- ಜಗಳೂರಿನಲ್ಲಿ ಜೆರಾಕ್ಸ್ ಅಂಗಡಿ ನಡೆಸುವ ಸುರೇಶಯ್ಯಗೆ ಭಾರಿ ವಂಚನೆ
- ಇಂಥ ಮೂರ್ನಾಲ್ಕು ವಂಚನೆ ಪ್ರಕರಣ ನಡೆದಿವೆ ಎಂದಿರುವ ಮ್ಯಾನೇಜರ್- ಮಗನ ಶಾಲಾ ಶುಲ್ಕ ಕಟ್ಟಲು ಹಣ ಇಲ್ಲದಾಗಲೇ ಎದುರಾಯ್ತು ಸಾಲದ ಭೂತ
- - -ಕನ್ನಡಪ್ರಭ ವಾರ್ತೆ ಜಗಳೂರು
ಕಾರು ಸಾಲಕ್ಕಾಗಿ ಶ್ರೀರಾಮ ಫೈನಾನ್ಸ್‌ಗೆ ಯಾವುದೇ ದಾಖಲೆಗಳ ನೀಡಿ ಅರ್ಜಿಯೇ ಸಲ್ಲಿಸಿಲ್ಲ. ಆದರೂ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಬರೋಬ್ಬರಿ ₹8.40 ಲಕ್ಷವನ್ನು ವಾಣಿಜ್ಯ ವಾಹನ ಸಾಲವಾಗಿ ಮಂಜೂರು ಮಾಡಲಾಗಿದ್ದು, ಸಿಬಿಲ್ ಸ್ಕೋರ್ ಪರಿಶೀಲನೆ ವೇಳೆ ವ್ಯಕ್ತಿಗೆ ವಂಚಿಸಿರುವ ಪ್ರಕರಣ ಜಗಳೂರು ಪಟ್ಟಣದಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.
ಪಟ್ಟಣದ ಅಚ್ಯುತ ಬಡಾವಣೆಯಲ್ಲಿ ಜೆರಾಕ್ಸ್ ಅಂಗಡಿ ನಡೆಸುವ ಸುರೇಶಯ್ಯ ಸೈಬರ್ ಮಾದರಿಯ ಆಫ್‌ಲೈನ್ ವಂಚನೆಗೆ ಬಲಿಯಾದವರು. ಮಗನ ಶಾಲಾ ಶುಲ್ಕ ಪಾವತಿಸಲು ಹಣವಿಲ್ಲದೆ ಸುರೇಶಯ್ಯ ಸಂಕಷ್ಟದಲ್ಲಿದ್ದರು. ಇದರಿಂದಾಗಿ ಪರಿಚಿತ ಫೈನಾನ್ಸ್ ಸಿಬ್ಬಂದಿ ಬಳಿ ಸಮಸ್ಯೆ ಹೇಳಿಕೊಂಡಿದ್ದರು. ಆಗ ಆ ವ್ಯಕ್ತಿ ಸುರೇಶಯ್ಯಗೆ ಸಾಲ ನೀಡುವ ಮುನ್ನ ಅವರ ‘ಸಿಬಿಲ್ ಸ್ಕೋರ್’ ಪರಿಶೀಲಿಸಿದ್ದಾರೆ. ಆಗ ಸುರೇಶ್ ಹೆಸರಿಗೆ ವಾಹನ (ಕಾರು) ಸಾಲ ಮಂಜೂರಾಗಿರುವ ಅಸಲಿ ಸತ್ಯ ಹೊರಬಿದ್ದಿದೆ. ಇದರಿಂದ ಸುರೇಶಯ್ಯ ದಿಗ್ಭ್ರಮೆಗೊಂಡಿದ್ದಾರೆ!
2026ರ ಜೂನ್ 5ರಂದು ಸುರೇಶ್ ಹೆಸರಿನಲ್ಲಿ ₹8.40 ಲಕ್ಷ ‘ಕಮರ್ಷಿಯಲ್ ವೆಹಿಕಲ್ ಲೋನ್’ ಮಂಜೂರಾಗಿದೆ ಎಂದು ಆನ್‌ಲೈನ್‌ನಲ್ಲಿ ತೋರಿಸಿದೆ. ಈಗಾಗಲೇ ನಿಮ್ಮ ಹೆಸರಿನಲ್ಲಿ ದೊಡ್ಡ ಮೊತ್ತದ ಸಾಲವಿದೆ. ಇದರಿಂದಾಗಿ ನಿಮಗೆ ಹೊಸ ಸಾಲ ನೀಡಲು ಬರುವುದಿಲ್ಲ ಎಂದು ಪರಿಚಿತ ಖಾಸಗಿ ಫೈನಾನ್ಸ್‌ನವರು ತಿಳಿಸಿದ್ದಾರೆ.ಸಿಬಿಲ್ ಸ್ಕೋರ್ ಪರಿಶೀಲಿಸಿದಾಗ ಸಿಕ್ಕಿದ ಉತ್ತರದಿಂದ ದಿಗ್ಭ್ರಮೆಗೊಂಡ ಸುರೇಶಯ್ಯ ತಕ್ಷಣವೇ ಪೋಲಿಸ್ ಠಾಣೆ ಎದುರಿನ ಶ್ರೀರಾಮ ಫೈನಾನ್ಸ್ ಕಚೇರಿಗೆ ಧಾವಿಸಿ ವಿಚಾರಿಸಿದ್ದಾರೆ. ಆಗ ಅಲ್ಲಿನ ಮ್ಯಾನೇಜರ್ ಶಿವರಾಜ್ ಮಾತನಾಡಿ, "ನಾವು ನಿಮಗೆ ಸಾಲವನ್ನೇ ಕೊಟ್ಟಿಲ್ಲ, ಅದು ಹೇಗೆ ಸಾಧ್ಯ...? " ಎಂದು ಮರುಪ್ರಶ್ನೆ ಹಾಕಿದ್ದಾರೆ. ಅಲ್ಲದೇ, "ಜಗಳೂರು ತಾಲೂಕಿನಲ್ಲಿ ಇದೇ ರೀತಿ ಈಗಾಗಲೇ ಇಂಥ 4 ಪ್ರಕರಣ ಬೆಳಕಿಗೆ ಬಂದಿವೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ... " ಎಂದು ಮ್ಯಾನೇಜರ್ ತಿಳಿಸಿದ್ದಾರೆ.
ಈ ಅಕ್ರಮ ಜಾಲದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಸುರೇಶಯ್ಯ ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.- - -
-27ಜಗಳೂರು: ಸುರೇಶಯ್ಯ