ಸಾರಾಂಶ
ಧಾರವಾಡ:
ಸಾರ್ವಜನಿಕರೊಂದಿಗೆ ಉತ್ತಮ ನಡುವಳಿಕೆಯಿಂದ ವರ್ತಿಸಿ, ಪೊಲೀಸರು ಸಾರ್ವಜನಿಕರ ವಿಶ್ವಾಸ ಗಳಿಸುವುದರಿಂದ ಅಪರಾಧ ಪ್ರಕರಣ ನಿಯಂತ್ರಿಸಲು ಮತ್ತು ಅಪರಾಧಿ ಪತ್ತೆ ಮಾಡಲು ಸಹಾಯವಾಗುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ. ರಮಾ ಹೇಳಿದರು.ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಹುತಾತ್ಮ ಪೊಲೀಸ್‌ರ ಸ್ಮರಣೆಗಾಗಿ ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿದ ಅವರು, ಸಮಾಜದ ಆಂತರಿಕ ಭದ್ರತೆ ಕಾಪಾಡುತ್ತಿರುವ ಮತ್ತು ಒತ್ತಡ ನಡುವೆಯೂ ಜನರ ಸುರಕ್ಷತೆಗೆಗಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸರ ಕರ್ತವ್ಯ ನಿಷ್ಠೆ ಶ್ಲಾಘನೀಯ. ಸಮಾಜದ ರಕ್ಷಣೆ, ಶಾಂತಿಗೆ ಶ್ರಮಿಸುವ ಪೊಲೀಸ್ ಇಲಾಖೆಯೊಂದಿಗೆ ಸಮಾಜದ ಎಲ್ಲರೂ ಇದ್ದಾರೆ ಎಂದರು.
ನಿತ್ಯ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ತಮ್ಮ ಆರೋಗ್ಯ, ಕುಟುಂಬದ ಬಗ್ಗೆಯೂ ಗಮನಹರಿಸಬೇಕು. ಒಳ್ಳೆಯ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ವ್ಯಾಯಾಮ, ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಧಾರವಾಡ ಐಐಟಿ ಓಟರೀಚ್ ವಿಭಾಗದ ಡೀನ್ ಪ್ರೊ. ಎಸ್.ಎಂ. ಶಿವಪ್ರಸಾದ ಮಾತನಾಡಿ, ರಾಷ್ಟದ ಗಡಿ ಕಾಯುವ ಯೋಧರು ಬಾಹ್ಯ ದುಷ್ಟ ಶಕ್ತಿಗಳಿಂದ ರಾಷ್ಟ್ರ ರಕ್ಷಿಸುವಂತೆ, ಪೊಲೀಸರು ರಾಷ್ಟ್ರದೊಳಗಿನ ದುಷ್ಟಶಕ್ತಿಗಳನ್ನು ಮಟ್ಟಹಾಕಿ, ಆಂತರಿಕ ಭದ್ರತೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಸಮಾಜಘಾತುಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕರ್ತವ್ಯ ಬದ್ಧತೆಯಿಂದ ಬಲಿದಾನದಂತಹ ಘಟನೆಗಳು ಜರುಗುತ್ತಿವೆ. ಬಲಿದಾನಗೈದ ಪೊಲೀಸರ ಶ್ರಮ ಸ್ಮರಿಸಬೇಕು ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಕರ್ತವ್ಯದ ಮೇಲೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿ ಅಧಿಕಾರಿಗಳನ್ನು ಸ್ಮರಿಸಿದರು. ಮತ್ತು ದೇಶಕ್ಕಾಗಿ ಹೋರಾಡುತ್ತಾ ವೀರ ಮರಣ ಹೊಂದಿದ್ದ ಪೊಲೀಸರ ಸ್ಮರಣೆಗಾಗಿ ಸ್ಮಾರಕವನ್ನು ಲಡಾಕ್‌ನ ಬಾಸಿ ಚೀನಾ ಭಾಗದಲ್ಲಿ ಸ್ಥಾಪಿಸಲಾಗಿದೆ. ಕರ್ತವ್ಯದಲ್ಲಿದ್ದಾಗ ಹುತಾತ್ಮರರಾದ ಪೊಲೀಸರನ್ನು ದೇಶದಾದ್ಯಂತ ಎಲ್ಲ ಘಟಕಗಳಲ್ಲಿ ಸ್ಮರಿಸಲಾಗುತ್ತಿದೆ ಎಂದು ಹೇಳಿದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಬರಮನಿ ಇದ್ದರು. ಆನಂದಕುಮಾರ.ಬಿ., ವೈ.ಎಂ. ದೊಡ್ಡಮನಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಮೌನಾಚರಣೆ ಮಾಡಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹುತಾತ್ಮ ಯೋಧ ಹುಚ್ಚೇಶ ಹನುಮಂತಪ್ಪ ಮಲ್ಲನ್ನವರ ತಂದೆ ಹನುಮಂತಪ್ಪ, ತಾಯಿ, ಸಹೋದರಿ ನಾಗರತ್ನಾ, ಅವರ ಚಿಕ್ಕಪ್ಪ ಹಾಗೂ ಹುತಾತ್ಮರಾದ ಪೊಲೀಸರ ಕುಟುಂಬ ಸದಸ್ಯರು, ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹುತಾತ್ಮ ಪೊಲೀಸ್ ಯೋಧರಿಗೆ ನಮನ ಸಲ್ಲಿಸಿದರು.