ಸಾರಾಂಶ
ಬೆಳಗಾವಿಯ ಅರಿಹಂತ ಆಸ್ಪತ್ರೆಯಲ್ಲಿ 7 ತಿಂಗಳ ಗರ್ಭಿಣಿಯೊಬ್ಬರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಇದು ವಿಶ್ವದಲ್ಲೇ ಪ್ರಥಮ ಎನ್ನಲಾಗಿದೆ. ಹೃದ್ರೋಗದಿಂದ ಬಳಲುತ್ತಿದ್ದ ಗರ್ಭಿಣಿಗೆ ಹೃದಯ ಚಿಕಿತ್ಸಾ ಪ್ರಕ್ರಿಯೆ ಕ್ಲಿಷ್ಟಕರವಾಗಿತ್ತು. ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಎಂ.ಡಿ.ದೀಕ್ಷಿತ ಅವರ ತಂಡವು ಶಸ್ತ್ರಚಿಕಿತ್ಸೆ ನೆರವೇರಿಸುವಲ್ಲಿ ಯಶಸ್ವಿಯಾಗಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯ ಅರಿಹಂತ ಆಸ್ಪತ್ರೆಯಲ್ಲಿ 7 ತಿಂಗಳ ಗರ್ಭಿಣಿಯೊಬ್ಬರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಇದು ವಿಶ್ವದಲ್ಲೇ ಪ್ರಥಮ ಎನ್ನಲಾಗಿದೆ. ಹೃದ್ರೋಗದಿಂದ ಬಳಲುತ್ತಿದ್ದ ಗರ್ಭಿಣಿಗೆ ಹೃದಯ ಚಿಕಿತ್ಸಾ ಪ್ರಕ್ರಿಯೆ ಕ್ಲಿಷ್ಟಕರವಾಗಿತ್ತು. ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಎಂ.ಡಿ.ದೀಕ್ಷಿತ ಅವರ ತಂಡವು ಶಸ್ತ್ರಚಿಕಿತ್ಸೆ ನೆರವೇರಿಸುವಲ್ಲಿ ಯಶಸ್ವಿಯಾಗಿದೆ. ಬೆಳಗಾವಿ ನಗರದ 37 ವರ್ಷದ ಅನಿತಾ ಎಂಬುವವರು ಗರ್ಭವತಿಯಾದ ನಂತರ ತೀವ್ರತರವಾದ ಕೊಲೆಸ್ಟ್ರಾಲನೊಂದಿಗೆ ಬಳುತ್ತಿದ್ದಳು. ಆದರೆ, ಮಹಿಳೆಗೆ ವಿಕಿರಣದ ಸಮಸ್ಯೆಯಾಗುತ್ತದೆ ಎಂದು ತಿಳಿದು ಯಾವುದೇ ರೀತಿಯ ಚಿಕಿತ್ಸೆಯನ್ನು ನೆರವೇರಿಸುವದು ಅತ್ಯಂತ ಕಠಿಣ ಪರಿಸ್ಥಿತಿಯಾಗಿತ್ತು. ಹೃದಯದ ಎಡಬಾಗದ ಕೊಲೆಸ್ಟ್ರಾಲ ಭರಿತ ಮೂರು ರಕ್ತನಾಳಗಳು ದಪ್ಪವಿದ್ದ ಕಾರಣ ಹೃದಯ ಶಸ್ತ್ರಚಿಕಿತ್ಸೆ ಅತ್ಯಂತ ಸವಾಲಿನದ್ದಾಗಿತ್ತು. ಆದರೂ ಎರಡೂ ಜೀವ ಉಳಿಸಲು ಶಸ್ತ್ರಚಿಕಿತ್ಸೆಯೊಂದೇ ದಾರಿ ಎಂದು ಮನಗಂಡ ಡಾ. ಎಂ ಡಿ ದಿಕ್ಷಿತ ಅವರು ಶಸ್ತ್ರಚಿಕಿತ್ಸೆ ನೆರವೇರಿಸಿದರು.ಅದೂ ಯಾವುದೇ ಎಕ್ಸರೇ ಅಥವಾ ವಿಕಿರಣ ಸೂಸುವ ಸಾಧನಗಳ ಬದಲಾಗಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪರಿಸ್ಥಿತಿಯ ಸೂಕ್ಷ್ಮತೆ ಹಾಗೂ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡ ಶಸ್ತ್ರಚಿಕಿತ್ಸಕರ ತಂಡವು ಎಲ್ಲ ಪರ್ಯಾಯ ಮಾರ್ಗಗಳ ಮೂಲಕ ಶಸ್ತ್ರಚಿಕಿತ್ಸೆಗೆ ಅಣಿಯಾಯಿತು. ಲಿಮಾ- ರಿಮಾ ವೈ ತಂತ್ರ ಉಪಯೋಗಿಸಿ ಅಪಧಮನಿಯ ರಿವಾಸ್ಕುಲರೈಸೇಶನ್ ಮಾಡಲು ನಿರ್ಧರಿಸಿತು. ಡಾ.ಎಂ.ಡಿ.ದೀಕ್ಷಿತ್, ಡಾ.ಅಮೃತ್ ನೇರ್ಲಿಕರ್, ಡಾ.ಅಭಿಷೇಕ್ ಜೋಶಿ, ಡಾ.ನಿಖಿಲ್ ದೀಕ್ಷಿತ್, ಡಾ.ಪ್ರಶಾಂತ್ ಎಂ.ಬಿ, ಡಾ.ಅವಿನಾಶ್ ಲೋಂಧೆ ಮತ್ತು ಡಾ.ಸೌಭಾಗ್ಯ ಭಟ್ ಅವರನ್ನೊಳಗೊಂಡ ಶಸ್ತ್ರಚಿಕಿತ್ಸಾ ತಂಡವು ತಾಯಿ ಹಾಗೂ ಮಗುವಿನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.