ಅರಣ್ಯವಾಸಿಗಳಿಗೆ ಇಲಾಖೆಯಿಂದ ಅನ್ಯಾಯವಾಗದು: ಅಧಿಕಾರಿಗಳ ಅಭಯ

| Published : Jun 27 2024, 01:00 AM IST

ಅರಣ್ಯವಾಸಿಗಳಿಗೆ ಇಲಾಖೆಯಿಂದ ಅನ್ಯಾಯವಾಗದು: ಅಧಿಕಾರಿಗಳ ಅಭಯ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಜಿಪಿಎಸ್ ಮಾನದಂಡದ ಅಡಿಯಲ್ಲಿ ಸಾಗುವಳಿಗೆ ಆತಂಕ ಮಾಡಲಾಗದು. ಅರ್ಜಿ ಸಲ್ಲಿಸಿದವರ ಮೇಲೆ ವಿನಾಕಾರಣ ಭೂಕಬಳಿಕೆ ನಿಷೇಧ ಕಾಯ್ದೆ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದನ್ನು ನಿಯಂತ್ರಿಸಲಾಗುವುದು.

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳನ್ನು ಇಲಾಖೆಯ ಗಮನಕ್ಕೆ ತರುವ ಹಿನ್ನೆಲೆ ಜರುಗಿದ ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್ ಯಶಸ್ವಿಯಾಗಿ ಜರುಗಿತು. ಅರಣ್ಯವಾಸಿಗಳಿಗೆ ಇಲಾಖೆಯಿಂದ ಅನ್ಯಾಯವಾಗದೆಂದು ಅದಾಲತ್‌ನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು.

ಶಿರಸಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಅಜ್ಜಯ್ಯ, ದಾಂಡೇಲಿ ಕಾಳಿ ಹುಲಿ ಯೋಜನೆ ಅಧಿಕಾರಿ ನಿಲೇಶಕುಮಾರ ಮತ್ತು ತನಿಖಾ ತಂಡದ ಉಪ ಸಂರಕ್ಷಣಾಧಿಕಾರಿ ಅಜೀಜ್ ಅವರ ಸಮ್ಮುಖದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಶಿರಸಿಯಲ್ಲಿ ಬುಧವಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಜರುಗಿದ ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್ ಕಾರ್ಯಕ್ರಮದಲ್ಲಿ ಮೇಲಿನಂತೆ ಹೇಳಿದರು.

ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಜಿಪಿಎಸ್ ಮಾನದಂಡದ ಅಡಿಯಲ್ಲಿ ಸಾಗುವಳಿಗೆ ಆತಂಕ ಮಾಡಲಾಗದು. ಅರ್ಜಿ ಸಲ್ಲಿಸಿದವರ ಮೇಲೆ ವಿನಾಕಾರಣ ಭೂಕಬಳಿಕೆ ನಿಷೇಧ ಕಾಯ್ದೆ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದನ್ನು ನಿಯಂತ್ರಿಸಲಾಗುವುದು. ಒಕ್ಕಲೆಬ್ಬಿಸುವ ಪ್ರಕ್ರಿಯೆ ಮೂಲಕ ನೋಟಿಸ್ ನೀಡುವುದನ್ನು ಪರೀಶಿಲಿಸಿ ಕ್ರಮ ಕೈಗೊಳ್ಳಲಾಗುವುದು. ಕಾಯ್ದೆಯಲ್ಲಿ ಅರ್ಜಿ ನೀಡಿ, ಜಿಪಿಎಸ್ ಆಗದೆ ಇರುವ ಅತಿಕ್ರಮಣದಾರರಿಗೆ ಸಾಗುವಳಿಗೆ ಆತಂಕ ಮಾಡದಂತೆ ನಿರ್ದೇಶನ ನೀಡುವುದು, ಅರಣ್ಯವಾಸಿಗಳಿಗೂ ಅರಣ್ಯ ಇಲಾಖೆ ಉಚಿತವಾಗಿ ಗಿಡ ವಿತರಣೆ ಮಾಡುವುದು ಮತ್ತು ಸಾರ್ವಜನಿಕ ರಸ್ತೆ ಪಕ್ಕ ಆತಂಕಕಾರಿ ಗಿಡ ತೆಗೆಯುವ ಬಗ್ಗೆ ಕ್ರಮ ಜರುಗಿಸಲಾಗುವುದು ಮುಂತಾದ ಗಂಭೀರ ಸಮಸ್ಯೆಗಳಿಗೆ ಉತ್ತರಿಸಲಾಯಿತು.

