ಶಿರಸಿ: ಟಿ.ಎಸ್.ಎಸ್.ನಲ್ಲಿ ನೂತನ ಕಚೇರಿಯಲ್ಲಿ ಹಸಿರು ಮಾಸ ಕಾರ್ಯಕ್ರಮಕ್ಕೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸತೀಶ ಹೆಗಡೆ ಚಾಲನೆ ನೀಡಿದರು.
ರೈತರಿಗೆ ಕೃಷಿ ಅಗತ್ಯ ಸಸ್ಯಗಳ ಮಾರಾಟ ಪ್ರಕ್ರಿಯೆ ಹಿನ್ನೆಲೆಯಲ್ಲಿ ಮಳೆಗಾಲ ಆರಂಭದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಸಂಘದ ಸದಸ್ಯರಿಗೆ ಸಾಂಕೇತಿಕವಾಗಿ ಚಂದ್ರಗಿರಿ ಕಾಫಿ ಗಿಡಗಳನ್ನು ವಿತರಿಸಲಾಯಿತು.ಕೃಷಿ ಉಪ ನಿರ್ದೇಶಕ ಪಾಂಡು ಕೆ.ಎಚ್. ಅವರು ಟಿಎಸ್‌ಎಸ್ ಬ್ರಾಂಡ್ ಅನ್ನಪೂರ್ಣಾ ಗೋಲ್ಡ್ ಸಾವಯವ ಗೊಬ್ಬರವನ್ನು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ರೈತರು ಮಣ್ಣಿನ ಗುಣಮಟ್ಟ ಉತ್ತಮಪಡಿಸಿಕೊಂಡು ರೋಗ ನಿಯಂತ್ರಿಸಲು ಪ್ರಯತ್ನಿಸಬೇಕು ಎಂದರು. ಸಹಾಯಕ ತೋಟಗಾರಿಕಾ ನಿರ್ದೇಶಕ ಗಣೇಶ ಹೆಗಡೆ ಅವರು ಭತ್ತ, ಕಾಫಿ, ತೆಂಗು, ಅರಿಶಿಣ ಯಾವ ಬೆಳೆಯನ್ನು ಹೇಗೆ ಎಲ್ಲಿ ಬೆಳೆಯಬೇಕು ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಮಧುಕರ ನಾಯ್ಕ ಅವರು ಯೂರಿಯಾ ಆಮದು ಮತ್ತು ಸಬ್ಸಿಡಿ ಕುರಿತು ಮಾಹಿತಿ ನೀಡಿದರು.ಟಿಎಸ್‌ಎಸ್ ಬ್ರ್ಯಾಂಡ್‌ನ ಅನ್ನಪೂರ್ಣಾ ಗೋಲ್ಡ್ ಸಾವಯವ ಗೊಬ್ಬರದ ಕುರಿತು ಸಂಘದ ಕೃಷಿ ಸಲಹೆಗಾರ ಗಣೇಶ ಭಟ್ಟ ಮಾಹಿತಿ ನೀಡಿದರು. ೨೦೨೫-೨೬ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ-೨ರಲ್ಲಿ ರಾಜ್ಯಕ್ಕೆ ಪ್ರಥಮ ೧೦ ರ‍್ಯಾಂಕ್ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿಶೇಷ ಪ್ರೋತ್ಸಾಹಧನ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಪಾಲಕರ ಪರವಾಗಿಶ್ರೀ ಮಂಜುನಾಥ ವೆಂಕಟ್ರಮಣ ಹೆಗಡೆ ಮಾತನಾಡಿದರು.
ಟಿ.ಎಸ್.ಎಸ್. ಅಧ್ಯಕ್ಷ ಗೋಪಾಲಕೃಷ್ಣ ವೆಂಕಟ್ರಮಣ ವೈದ್ಯ ಮತ್ತಿಘಟ್ಟ ಮಾತನಾಡಿ, ಕಳೆದ ವರ್ಷದಿಂದ ಕಾಫಿ ಗಿಡ ಮಾರಾಟ ಮಾಡುತ್ತಿದ್ದೇವೆ. ೧೦೦ಕ್ಕೂ ಹೆಚ್ಚಿನ ಗಿಡ ಖರೀದಿಸಿದವರಿಗೆ ೨೫ ಗಿಡ ಉಚಿತ ನೀಡುತ್ತಿದ್ದೇವೆ. ಅಡಿಕೆ ಎಲೆಚುಕ್ಕಿ ರೋಗದಿಂದ ಸಂಘದಲ್ಲಿ ₹೪೫ ಸಾವಿರ ಕ್ವಿಂಟಲ್ ಅಡಕೆ ವಿಕ್ರಿ ಕಡಿಮೆಯಾಗಿದೆ. ಅಡಕೆ ಸಂಶೋಧನೆಗೆ ₹೧೫ ಲಕ್ಷ ನೀಡಿದ್ದೇವೆ. ಸಿದ್ದಾಪುರ ಭಾಗದ ರೈತರು ಅಡಿಕೆಗೆ ಒಕ್ಕರಿಸಿದ ರೋಗದಿಂದ ಕಂಗೆಟ್ಟಿದ್ದಾರೆ. ರೈತರು ಧೃತಿಗೆಡದೆ ತೋಟಗಾರಿಕೆ ಇಲಾಖೆ ನೀಡಿದ ಮತ್ತು ಸೂಚಿಸಿದ ಔಷಧಗಳನ್ನು ಸರಿಯಾಗಿ ಬಳಸಿ, ರೋಗ ನಿಯಂತ್ರಿಸಿ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾದ ಅವಶ್ಯಕತೆ ಇದೆ ಎಂದು ಆಗ್ರಹಿಸಿದರು.
ಟಿಎಸ್‌ಎಸ್ ಉಪಾಧ್ಯಕ್ಷ ಎಂ.ಎನ್. ಭಟ್ಟ ತೋಟಿಮನೆ ಸ್ವಾಗತಿಸಿದರು. ಟಿಎಸ್‌ಎಸ್ ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ, ಕೃಷಿ ವಿಭಾಗದ ಮುಖ್ಯಸ್ಥ ಕೃಷ್ಣಮೂರ್ತಿ ಭಟ್ಟ ಉಪಸ್ಥಿತರಿದ್ದರು. ಟಿ.ಎಸ್.ಎಸ್. ನಿರ್ದೇಶಕ ರವೀಂದ್ರ ಹೆಗಡೆ ಹೀರೇಕೈ ವಂದಿಸಿದರು. ಸಿಬ್ಬಂದಿ ಪೂರ್ಣಿಮಾ ಹೆಗಡೆ, ರಶ್ಮಿ ಭಟ್ಟ ಪ್ರಾರ್ಥಿಸಿದರು. ಶುಭಾ ಹೆಗಡೆ ಹಾಗೂ ಗೋಪಾಲ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.