ರಕ್ತದಾನ ಶಿಬಿರ ಆಯೋಜನೆ ಜನಸೇವಕನ ನಿಜವಾದ ಸ್ಮರಣೆ: ಗೀತಾ ವಾಗ್ಳೆ

| Published : Sep 04 2024, 01:46 AM IST

ಸಾರಾಂಶ

ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಮಂಜುನಾಥ್ ಉದ್ಯಾವರ್ ಅವರ 12ನೇ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಉದ್ಯಾವರ

ತನ್ನ ಜೀವಮಾನ ಇಡೀ ಜನಪರ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಬಾಳಿ ಬದುಕಿದ ಜನಸೇವಕ ಮಂಜುನಾಥ ಉದ್ಯಾವರ ಸ್ಮರಣೆಯನ್ನು ರಕ್ತದಾನ ಶಿಬಿರದ ಮೂಲಕ ಮಾಡುತ್ತಿರುವುದು ಜನಸೇವಕನಿಗೆ ಸಂದ ನಿಜವಾದ ಗೌರವ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಗೀತಾ ವಾಗ್ಳೆ ಹೇಳಿದರು.ಅವರು ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಮಂಜುನಾಥ್ ಉದ್ಯಾವರ್ ಅವರ 12ನೇ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿ ಶ್ರೀ ನಾರಾಯಣಗುರು ಯುವ ವೇದಿಕೆಯ ಗೌರವಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ ಅವರು ಮಾತಾನಾಡಿ, ನಮ್ಮ ಇತ್ತೀಚಿಗಿನ ಒತ್ತಡದ ಬದುಕಲ್ಲಿ ನಾವು ಯಾವುದೇ ಆತ್ಮೀಯರನ್ನು ಕಳಕೊಂಡರು ಶೀಘ್ರದಲ್ಲಿ ಮರೆತುಬಿಡುತ್ತೇವೆ. ಆದರೆ ಭೇದಭಾವ ಇಲ್ಲದೆ ಜನಸಮುದಾಯದ ಸೇವೆಗೆ ಬದುಕನ್ನು ಮೀಸಲಿಟ್ಟ ಮಂಜಣ್ಣ ಇಂದಿಗೂ ಎಲ್ಲರ ಮನದಲ್ಲಿ ಬದುಕಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ವಹಿಸಿದ್ದರು.

ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಅಲೆವೂರು ದಿನೇಶ್ ಕಿಣಿ ಉಪಸ್ಥಿತರಿದ್ದರು

ಜಿಲ್ಲಾಸ್ಪತ್ರೆಯ ರಕ್ತನಿಧಿಯ ಮುಖ್ಯಸ್ಥೆ ಡಾ. ವೀಣಾ, ರಕ್ತದಾನ ಮಹತ್ವವನ್ನು ಸಭೆಯ ಮುಂದೆ ಬಿಡಿಸಿ ತಿಳಿಸಿದರು.

ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ತಿಲಕರಾಜ್ ಸಾಲ್ಯಾನ್ ಸ್ವಾಗತಿಸಿದರು. ಕೊನೆಯಲ್ಲಿ ಸಂಘಟನಾ ಕಾರ್ಯದರ್ಶಿ ಸುಹೇಲ್ ರೆಹಮತುಲ್ಲಾ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಅಬಿದ್ ಆಲಿ ಕಾರ್ಯಕ್ರಮ ನಿರ್ವಹಿಸಿದರು.

ಶಿಬಿರದಲ್ಲಿ 96 ಯೂನಿಟ್ ರಕ್ತ ಸಂಗ್ರಹವಾಯಿತು.