ಅದಾಲತ್‌ನಲ್ಲಿ ಹೋರಾಟಗಾರರ ವೇದಿಕೆಯ ಪದಾಧಿಕಾರಿಗಳಾದ ಪ್ರಧಾನ ಸಂಚಾಲಕ ಜೆ.ಎಂ. ಶೆಟ್ಟಿ ಅಚವೆ, ವಿವಿಧ ತಾಲೂಕು ಅಧ್ಯಕ್ಷರಾದ ರಮಾನಂದ ನಾಯ್ಕ, ಭೀಮ್‌ಶಿ ವಾಲ್ಮೀಕಿ, ಶಿವಾನಂದ ಜೋಗಿ, ಮಂಜುನಾಥ ಮರಾಠಿ, ಹರಿಹರ ನಾಯ್ಕ, ಓಂಕಾರ, ಬಾಲಚಂದ್ರ ಶೆಟ್ಟಿ, ಸಂತೋಷ ಗಾವಡಾ, ಜಗದೀಶ ಶೆಟ್ಟಿ ಮುಂಡಗೋಡ್, ಮಂಜುನಾಥ ನಾಯ, ಮಹೇಶ ನಾಯ್ಕ ಸಾಲ್ಕೋಡ, ಟಿಪ್ಪು ನಾಯ್ಕ ಮುಂತಾದವರು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ತೀವ್ರ ಆಕ್ರೋಶ: ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿ ಬಡ ಅತಿಕ್ರಮದಾರರಿಗೆ ಒಂದು ನೀತಿ, ಶ್ರೀಮಂತ ಅತಿಕ್ರಮದಾರರಿಗೆ ಇನ್ನೊಂದು ನೀತಿ, ಅನುಸರಿಸಿ ತಾರತಮ್ಯ ಮಾಡುವುದಲ್ಲದೇ ಕಾನೂನಿಗೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ವಿರುದ್ಧ ದೌರ್ಜನ್ಯ ಎಸಗುವ ಕುರಿತು ಜಿಲ್ಲಾದ್ಯಂತ ಆಗಮಿಸಿದ ಹೋರಾಟಗಾರರು ಅದಾಲತ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಆನೆ...ಮಂಗ... ಕರಡಿ: ವನ್ಯಪ್ರಾಣಿಗಳಾದ ಆನೆ, ಮಂಗ, ಕರಡಿ ಸಾಗುವಳಿ ಕ್ಷೇತ್ರಕ್ಕೆ ಅಕ್ರಮ ಪ್ರವೇಶ ಮಾಡಿ ಬೆಳೆನಷ್ಟ ಮಾಡುತ್ತಿರುವುದಲ್ಲದೆ ಅರಣ್ಯವಾಸಿಗಳ ಮೇಲು ಹಲ್ಲೆ ಜರುಗುತ್ತಿರುವುದು ಅರಣ್ಯ ಇಲಾಖೆ ನಿಯಂತ್ರಿಸಿರುವುದಕ್ಕೆ ತೀವ್ರ ಆಕ್ರೋಶ ಅದಾಲತ್‌ನಲ್ಲಿ ಪ್ರಸ್ತಾಪಕ್ಕೆ ಬಂದವು. ೨೪ ಕೋಟಿ ಪರಿಹಾರ ವಿತರಣೆ

ಶಿರಸಿ: ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ ೨೦೨೩- ೨೪ರ ಸಾಲಿನಲ್ಲಿ ವನ್ಯಪ್ರಾಣಿಯಿಂದ ಉಂಟಾದ ೧೫೨೫ ವಿವಿಧ ರೀತಿಯ ಪ್ರಕರಣದಲ್ಲಿನ ಕುಟುಂಬಗಳಿಗೆ ₹೨೪,೭೯,೬೦೨೬ ಪರಿಹಾರ ವಿತರಿಸಲಾಗಿದೆ ಎಂದು ಅರಣ್ಯ ಇಲಾಖೆಯ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಜ್ಜಯ್ಯ ತಿಳಿಸಿದರು.ಉತ್ತರ ಕನ್ನಡ ಜಿಲ್ಲೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಆಶ್ರಯದಲ್ಲಿ ಶಿರಸಿಯಲ್ಲಿ ಜರುಗಿದ ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್‌ನಲ್ಲಿ ವನ್ಯಪ್ರಾಣಿಗಳಿಂದ ಮಾನವನಿಗೆ ಮತ್ತು ಸಾಗುವಳಿ ಕ್ಷೇತ್ರಕ್ಕೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಹೋರಾಟಗಾರರ ಪ್ರಶ್ನೆಗೆ ಮೇಲಿನ ಅಂಕೆ ಸಂಖ್ಯೆಯನ್ನು ಪ್ರಸ್ತುತಪಡಿಸಿದರು.ಜಿಲ್ಲೆಯಲ್ಲಿ ವನ್ಯಪ್ರಾಣಿಗಳಿಂದ ಬೆಳೆನಷ್ಟ ಉಂಟಾಗಿರುವ ೧೦೯೪ ಕುಟುಂಬಗಳಿಗೆ ₹೧,೧೫,೦೯೦೯೬, ೪೧೦ ದನಕರಗಳ ಸಾವಿಗೆ ₹೭೮,೮೯,೪೦೦, ೩ ಜನ ಮಾನವ ಸಾವಿಗೆ ₹೩೭,೫೦,೦೦೦, ಭಾಗಶ ಅಂಗವೈಕ್ಯಲ್ಯವಾಗಿರುವ ಒಬ್ಬರಿಗೆ ₹೨,೫೦,೦೦೦, ೧೫ ಜನರಿಗೆ ವನ್ಯ ಪ್ರಾಣಿಯಿಂದ ಗಾಯವಾಗಿರುವುದಕ್ಕೆ ₹೯,೩೫,೫೩೦, ೨ ಜನ ಮಾಸಾಶನಕ್ಕೆ ₹೪,೬೨,೦೦೦ ಪರಿಹಾರವನ್ನು ೨೦೨೩- ೨೪ರ ಸಾಲಿನಲ್ಲಿ ವಿತರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಳಿ ಹುಲಿ ಯೋಜನೆ ಅಧಿಕಾರಿ ದಾಂಡೇಲಿ, ನಿಲೇಶ ಕುಮಾರ ಮತ್ತು ಅರಣ್ಯ ಇಲಾಖೆಯ ತನಿಖಾ ತಂಡದ ಉಪಸಂರಕ್ಷಣಾಧಿಕಾರಿ ಅಜೀಜ್, ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ಪದಾಧಿಕಾರಿಗಳಾದ ಜೆ.ಎಂ. ಶೆಟ್ಟಿ, ಮಂಜುನಾಥ ಮರಾಠಿ, ರಮಾನಂದ ನಾಯ್ಕ ಅಚವೆ, ಬಾಲಚಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.