ಮಾದಕ ವಸ್ತುಗಳ ಸೇವನೆ ತ್ಯಜಿಸಲು ಮುಂದಾಗಿ

| Published : Jun 27 2024, 01:00 AM IST

ಸಾರಾಂಶ

ಶಾಲಾ ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಹೆಚ್ಚು ಆಕರ್ಷಿತರಾಗಿದ್ದಾರೆ. ಮಾದಕ ವಸ್ತುಗಳನ್ನು ಮಾರುವವರಿಂದ, ದುರಭ್ಯಾಸವಿರುವ ಸ್ನೇಹಿತರಿಂದ ಪ್ರಭಾವಿತರಾಗಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ನೂರುನ್ನೀಸಾ ಆತಂಕ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಶಾಲಾ ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಹೆಚ್ಚು ಆಕರ್ಷಿತರಾಗಿದ್ದಾರೆ. ಮಾದಕ ವಸ್ತುಗಳನ್ನು ಮಾರುವವರಿಂದ, ದುರಭ್ಯಾಸವಿರುವ ಸ್ನೇಹಿತರಿಂದ ಪ್ರಭಾವಿತರಾಗಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ನೂರುನ್ನೀಸಾ ಆತಂಕ ವ್ಯಕ್ತಪಡಿಸಿದರು.ತುಮಕೂರು ವಿವಿಯಲ್ಲಿ ಮನೋವಿಜ್ಞಾನ ಅಧ್ಯಯನ, ಸಮಾಜ ಕಾರ್ಯ ಅಧ್ಯಯನ ವಿಭಾಗಗಳು, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಇತರೆ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ‘ವಿಶ್ವ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.ಇಂದು 11-12ನೇ ವಯಸ್ಸಿನ ಮಕ್ಕಳು ಡ್ರಗ್ಸ್ ಸೇವಿಸುತ್ತಾರೆ. 1985 ನಾರ್ಕೋಟಿಕ್‌ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್‌ ಡ್ರಗ್ಸ್ ಆಕ್ಟ್ ಪ್ರಕಾರ ಡ್ರಗ್ಸ್ ಸೇವನೆಯು ಅಪರಾಧವಾಗಿದೆ. ದಂಡದೊಂದಿಗೆ 20 ವರ್ಷಗಳವರೆಗೆ ಶಿಕ್ಷೆಯಾಗುತ್ತದೆ. ಮಾದಕ ವಸ್ತು, ಉದ್ದೀಪನ ಮದ್ದುಗಳನ್ನು ಮಾರಾಟ ಮಾಡುವ ಔಷಧಿ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಿದರು.ಪಿಜಿ ಮತ್ತು ಹಾಸ್ಟೆಲ್‌ಗಳಲ್ಲಿ ಮಕ್ಕಳನ್ನು ಇರಿಸಲು ಪಾಲಕರಿಗೆ ಭಯವಾಗುತ್ತಿದೆ. ವಿದ್ಯಾರ್ಥಿಗಳಲ್ಲಿರುವ ದುರ್ಬಲ ಮನಸ್ಥಿತಿಯಿಂದ ಮಾದಕವಸ್ತುಗಳ ಮತ್ತು ಮದ್ಯದ ಚಟಕ್ಕೆ ದಾಸರಾಗುತ್ತಿದ್ದಾರೆ. ಮಾದಕ ವಸ್ತುಗಳು ಬದುಕನ್ನು ಸರ್ವನಾಶ ಮಾಡಲಿದೆ ಎಂಬ ಸತ್ಯವನ್ನು ಅವರು ಅರಿತುಕೊಳ್ಳಬೇಕು ಎಂದು ಹೇಳಿದರು.ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ದೇಶದ ಭವಿಷ್ಯವು ಯುವಕರ ಕೈಯಲ್ಲಿದೆ. ಮನಸ್ಸು ಮತ್ತು ಆತ್ಮವನ್ನು ಸ್ಥಿರವಾಗಿಟ್ಟುಕೊಂಡಾಗ ದುರಭ್ಯಾಸಗಳ ದಾಸರಾಗಲು ಸಾಧ್ಯವಿಲ್ಲ. ಮಕ್ಕಳ ತಪ್ಪುಗಳಿಂದಾಗಿ ಪೋಷಕರು ತೊಂದರೆ ಅನುಭವಿಸುತ್ತಾರೆ. ಯುವಕರು ಮನಸ್ಸಿನಲ್ಲಿ ಮಾದಕ ವಸ್ತುಗಳನ್ನು ಬಳಸುವುದಿಲ್ಲ ಎಂದು ದೃಢಸಂಕಲ್ಪ ಮಾಡಬೇಕು ಎಂದು ಹೇಳಿದರು.ಕುಲಸಚಿವೆ ನಾಹಿದಾ ಜಮ್‌ಜಮ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವಿಚಾರಗಳಿಗೆ, ಓದುವ ಅಭ್ಯಾಸಕ್ಕೆ, ಉತ್ತಮವಾದ ಜೀವನದ ಕಡೆಗೆ ತಮ್ಮಗಮನವನ್ನು ಹರಿಸಬೇಕು. ಮಾದಕ ವಸ್ತುಗಳು ಮನುಷ್ಯನ ಬೆಳವಣಿಗೆಗೆ ಮಾರಕವಾಗುತ್ತವೆ. ಈ ವಿಚಾರವನ್ನು ವ್ಯಸನಿಗಳಿಗೆ ತಿಳಿಸಬೇಕು ಎಂದರು.ಮನೋವೈದ್ಯ ಲೋಕೇಶ್ ಬಾಬು ಮಾತನಾಡಿ, ಜೀವನದ ಬಗ್ಗೆ ಬೇಸರ, ಋಣಾತ್ಮಕವಾಗಿ ಆಲೋಚಿಸುವ ಮನೋಭಾವದವರು ಹೆಚ್ಚಾಗಿ ಮಾದಕವಸ್ತುಗಳ ದಾಸರಾಗುತ್ತಾರೆ. ಸುಂದರ ಬದುಕನ್ನುಕಾಣುವ ಹೊತ್ತಿಗೆ ಕಣ್ಣು ಮುಚ್ಚಿರುತ್ತಾರೆ ಎಂದು ಹೇಳಿದರು.ವಿವಿಯ ಸಮಾಜ ಕಾರ್ಯ ವಿಭಾಗದ ಅಧ್ಯಕ್ಷ ಪ್ರೊ.ರಮೇಶ್ ಬಿ., ಮನೋವಿಜ್ಞಾನ ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಪರಶುರಾಮ್‌ ಕೆ.ಜಿ., ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ರವೀಂದ್ರ ನಾಯ್ಕ್ ಕೆ., ಮನೋವೈದ್ಯ ಡಾ. ಪ್ರದೀಪ್, ಅಚರ್ಡ್ ಸಂಸ್ಥೆಯ ನಿರ್ದೇಶಕ ಡಾ.ಸದಾಶಿವಯ್ಯ, ಜಿಲ್ಲಾ ಮಲೇರಿಯಾ ನಿವಾರಣಾಧಿಕಾರಿ ಡಾ.ಚಂದ್ರಶೇಖರ್ ಉಪಸ್ಥಿತರಿದ್ದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವಿ ಕಲಾ ಕಾಲೇಜು, ಜಿಲ್ಲಾಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಛೇರಿ, ಸ್ನೇಹ ಮನೋವಿಕಾಸ ಕೇಂದ್ರ, ಅಚರ್ಡ್ ಮದ್ಯವರ್ಜನ ಮತ್ತು ಸಮಗ್ರ ಪುನರ್ವಸತಿಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.