ಮಕ್ಕಳ ಮನಸ್ಸಿನಲ್ಲಿ ಕನ್ನಡ ಬಿತ್ತಲು ಪ್ರಯತ್ನಿಸಿ

| Published : Mar 11 2025, 12:48 AM IST

ಸಾರಾಂಶ

ತೀರ್ಥಹಳ್ಳಿ: ಪ್ರಸ್ತುತ ಕನ್ನಡ ನಾಡಿನ ಮಧ್ಯಮ ವರ್ಗ ಇಂಗ್ಲೀಷ್ ಭಾಷೆಯ ಹಿಂದೆ ಬಿದ್ದಿದ್ದು, ಭಾಷೆ ಮತ್ತು ಶಿಕ್ಷಣ ವ್ಯಾಪಾರಿ ಸರಕುಗಳಾಗಿವೆ. ಇಲ್ಲಿ ಉಪಯುಕ್ತತೆಯೇ ಮಾನದಂಡವಾಗಿರುವ ಕಾರಣ ಕನ್ನಡ ಅನ್ನದ ಭಾಷೆಯಾಗಿಲ್ಲ. ಈ ಹಂತದಲ್ಲಿ ಕನ್ನಡಿಗರಾದ ನಾವುಗಳು ಕೈ ಚೆಲ್ಲಿ ಕೂರದೇ ಕನ್ನಡದ ಬೀಜವನ್ನು ಎಳವೆಯಲ್ಲೇ ಮಕ್ಕಳ ಮನಸ್ಸಿನಲ್ಲಿ ಕನ್ನಡವನ್ನು ಬಿತ್ತುವ ಪ್ರಯತ್ನ ಮಾಡಬೇಕಿದೆ ಎಂದು ತಾಲೂಕಿನ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ, ಸಾಹಿತಿ ಕೆ.ಆರ್.ಉಮಾದೇವಿ ಉರಾಳ್ ಹೇಳಿದರು.

ತೀರ್ಥಹಳ್ಳಿ: ಪ್ರಸ್ತುತ ಕನ್ನಡ ನಾಡಿನ ಮಧ್ಯಮ ವರ್ಗ ಇಂಗ್ಲೀಷ್ ಭಾಷೆಯ ಹಿಂದೆ ಬಿದ್ದಿದ್ದು, ಭಾಷೆ ಮತ್ತು ಶಿಕ್ಷಣ ವ್ಯಾಪಾರಿ ಸರಕುಗಳಾಗಿವೆ. ಇಲ್ಲಿ ಉಪಯುಕ್ತತೆಯೇ ಮಾನದಂಡವಾಗಿರುವ ಕಾರಣ ಕನ್ನಡ ಅನ್ನದ ಭಾಷೆಯಾಗಿಲ್ಲ. ಈ ಹಂತದಲ್ಲಿ ಕನ್ನಡಿಗರಾದ ನಾವುಗಳು ಕೈ ಚೆಲ್ಲಿ ಕೂರದೇ ಕನ್ನಡದ ಬೀಜವನ್ನು ಎಳವೆಯಲ್ಲೇ ಮಕ್ಕಳ ಮನಸ್ಸಿನಲ್ಲಿ ಕನ್ನಡವನ್ನು ಬಿತ್ತುವ ಪ್ರಯತ್ನ ಮಾಡಬೇಕಿದೆ ಎಂದು ತಾಲೂಕಿನ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ, ಸಾಹಿತಿ ಕೆ.ಆರ್.ಉಮಾದೇವಿ ಉರಾಳ್ ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸೋಮವಾರ ಆರಂಭಗೊಂಡ ಎರಡು ದಿನಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಮಾತನಾಡಿದರು.

