ಸಾರಾಂಶ
ಹುಲಿಗಿ ಗ್ರಾಮದ 4ನೇ ವಾರ್ಡಿನ ಚನ್ನಮ್ಮ ವೃತ್ತದ ಹತ್ತಿರವಿರುವ ಮಸೀದಿ ಹತ್ತಿರ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ಕೊಪ್ಪಳ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ತಾಲೂಕಿನ ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹುಲಿಗಿ ಗ್ರಾಮದ 4ನೇ ವಾರ್ಡಿನ ಚನ್ನಮ್ಮ ವೃತ್ತದ ಹತ್ತಿರವಿರುವ ಮಸೀದಿ ಹತ್ತಿರ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ ಜರುಗಿತು. ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶಫಿಉಲ್ಲಾ ಮಾತನಾಡಿ, ಟಿಬಿ ರೋಗವೂ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಒಬ್ಬ ರೋಗಿಯು ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ, ಒಂದು ವರ್ಷಕ್ಕೆ 10 ರಿಂದ 15 ಹರಡುತ್ತಾನೆ. ಕಾರಣ ಗ್ರಾಮದಲ್ಲಿ ಯಾರಿಗಾದರೂ ಸತತ ಎರಡು ವಾರಗಳಿಂದ ಕೆಮ್ಮು ಕಾಣಿಸಿಕೊಂಡರೆ, ಕೆಮ್ಮಿನಲ್ಲಿ ಕಫ ಬಂದರೆ, ಕಫದಲ್ಲಿ ರಕ್ತ ಬಂದರೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷಿಸಿಕೊಂಡು ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ಯಾರೂ ಕೂಡ ಟಿಬಿ ರೋಗದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಕ್ಷಯರೋಗಿಗಳು ಎಲ್ಲಂದರಲ್ಲಿ ಊಗಳಬಾರದು, ಕೆಮ್ಮುವಾಗ ಮತ್ತು ಶೀನುವಾಗ ಕಡ್ಡಾಯವಾಗಿ ಕರವಸ್ತ್ರ ಬಳಸಬೇಕು. ಆಶಾ ಕಾರ್ಯಕರ್ತೆಯರು ತಮ್ಮ ಮನೆಗೆ ಭೇಟಿ ನೀಡಿದಾಗ, ಆರೋಗ್ಯದ ಯಾವುದೇ ಸಮಸ್ಯೆವಿದ್ದರೆ, ಅವರ ಹತ್ತಿರ ಚರ್ಚಿಸಿ, ಸಲಹೆ ಪಡೆದುಕೊಳ್ಳಬಹುದು ಎಂದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಮಾತನಾಡಿ, ಹುಲಿಗಿ ಗ್ರಾಮದಲ್ಲಿ ಕ್ಷಯರೋಗಿಗಳನ್ನು ಪತ್ಯೆ ಹಚ್ಚಿ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿ, ಅವರನ್ನು ಗುಣಮುಖರನ್ನಾಗಿ ಮಾಡಬೇಕಾಗಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಸಹವ್ಯಾಧಿಗಳು ಈರೋಗಕ್ಕೆ ಬೇಗನೆ ತುತ್ತಾಗುವ ಸಾಧ್ಯತೆ ಇದೆ. ಮನುಷ್ಯನ ಉಗುರು ಹಾಗೂ ಕೂದಲು ಬಿಟ್ಟು ದೇಹದ ಯಾವುದೇ ಭಾಗಕ್ಕಾದರೂ ಕ್ಷಯರೋಗ(ಟಿಬಿ) ಬರಬಹುದು. 2025ಕ್ಕೆ ಕ್ಷಯರೋಗ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿ ಮಾಡಲು ಸಹಕರಿಸಿ. ಪೌಷ್ಠಿಕ ಆಹಾರದ ಸಲುವಾಗಿ ನಿಕ್ಷಯ ಪೋಷಣ ಅಭಿಯಾನದಡಿಯಲ್ಲಿ ಪ್ರತಿರೋಗಿಗೆ ಮಾಸಿಕ ₹500ಯನ್ನು ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ರೋಗಿಯ ಮನೆ ಭೇಟಿ ನೀಡಿ, ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯ ಇಲಾಖೆಯೊಂದಿಗೆ ಕೈಜೊಡಿಸಿ, ಟಿ.ಬಿ ಸೋಲಿಸಿ-ದೇಶ ಗೆಲ್ಲಿಸಿ ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜ್ಯೊತಿ, ಎಸ್.ಟಿ.ಎಸ್ ಶ್ರೀನಿವಾಸ, ಆಶಾ ಕಾರ್ಯಕರ್ತೆಯರಾದ ಕೌಶಲ್ಯ, ಮಂಜುಳಾ, ಆರ್.ಕೆ.ಎಸ್.ಕೆ. ಕಾರ್ಯಕ್ರಮದ ಆಪ್ತಸಮಾಲೋಚಕರಾದ ಫೈರೋಜ್ ಬೇಗಂ, ಅಂಗನವಾಡಿ ಕಾರ್ಯಕರ್ತೆಯರು, ಎನ್.ಜಿ.ಓ ಸಂಸ್ಥೆಯ ಪದಾಧಿಕಾರಿಗಳು, ಗ್ರಾಪಂ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.