ಕ್ಷಯರೋಗ ಪ್ರಕರಣ ಶೂನ್ಯಕ್ಕೆ ಬರಲಿ: ಜಿಲ್ಲಾಧಿಕಾರಿ ಪ್ರಶಾಂತಕುಮಾರ

| Published : Jan 31 2025, 12:50 AM IST

ಸಾರಾಂಶ

ಕ್ಷಯರೋಗ ಪ್ರಕರಣಗಳನ್ನು ಶೂನ್ಯಕ್ಕೆ ತಂದು, ಜಿಲ್ಲೆಯನ್ನು ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಅಧಿಕಾರಿಗಳು ಶ್ರಮಿಸಬೇಕು.

ಬಳ್ಳಾರಿ: ಜಿಲ್ಲೆಯಲ್ಲಿ ಕ್ಷಯರೋಗ ಪ್ರಕರಣಗಳನ್ನು ಶೂನ್ಯಕ್ಕೆ ತಂದು, ಜಿಲ್ಲೆಯನ್ನು ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಸೂಚನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕ್ಷಯರೋಗ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈಗಾಗಲೇ ರೋಗ ಪತ್ತೆ ಹಚ್ಚಲು ನಗರದ ವಿಮ್ಸ್, ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಬಿನ್ಯಾಟ್ ಯಂತ್ರ ಹಾಗೂ ಟ್ರುನ್ಯಾಟ್ ಮಿಷನ್‌ಗಳಿದ್ದು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಅನುಷ್ಠಾನ ಮಾಡಲಾಗಿದೆ. ಇದರಿಂದ ಕ್ಷಯ ಪೀಡಿತರನ್ನು ಶೀಘ್ರವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕ್ಷಯರೋಗ ಪೀಡಿತರನ್ನು ಶೂನ್ಯಕ್ಕೆ ತರಬೇಕು. ವಿವಿಧೆಡೆ ಸಮುದಾಯದಲ್ಲಿ ಗ್ರಾಮವಾರು ಸಮೀಕ್ಷೆ ಕಾರ್ಯ ನಡೆಸಬೇಕು. ಕ್ಷಯರೋಗಕ್ಕೆ ಸಂಬಂಧಿಸಿದಂತೆ ಆಯುರ್ವೇದದಲ್ಲಿ ಚಿಕ್ಸಿತೆ ನೀಡಬೇಕು. ಇದಕ್ಕೆ ಜಿಲ್ಲಾಡಳಿತದಿಂದ ಸಹಕಾರ ನೀಡಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಮಾತನಾಡಿ, ಈ ವರ್ಷದ ಘೋಷವಾಕ್ಯ ‘ಟಿಬಿಯನ್ನು ಸೋಲಿಸಿ ದೇಶವನ್ನು ಗೆಲ್ಲಿಸಿ’ ಎಂಬುದಾಗಿದೆ ಎಂದು ತಿಳಿಸಿದರು.

ಜಾಥಾವು ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದ ಆವರಣದಿಂದ ಆರಂಭಗೊಂಡು ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣಕ್ಕೆ ತಲುಪಿತು.

ಜಾಥಾದಲ್ಲಿ ಆಯುಷ್ ಇಲಾಖೆಯ ಎಲ್ಲಾ ವೈದ್ಯಾಧಿಕಾರಿಗಳು, ಮಹಾವಿದ್ಯಾಲಯದ ಪ್ರಾಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ದಾರಿ ಉದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಾ ಸಾಗಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸರಳಾದೇವಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯರಾದ ಡಾ.ಮಾಧವ ದಿಗ್ಗಾವಿ, ಸಹಾಯಕ ಆಡಳಿತಾಧಿಕಾರಿ ಶ್ರೀನಿವಾಸ್, ಎನ್‌ಎಸ್‌ಎಸ್ ಅಧಿಕಾರಿ ಡಾ.ದೊಡ್ಡಬಸಯ್ಯ, ಆಸ್ಪತ್ರೆಯ ಸ್ಥಾಯಿ ವೈದ್ಯಾಧಿಕಾರಿಗಳಾದ ಡಾ.ಕೊಟ್ರೇಶ್, ಡಾ.ರಾಜೇಶ್, ಡಾ.ರವಿ ಚವ್ಹಾಣ್, ಡಾ.ಶಿವು ಅರಕೇರಿ ಸೇರಿದಂತೆ ವಿದ್ಯಾಲಯದ ವಿದ್ಯಾರ್ಥಿಗಳು, ಇತರರು ಭಾಗವಹಿಸಿದ್ದರು.