ಬಾಳೆಹೊನ್ನೂರುಜೀವನದಲ್ಲಿ ಏನೇ ಮರೆತರೂ ನಾವು ನಡೆದು ಬಂದ ದಾರಿಯನ್ನು ಮರೆಯಬಾರದು. ಧರ್ಮ ಸತ್ಯ ಮತ್ತು ಅಹಿಂಸೆ ಆಧರಿಸಿದೆ. ಮನಸ್ಸಿನ ಕಲ್ಮಶ ಕಳೆಯುವುದೇ ನಿಜವಾದ ಆಧ್ಯಾತ್ಮ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದ ಸಾನ್ನಿಧ್ಯ ವಹಿಸಿ ಆಶೀರ್ವಚನ
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರುಜೀವನದಲ್ಲಿ ಏನೇ ಮರೆತರೂ ನಾವು ನಡೆದು ಬಂದ ದಾರಿಯನ್ನು ಮರೆಯಬಾರದು. ಧರ್ಮ ಸತ್ಯ ಮತ್ತು ಅಹಿಂಸೆ ಆಧರಿಸಿದೆ. ಮನಸ್ಸಿನ ಕಲ್ಮಶ ಕಳೆಯುವುದೇ ನಿಜವಾದ ಆಧ್ಯಾತ್ಮ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ರಂಭಾಪುರಿ ಪೀಠದಲ್ಲಿ ಸೋಮವಾರ ನಡೆದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಉತ್ತಮ ಹೃದಯ ಉತ್ತಮ ಸಂಬಂಧಗಳಿಗೆ ಕಾರಣವಾದರೆ ಒಳ್ಳೆಯ ಗುಣ ಒಳ್ಳೆಯ ಹೃದಯ ದೊರಕಿಸಿಕೊಡುತ್ತದೆ. ಬದುಕುವುದಕ್ಕಾಗಿ ಸಂಪತ್ತಿರಲಿ.ಸಂಪತ್ತಿಗಾಗಿ ಬದುಕು ಆಗ ಬಾರದು. ಜೀವನದ ಕೆಲವು ಸಮಸ್ಯೆ ಗಳಿಗೆ ನಾವು ನಡೆದು ಬಂದ ದಾರಿ ಹಾಗೂ ತೆಗೆದುಕೊಂಡ ನಿರ್ಧಾರಗಳೇ ಕಾರಣ ವಾಗಿರುತ್ತವೆ.ಅವಕಾಶ ಸಿಕ್ಕಾಗ ಇನ್ನೊಬ್ಬರಿಗೆ ಸಹಾಯ ಮಾಡಲು ಹಿಂಜರಿಯಬಾರದು. ನೀವು ಮಾಡಿದ ಸಹಾಯ ಬೇರೊಂದು ರೂಪ ದಲ್ಲಿ ನಿಮಗೆ ಬಂದು ತಲುಪುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮನದ ಕೊಳೆ ಕಳೆದು ಶಿವಜ್ಞಾನದ ಅರಿವು ಮೂಡಿಸಿದ ಆಚಾರ್ಯ ಶ್ರೇಷ್ಠರು. ಅವರು ತೋರಿದ ದಾರಿ ಮತ್ತು ಬೋಧಿಸಿದ ಆದರ್ಶ ಚಿಂತನೆ ಜನಾಂಗಕ್ಕೆ ಆಶಾಕಿರಣ ಎಂದರು.
ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿ ಮಾತನಾಡಿ ಕೊಳಕು ನೀರು ಹರಿಸಿದ ಮಾತ್ರಕ್ಕೆ ಗಿಡ ಬೆಳೆಯುವುದು ನಿಲ್ಲಿಸಲ್ಲ. ಹಾಗೆಯೇ ನಕಾರಾತ್ಮಕ ಮಾತು ಗಳು ನಮ್ಮ ಬೆಳವಣಿಗೆ ತಡೆಯಲು ಸಾಧ್ಯವಿಲ್ಲ. ನೆರಳು ಮತ್ತು ಹಣ್ಣು ನೀಡುವ ಮೂಲಕ ಜನರ ಬಾಳು ತಂಪಾಗಿಸುವ ವೃಕ್ಷ ದಂತೆ ಮನುಷ್ಯರು ಸ್ವಾರ್ಥ ಬುದ್ಧಿ ತೊರೆದು ಇತರರಿಗೆ ಉಪಕಾರವಾಗುವಂತೆ ಬಾಳಿದಾಗಲೇ ಜೀವನ ಸಾರ್ಥಕ ಗೊಳ್ಳುವುದು. ಶ್ರೀ ಜಗದ್ಗುರು ರೇಣುಕಾಚಾರ್ಯರ ಲೀಲೆ ಪವಾಡಗಳು ಒಂದಲ್ಲ. ನೂರಾರು. ಅವರ ಅರಿವಿನ ದಾರಿ ಜೀವಾತ್ಮರ ಬಾಳಿಗೆ ಬೆಳಕು ತೋರುವುದು ಎಂದರು.ಅಂಬಾ ಜೋಗಾಯಿ ಶಂಭುಲಿಂಗ ಶಿವಾಚಾರ್ಯ ಸ್ವಾಮಿ ಮಾತನಾಡಿ ಪರಿಸ್ಥಿತಿ ಬದಲಿಸುವುದು ಕಷ್ಟವಾದಾಗ ಮನಸ್ಥಿತಿ ಬದಲಿಸಿವುದು ಒಳ್ಳೆಯದು. ನೂರು ಟೀಕೆಗಳಿಂದ ಮಾಡಲಾಗದ ಪರಿವರ್ತನೆ ಒಂದು ಒಳ್ಳೆಯ ಮಾತಿನಿಂದ ಸಾಧಿಸಲು ಸಾಧ್ಯ ಎಂದರು.
ರಾಯಚೂರು ಕಿಲ್ಲಾ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು ಮತ್ತು ಕರ್ಜಿಗಿ ಮಠದ ಸೋಮನಾಥ ಶಿವಾಚಾರ್ಯರು ಉಪಸ್ಥಿತರಿದ್ದರು. ಲೋಕಕಲ್ಯಾಣಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಬಂದ ಭಕ್ತರಿಗೆ ಶುಭ ಹಾರೈಸಿದರು. ೨೪ಬಿಹೆಚ್‌ಆರ್ ೩: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಲೋಕಕಲ್ಯಾಣಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಬಂದ ಭಕ್ತರಿಗೆ ಶುಭ ಹಾರೈಸಿದರು.