ಶಿಕ್ಷಣದಲ್ಲಿ ನೈತಿಕತೆಯೂ ಧೂಳಿಪಟವಾಗಿದ್ದು ಈ ಕೊರತೆಯನ್ನು ತುಂಬಿಸುವಲ್ಲಿ ಅಧ್ಯಾಪಕರು ಗಮನ ಹರಿಸಬೇಕಿದೆ. ಪ್ರಸಕ್ತ ದಿನಮಾನಗಳಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿ ಹಿಂಸಾ ಪ್ರವೃತ್ತಿಗಳಲ್ಲಿ ತೊಡಗುವ ಮತ್ತು ತೀರಾ ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವ ಕಳವಳಕಾರಿ ಬೆಳವಣಿಗೆ ಅತ್ಯಂತ ಆತಂಕಕಾರಿ ಸಂಗತಿಯಾಗಿದೆ ಎಂದರು.ಮಕ್ಕಳಿಗೆ ನೀಡುವ ಶಿಕ್ಷಣದಲ್ಲಿ ಮನುಷ್ಯತ್ವವನ್ನು ರೂಪಿಸಿ ಚಾರಿತ್ರ್ಯವನ್ನು ರೂಪಿಸುವ ಶಿಕ್ಷಣದ ಅನಿವಾರ್ಯತೆ ಇದೆ. ಶಿಕ್ಷಣದಲ್ಲಿ ಅಂಕ ಪ್ರಾಧಾನ್ಯತೆ, ಅಪ್ರಸ್ತುತ ಅಂಶಗಳ ಪಠ್ಯಗಳು, ಬದುಕು ರೂಪಿಸದ ಶಿಕ್ಷಣ, ವಿದ್ಯುನ್ಮಾನ ಮಾಧ್ಯಮಗಳ ಲೈಂಗಿಕ ಪ್ರಚೋದನೆ ಮತ್ತು ಅನುಕರಣೀಯ ಮಾದರಿ ವ್ಯಕ್ತಿಗಳ ಅಭಾವ ಇರುವುದು ದುರದೃಷ್ಟಕರವಾಗಿದೆ. ಅತ್ಯಾಚಾರ ದೌರ್ಜನ್ಯಗಳಿಗೆ ಶಾಲಾ ಮಕ್ಕಳು ಬಲಿಯಾಗುತ್ತಿರುವುದು ದುರಂತ. ಈ ಕುರಿತು ಪೋಷಕರು ಗಮನ ಹರಿಸಬೇಕಿದ್ದು, ಲಿಂಗ ಸಮಾನತೆಯ ಅನುಷ್ಠಾನ ಮೊದಲ ಅಗತ್ಯವಾಗಿದೆ. ಹೆಣ್ಣು ಮಕ್ಕಳಿಗೆ ಹೊಣೆಗಾರಿಕೆಯಿಂದ ನಡೆಯುವ ವಿವೇಚನೆಯನ್ನೂ ಮೂಡಿಸಬೇಕಿದೆ ಎಂದು ಹೇಳಿದರು.ವಿದ್ಯುನ್ಮಾನ ಮಾಧ್ಯಮಗಳಿಂದ ಬೆರಳ ತುದಿಯಲ್ಲಿ ಯಾವುದೇ ಮಾಹಿತಿಯನ್ನು ಪಡೆಯಲು ಸಾಧ್ಯವಿರುವಾಗ ಗುರು-ಶಿಷ್ಯರ ನಡುವಿನ ಸಂಬಂಧ ಬೇರೊಂದು ಆಯಾಮದಲ್ಲಿ ರೂಪುಗೊಳ್ಳಬೇಕಿದೆ. ಪಠ್ಯವನ್ನು ಮೀರಿದ ಅರಿವು ಭಾವನೆಯೊಂದಿಗೆ ಮಾನವೀಯತೆಯ ಸ್ಪಂದನೆಯನ್ನು ಬೆಸೆಯುವ ಬಾಂಧವ್ಯ ಇಂದಿನ ಅಗತ್ಯ ಎಂದರು.ನೈಸರ್ಗಿಕ ಸಂಪತ್ತನಿಂದ ಸಮೃದ್ಧವಾಗಿದ್ದ ಮಲೆನಾಡಿಗೆ ಅದರ ಪ್ರಕೃತಿ ಸಂಪತ್ತೇ ಮುಳುವಾಗಿದೆ. ಜಲವಿದ್ಯುತ್ ಮತ್ತು ನೀರಾವರಿ ಯೋಜನೆಗಳಿಗೆ ಬೃಹತ್ ಪ್ರಮಾಣದ ಅರಣ್ಯ ಆಪೋಶನವಾಗಿದೆ. ಅಳಿದುಳಿದ ಕಾಡುಗಳಲ್ಲಿ ನೈಸರ್ಗಿಕ ಮರಗಳಿಗೆ ಬದಲಾಗಿ ಕೃತಕ ಕಾಡು ಕಣ್ಣಿಗೆ ರಾಚುತ್ತಿದೆ. ಇದರ ಪರಿಣಾಮವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕುವೆಂಪು ವರ್ಣನೆಯ ಹಸಿರು ಮುಕ್ಕಳಿಸುವ ಮಲೆನಾಡಿನ ಕಾಡು ಇಂದು ನಮಗೆ ಸಾಹಿತ್ಯದ ಓದಿನಲ್ಲಿ ಮಾತ್ರ ಲಭ್ಯ ಎಂಬಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷರಿಗೆ ಕನ್ನಡ ಧ್ವಜವನ್ನು ಹಸ್ತಾಂತರಿಸಿ ಮಾತನಾಡಿದ 10ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಂ.ನವೀನ್ ಕುಮಾರ್, ಸಾಹಿತ್ಯ ಸಮ್ಮೇಳನಗಳಲ್ಲಿ ತೆಗೆದುಕೊಳ್ಳಲಾಗುವ ನಿರ್ಣಯಗಳು ಕಸದ ಬುಟ್ಟಿಗೆ ಸೇರದೇ ಜಾರಿಗೆ ಬರುವಂತಾಗಬೇಕು ಎಂದು ಒತ್ತಾಯಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಈ ಮಣ್ಣಿನ ಕಣಕಣದಲ್ಲಿ ಸಾಹಿತ್ಯದ ಬೇರು ಅಡಗಿದೆ. ಸಾಹಿತ್ಯದ ಪರಂಪರೆಯ ಕೊಂಡಿ ಕಳಚದಂತೆ ಮುಂದುವರೆಸುವ ಹೊಣೆಗಾರಿಕೆ ಸಾಹಿತ್ಯಾಸಕ್ತರ ಮೇಲಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಶುದ್ಧ ಸಾಹಿತ್ಯದ ಬಗ್ಗೆ ಚರ್ಚೆಯಾಗುವ ಮೂಲಕ ಮಕ್ಕಳಿಗೆ ಸಾಹಿತ್ಯದಲ್ಲಿ ಸ್ಫೂರ್ತಿ ದೊರೆಯುವಂತಾಗಬೇಕು ಎಂದರು.

ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ತಹಸೀಲ್ದಾರ್ ಎಸ್.ರಂಜಿತ್, ತಾಪಂ ಇಒ ಎಂ.ಶೈಲಾ, ಸಾಹಿತಿ ಡಾ.ಜೆ.ಕೆ.ರಮೇಶ್, ಕೆ.ನಾಗರಾಜ ಶೆಟ್ಟಿ , ಶಿಕ್ಷಕರ ಸಂಘದ ಅಧ್ಯಕ್ಷ ಮಹಬಲೇಶ್ವರ ಹೆಗ್ಡೆ ಮತ್ತಿತರರಿದ್ದರು.ತಾ.ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಆಶಯ ನುಡಿ ವ್ಯಕ್ತಪಡಿಸಿದರು. ತಿರುಳೇಬೈಲ್ ಪ್ರಸನ್ನ ಸ್ವಾಗತಿಸಿದರು. ಜಿ.ಕೆ.ಸತೀಶ ಹಾಗೂ ಸೌಳಿ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.ಸರ್ವಾಧ್ಯಕ್ಷರನ್ನು ಬಾಳೇಬೈಲಿನ ಕನ್ನಡ ಭವನದಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಗೋಪಾಲಗೌಡ ರಂಗಮಂದಿರಕ್ಕೆ ಕರೆತರಲಾಯಿತು.

"ಮಾತೃಭಾಷೆಯ ಜೀವಂತಿಕೆಗೆ

ಧಕ್ಕೆಯಾಗದಂತೆ ಪ್ರೀತಿಸಿ "

ನಮ್ಮ ಹುಟ್ಟಿಗೆ ಕಾರಣವಾದ ಮಣ್ಣು ಮತ್ತು ಭಾಷೆಯನ್ನು ಎಂದಿಗೂ ಮರೆಯಬಾರದು ಎಂದು ಚಿತ್ರ ಸಾಹಿತಿ ಕವಿರಾಜ್ ಹೇಳಿದರು.

11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆತ್ತಬ್ಬೆಯ ಭಾವನೆಯಲ್ಲಿ ಮಾತೃಭಾಷೆಯ ಜೀವಂತಿಕೆಗೆ ಧಕ್ಕೆಯಾಗದಂತೆ ಪ್ರೀತಿಸಬೇಕು. ವೈಯಕ್ತಿಕವಾಗಿ ಗಳಿಸುವ ಆಸ್ತಿ ಸಂಪತ್ತಿನಂತೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳೂ ಮುಖ್ಯ ಎಂದರು.

ಮಾನವೀಯ ಸಂಬಂಧ ಸಾಮಾಜಿಕ ಕಳಕಳಿ ಮುಂತಾದ ವಿಚಾರಗಳಲ್ಲಿ ಸಾಕ್ಷಿ ಪ್ರಜ್ಞೆಯಂತಿದ್ದ ತೀರ್ಥಹಳ್ಳಿ ಇಂದು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಜಾಗತೀಕರಣದ ಪ್ರಭಾವದಿಂದಾಗಿ ನಮ್ಮ ಆಲೋಚನಾ ಶಕ್ತಿಯನ್ನೇ ಕಳೆದುಕೊಂಡಿದ್ದು, ಬೌದ್ಧಿಕ ಸ್ವಾತಂತ್ರ್ಯಕ್ಕಾಗಿ ಹೊರಾಟ ಮಾಡುವ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಸುಳ್ಳು ಮಾಹಿತಿಗಳು ಸಮಾಜವನ್ನು ಹಾದಿ ತಪ್ಪಿಸುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ. ಸಾಮಾಜಿಕ ಜಾಲತಾಣದ ಪಿಡುಗಿನಿಂದ ಡೇಟಾ ತಿನ್ನುವ ಹುಳುಗಳಾಗಿದ್ದೇವೆ. ಇದಕ್ಕೆಲ್ಲಾ ಸಾಹಿತ್ಯದ ಓದು ಮಾತ್ರ ಪರಿಹರ ಮಾರ್ಗವಾಗಿದೆ ಎಂದರು.