ಸಾರಾಂಶ
- ಹರಿಹರ ಸರ್ಕಾರಿ ಕಾಲೇಜಿನಲ್ಲಿ ‘ಕನ್ನಡ ಭಾಷೆ- ಸಾಹಿತ್ಯ- ತಾತ್ವಿಕತೆ’ ಉಪನ್ಯಾಸ
- - -ಕನ್ನಡಪ್ರಭ ವಾರ್ತೆ ಹರಿಹರ
ದಾರ್ಶನಿಕರು, ಕಾವ್ಯಕಾರರು, ವಚನಕಾರರು, ಜನಪದ ಸಾಹಿತ್ಯಗಾರರು ತಮ್ಮ ಸಾಹಿತ್ಯದಲ್ಲಿ ಬದುಕಿನ ತಾತ್ವಿಕತೆಯನ್ನು ನಿರಂತರ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಶ್ರದ್ಧೆ ಮತ್ತು ಕಾಯಕವೇ ನಿಜಭಕ್ತಿ ಎಂಬ ಅಂಶವನ್ನು ಗುರುತಿಸಬಹುದಾಗಿದೆ ಎಂದು ಅಜ್ಜಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಮಂಜುನಾಥ್ ಬಿ. ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಐಕ್ಯೂಎಸಿ, ಕನ್ನಡ ಮತ್ತು ಇಂಗ್ಲಿಷ್ ವಿಭಾಗದ ಮಾಲ್ಗುಡಿ ಸಾಹಿತ್ಯ ವೇದಿಕೆ ಸಹಯೊಗದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ಭಾಷೆ- ಸಾಹಿತ್ಯ- ತಾತ್ವಿಕತೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಸಾಹಿತ್ಯ, ವಚನ ಸಾಹಿತ್ಯ, ವ್ಯಾಸ ಸಾಹಿತ್ಯ, ದಾಸ ಸಾಹಿತ್ಯ ಸೇರಿದಂತೆ ಇಂದಿನ ಆಧುನಿಕ ಸಾಹಿತ್ಯ ಪ್ರಕಾರದಲ್ಲೂ ಮನುಕುಲದ ಸರ್ವಕಾಲೀಕ ಬದುಕಿನ ಮೌಲ್ಯದ ಸ್ವಾರಸ್ಯವನ್ನೇ ಸಾರುತ್ತಿವೆ ಎಂದು ಸಾಹಿತ್ಯದ ತಾತ್ವಿಕ ನೆಲೆಗಳಾದ ತಾತ್ವಿಕತೆ ಎಂದರೆ ಸತ್ಯ, ನೈತಿಕತೆ, ವಾಸ್ತವತೆ ಮತ್ತು ಅಸ್ತಿತ್ವದಂತಹ ಆಳವಾದ ಪ್ರಶ್ನೆಗಳ ಬಗ್ಗೆ ತಾರ್ಕಿಕವಾಗಿ, ವ್ಯವಸ್ಥಿತವಾಗಿ ಚಿಂತಿಸುವ ಮತ್ತು ವಿಶ್ಲೇಷಿಸುವ ಪ್ರಕ್ರಿಯೆಯಾಗಿದೆ ಎಂದರು.ಸಾಹಿತ್ಯವು ಭಾಷೆ ಮತ್ತು ತಾತ್ವಿಕತೆಯ ನಡುವೆ ಗಾಢವಾದ ಸಂಬಂಧ ಹೊಂದಿದೆ. ಭಾಷೆಯು ಸಾಹಿತ್ಯದ ಮೂಲಭೂತ ಸಾಧನವಾಗಿದೆ. ಇದು ಆಲೋಚನೆಗಳನ್ನು, ಭಾವನೆಗಳನ್ನು, ತತ್ವಗಳನ್ನು ವ್ಯಕ್ತಪಡಿಸುತ್ತದೆ. ಸಾಹಿತ್ಯವು ಭಾಷೆಯನ್ನು ಸೃಜನಾತ್ಮಕವಾಗಿ ಬಳಸುವ ಮೂಲಕ ಜೀವನ, ಸಮಾಜ ಮತ್ತು ಮಾನವ ಅಸ್ತಿತ್ವದ ಬಗ್ಗೆ ಆಳವಾದ ತಾತ್ವಿಕ ಚಿಂತನೆಗಳನ್ನು ನೀಡುತ್ತದೆ. ಹಳೇಗನ್ನಡದ ಪಂಪ ಭಾರತ, ಕುವೆಂಪು ಅವರ ರಾಮಾಯಣದರ್ಶನಂ ನಂತಹ ಮಹಾಪೂರಣಗಳನ್ನು ಉಲ್ಲೇಖಿಸಿ ಇಂದಿನ ರಾಜಕೀಯ ಸನ್ನಿವೇಶಗಳನ್ನು ಕಾಣಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎಂ. ಯೋಗೀಶ್ ಮಾತನಾಡಿ, ಅನುವಾದ ಜ್ಞಾನದ ವಿಸ್ತರಣೆಗೆ ಸಾಕಷ್ಟು ಸಹಾಯಕವಾಗಿದೆ. ವಿವಿಧ ಭಾಷೆಗಳಲ್ಲಿ ಸಂವಹನ ಮತ್ತು ಸಾಂಸ್ಕೃತಿಕ ತಿಳುವಳಿಕೆಯನ್ನು ಸುಗಮಗೊಳಿಸಲು, ಜ್ಞಾನದ ಪ್ರಸರಣೆಯನ್ನು ಸಕ್ರಿಯಗೊಳಿಸಲು ಅನುವಾದವು ಮುಖ್ಯವಾಗಿದೆ ಎಂದು ಅಭಿಪ್ರಾಯಿಸಿದರು.ಐ.ಕ್ಯೂ.ಎ.ಸಿ. ಸಂಯೋಜಕ ಡಾ. ಎಚ್.ಪಿ. ಅನಂತನಾಗ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಎಚ್.ಎಸ್. ಕೃಪಾಲ್, ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಎಂ.ಎಸ್. ಗೌರಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಕ್ಯೂ.ಎ.ಸಿ ಸಹ ಸಂಯೋಜಕ ಅಬ್ದುಲ್ ಬಷೀರ್ ಅತಿಥಿಗಳ ಪರಿಚಯ ಮಾಡಿದರು. ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಸ್.ಗಂಗರಾಜು, ಇಂಗ್ಲಿಷ್‌ನ ಸಹಾಯಕ ಪ್ರಾಧ್ಯಾಪಕ ಕೆ.ಎಸ್. ಮನೋಹರ್, ಕನ್ನಡದ ಸಹಾಯಕ ಪ್ರಾಧ್ಯಾಪಕ ಜಿ.ಪಿ. ರಾಘವೇಂದ್ರ, ಉಪನ್ಯಾಸಕರಾದ ಉಷಾ ಬೆಳ್ಳಕ್ಕಿ ಕೆ.ಪಿ., ಡಾ.ಮಹಾಂತೇಶ ಎಸ್.ಆರ್. ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಅರ್ಪಿತಾ ಪ್ರಾರ್ಥಿಸಿದರು. ಉಮ್ಲಾವರ ಸ್ವಾಗತಿಸಿ, ರಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು. ಎ.ಲಕ್ಷ್ಮೀ ವಂದಿಸಿದರು.- - -
-10HRR.01.ಜೆಪಿಜಿ:ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಕನ್ನಡ ಮತ್ತು ಇಂಗ್ಲಿಷ್ ವಿಭಾಗದ ಮಾಲ್ಗುಡಿ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ಕನ್ನಡ ಭಾಷೆ- ಸಾಹಿತ್ಯ- ತಾತ್ವಿಕತೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
;Resize=(128,128))
;Resize=(128,128))
;Resize=(128,128))