ಸಾರಾಂಶ
ಮಾಣಿ ಪೆರಾಜೆ ಬಾಲವಿಕಾಸ ಅಂಗ್ಲಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ ನಡೆಯಿತು. ಸಭೆಯಲ್ಲಿ ವಿಶ್ವಾಸ ನಿಧಿ ಯೋಜನೆಯ ಕುರಿತು ಮಾಣಿ ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಪ್ರಹ್ಲಾದ್ ಜೆ.ಶೆಟ್ಟಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಪೋಷಕರ ಆರ್ಥಿಕ ಅನುಕೂಲಕ್ಕಾಗಿ "ವಿಶ್ವಾಸ ನಿಧಿ " ಯೋಜನೆಯನ್ನು ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಅನುಷ್ಠಾನಗೊಳಿಸಿದ್ದೇವೆ ಎಂದು ಮಾಣಿ ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಪ್ರಹ್ಲಾದ್ ಜೆ.ಶೆಟ್ಟಿ ಹೇಳಿದ್ದಾರೆ.ಮಾಣಿ ಪೆರಾಜೆ ಬಾಲವಿಕಾಸ ಅಂಗ್ಲಮಾಧ್ಯಮ ಶಾಲೆಯಲ್ಲಿ ಭಾನುವಾರ ನಡೆದ ಪೋಷಕರ ಸಭೆಯಲ್ಲಿ ನೂತನ ವಿಶ್ವಾಸ ನಿಧಿ ಯೋಜನೆಯ ಕುರಿತು ಅವರು ಮಾತನಾಡಿದರು.
ವಿಶ್ವಾಸ ನಿಧಿ ಯೋಜನೆಯಲ್ಲಿ ತೊಡಗಿಸಿಕೊಂಡವರು ಮಕ್ಕಳ ಬಗೆಗಿನ ಕನಸುಗಳನ್ನು ಸಾಕಾರಗೊಳಿಸಲು ಸುಲಭ ಸಾಧ್ಯವಿದೆ. ಈ ನಿಟ್ಟಿನಲ್ಲಿ ಪೋಷಕರು ಹೆಚ್ಚಿನ ಚಿಂತನೆ ನಡೆಸಿ ವಿಶ್ವಾಸ ನಿಧಿ ಯೋಜನೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ, ಗ್ರಾಮೀಣ ಮಕ್ಕಳಿಗೂ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ಸಿಗಬೇಕು ಎನ್ನುವ ಕನಸನ್ನು ಹೊತ್ತ ಪ್ರಹ್ಲಾದ್ ಶೆಟ್ಟಿ ಕನಸು ಬಾಲವಿಕಾಸ ಶಾಲೆ, ಇದೀಗ ಪೋಷಕರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ವಿಶ್ವಾಸ ನಿಧಿ ಯೋಜನೆ ಪೋಷಕರಲ್ಲಿ ಆತ್ಮವಿಶ್ವಾಸ ತುಂಬಲಿದೆ ಎಂದರು.
ಮುಖ್ಯೋಪಾಧ್ಯಾಯಿನಿ ಸುಪ್ರಿಯಾ ಡಿ. ಯೋಜನೆಯ ಬಗ್ಗೆ ವಿವರ ನೀಡಿದರು. ಹತ್ತನೇ ತರಗತಿ ವರೆಗಿನ ಗುಣಾತ್ಮಕ ಶಿಕ್ಷಣವನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ವಿಶ್ವಾಸ ನಿಧಿ ಯೋಜನೆ ಮಕ್ಕಳಿಗೆ ಹೆಚ್ಚು ಅನುಕೂಲಕರ ಎಂದ ಅವರು, ಯೋಜನೆಯಿಂದ ಸಿಗುವ ಉಪಯೋಗಗಳನ್ನು ಪೋಷಕರ ಮುಂದಿಟ್ಟರು. ನರ್ಸರಿಯಿಂದ ತೊಡಗಿ, 7 ನೇ ತರಗತಿ ವರೆಗಿನ ಮಕ್ಕಳ ಪೋಷಕರು, ಟ್ರಸ್ಟ್ ನಿಗದಿ ಪಡಿಸಿರುವ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಿದರೆ ಮುಂದೆ 10ನೇ ತರಗತಿವರೆಗೆ ಯಾವುದೇ ಹಣ ಪಾವತಿಸುವ ಅವಶ್ಯಕತೆ ಇಲ್ಲ. ವಿಶ್ವಾಸ ನಿಧಿಯ ಮಕ್ಕಳಿಗೆ ಪುಸ್ತಕ ಖರೀದಿ, ಯೂನಿಫಾರಂ, ಮಧ್ಯಾಹ್ನದ ಊಟದ ಶುಲ್ಕಗಳಿಗೂ ವಿಶೇಷ ರಿಯಾಯಿತಿ ನೀಡುವುದಾಗಿ ಪ್ರಕಟಿಸಿದರು.ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಜೆ ಶೆಟ್ಟಿಯವರು ಮಾತನಾಡಿ, ಪೋಷಕರಿಂದ ಕೇಳಿಬಂದ ಪ್ರಶ್ನೆಗಳಿಗೆ ಉತ್ತರಿಸಿದರು, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮಹಮ್ಮದ್ ಯಾಸೀರ್ ಇದ್ದರು