ಸಾರಾಂಶ
ಭೀಮಸಮುದ್ರ ಸರ್ಕಾರಿ ಶಾಲೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯನ್ನು ಪಿಡಿಒ ದೀಪಾ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣಕ್ಕಾಗಿ ನೀಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳು ಉನ್ನತ ಧ್ಯೇಯೋದ್ದೇಶಗಳನ್ನು ಸಾಧಿಸಬೇಕು ಎಂದು ಪಿಡಿಒ ದೀಪಾ ಹೇಳಿದರು.ಇಲ್ಲಿಗೆ ಸಮೀಪದ ಭೀಮಸಮುದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಮಕ್ಕಳ ಗ್ರಾಮಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿಯೂ ಅಬ್ದುಲ್ ಕಲಾಂ ಅವರಂತಹ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಿದೆ. ಅಂತಹ ಸಾಧನೆ ಮಾಡಲು ಮಕ್ಕಳು ಮುಂದಾಗಬೇಕು ಎಂದರು.
ಮುಖ್ಯ ಶಿಕ್ಷಕಿ ಸೌಮ್ಯ ರೆಡ್ಡಿ ಮಾತನಾಡಿ, ಶಾಲಾ ಕಟ್ಟಡಕ್ಕೆ ಕಾಂಪೌಂಡ್ ಇಲ್ಲದ ಕಾರಣ ಗ್ರಾಮದ ದನಕರುಗಳು ಆವರಣಕ್ಕೆ ನುಗ್ಗಿ ಶಾಲಾವನ ಹಾಳುಮಾಡುತ್ತವೆ. ರಾತ್ರಿವೇಳೆ ಕೆಲವು ದುಷ್ಕರ್ಮಿಗಳು ಅನೈತಿಕ ಚಟುವಟಿಕೆಗಳ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಆದ್ದರಿಂದ ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡಿಕೊಡಬೇಕು. ಮಕ್ಕಳ ಮಧ್ಯಾಹ್ನದ ಊಟಕ್ಕೆ ಅಗತ್ಯವಾದ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡುವುದು ಅಗತ್ಯ ಎಂದರು.ಗ್ರಾಪಂ ಉಪಾಧ್ಯಕ್ಷ ಉಮೇಶ್ ಮಾತನಾಡಿ, ಶಾಲೆ ಆವರಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂದು ಮುಖ್ಯ ಶಿಕ್ಷಕರು ತಿಳಿಸಿದ್ದಾರೆ. ಈ ವಿಚಾರವಾಗಿ ಉದಾಸೀನ ಮಾಡದೇ ಪೊಲೀಸ್ ಇಲಾಖೆ ಮೂಲಕ ಅಗತ್ಯ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು. ಶಾಲೆಯಲ್ಲಿ ಮಕ್ಕಳಿಗೆ ನೀರು, ಕಾಂಪೌಂಡ್ ಮತ್ತು ಶಾಲಾ ಆವರಣದ ಸ್ವಚ್ಛತೆ ಸಮಸ್ಯೆಗಳಿಗೆ ಗ್ರಾಪಂ ವತಿಯಿಂದ ಪರಿಹಾರ ಮಾಡಿಕೊಡಲಾಗುವುದು ಎಂದರು.
ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷೆ ಪಾಲಾಕ್ಷಮ್ಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಸದಸ್ಯರಾದ ಸಿದ್ದಗಂಗಮ್ಮ, ಮಂಜುನಾಥ್, ವೆಂಕಟೇಶ್, ಗ್ರಾಮದ ಸಿಂಧೂ ಕುಮಾರಿ ಚಂದ್ರಶೇಖರ್ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಚಂದ್ರನಾಯಕ್, ಶಾಲೆ ಶಿಕ್ಷಕರಾದ ಮಂಜುಳಮ್ಮ, ಸುಂದರಮ್ಮ, ಚೈತ್ರ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಲಾ ಮಕ್ಕಳು ಹಾಗೂ ಶಿಕ್ಷಕರು ಶಾಲೆಯಲ್ಲಿರುವ ಕುಂದುಕೊರತೆಗಳನ್ನು ನೀಗಿಸುವಂತೆ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒಗಳಿಗೆ ಮನವಿ ಸಲ್ಲಿಸಿದರು.