಭಿನಂದನಾ ನುಡಿಗಳನ್ನಾಡುವರು ಎಂದರು.ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಜಿಪಂ ಸಿಇಒ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಕೆ.ಆರ್. ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್, ಬಿಜಿಎಸ್ ಡೆಂಟಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಆದರ್ಶ್ ಉಪಸ್ಥಿತರಿರುವರು ಎಂದರು.
ಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೊ.ಬಿ.ಜಯಪ್ರಕಾಶ್‌ಗೌಡ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಎಸ್.ನಾರಾಯಣ್, ಕಾರಸವಾಡಿ ಮಹದೇವ, ಲೋಕೇಶ್ ಚಂದಗಾಲು ಇದ್ದರು.