ಕ್ಷಯ ಮುಕ್ತ ಭಾರತಕ್ಕೆ ಜನರ ಸಹಕಾರ ಅಗತ್ಯ : ಗ್ರಾಮಗಳಲ್ಲಿ ಮನೆ ಬಾಗಿಲಿಗೆ ಬಂದು ಸರ್ವೇ- ಶಾಸಕ ದರ್ಶನ್ ಪುಟ್ಟಣ್ಣಯ್ಯ

| Published : Dec 08 2024, 01:20 AM IST / Updated: Dec 08 2024, 08:07 AM IST

ಕ್ಷಯ ಮುಕ್ತ ಭಾರತಕ್ಕೆ ಜನರ ಸಹಕಾರ ಅಗತ್ಯ : ಗ್ರಾಮಗಳಲ್ಲಿ ಮನೆ ಬಾಗಿಲಿಗೆ ಬಂದು ಸರ್ವೇ- ಶಾಸಕ ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷಯ ರೋಗದ ಗುಣಲಕ್ಷಣಗಳು ಕಂಡುಬಂದರೆ ತಕ್ಷಣವೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಗ್ರಾಮಗಳಲ್ಲಿ ಮನೆ ಬಾಗಿಲಿಗೆ ಬಂದು ಸರ್ವೇ ಕಾರ್ಯ ನಡೆಸಲಿದ್ದಾರೆ. ಜನರಿಂದ ಕಫ ಪಡೆದು ತಪಾಸಣೆ ನಡೆಸಿ ರೋಗಪತ್ತೆ ಹಚ್ಚುವ ಕೆಲಸ ಮಾಡಲಿದ್ದಾರೆ.  

 ಪಾಂಡವಪುರ : ಕ್ಷಯ ಮುಕ್ತ ಭಾರತ ನಿರ್ಮಾಣಕ್ಕೆ ಸರ್ಕಾರದ ಕಾರ್ಯಕ್ರಮಗಳೊಂದಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಕ್ಯಾತನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಯಾತನಹಳ್ಳಿ ಆಶ್ರಯದಲ್ಲಿ ನಡೆದ ಕ್ಷಯ ಮುಕ್ತ ಗ್ರಾಪಂ ಪಂಚಾಯಿತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರಕಾರಗಳು 2025ಕ್ಕೆ ಕ್ಷಯ ಮುಕ್ತ ಭಾರತ ನಿರ್ಮಾಣ ಮಾಡಲು ಪಣತೊಟ್ಟಿದ್ದು, ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಮುಂದಿನ ನೂರು ದಿನಗಳ ಕಾಲ ಕ್ಷಯ ಮುಕ್ತ ಅಭಿಯಾನ ನಡೆಸುತ್ತಿವೆ ಎಂದರು.

ಕ್ಷಯ ರೋಗದ ಗುಣಲಕ್ಷಣಗಳು ಕಂಡುಬಂದರೆ ತಕ್ಷಣವೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಗ್ರಾಮಗಳಲ್ಲಿ ಮನೆ ಬಾಗಿಲಿಗೆ ಬಂದು ಸರ್ವೇ ಕಾರ್ಯ ನಡೆಸಲಿದ್ದಾರೆ. ಜನರಿಂದ ಕಫ ಪಡೆದು ತಪಾಸಣೆ ನಡೆಸಿ ರೋಗಪತ್ತೆ ಹಚ್ಚುವ ಕೆಲಸ ಮಾಡಲಿದ್ದಾರೆ. ಇದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಲ್ಸ್ ಪೋಲಿಯೋ ಮುಕ್ತ ಮಾಡಿರುವ ಮಾದರಿಯಲ್ಲಿ 2025ಕ್ಕೆ ಕ್ಷಯ ಮುಕ್ತ ಭಾರತ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ 100 ದಿನಗಳ ಕಾಲ ಕ್ಷಯ ಮುಕ್ತ ಅಭಿಯಾನ ಕಾರ್‍ಯಕ್ರಮ ಹಮ್ಮಿಕೊಂಡಿದೆ ಎಂದರು.

ಆರೋಗ್ಯ ಇಲಾಖೆಯಿಂದ ಆಶಾಕಿರಣ ಕಾರ್‍ಯಕ್ರಮದಲ್ಲಿ 60 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಕಣ್ಣಿನ ತಪಾಸಣೆ ನಡೆಸಲಾಗಿತ್ತು. ಕಣ್ಣಿನ ತಪಾಸಣೆ ನಡೆಸಿದ ಕನ್ನಡಕ ಅಗತ್ಯವಿರುವ ವೃದ್ಧರಿಗೆ ಸರಕಾರದಿಂದ ಒಟ್ಟು 70,207 ಕನ್ನಡಕ ಬಂದಿದ್ದು ಅವುಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

70 ವರ್ಷ ಮೇಲ್ಪಟ್ಟ ವೃದ್ಧರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಕಾರ್ಡ್ ಮಾಡಲಾಗುತ್ತಿದೆ. ಕಾರ್ಡ್ ಮಾಡಿಸಿರುವ ವೃದ್ಧರು ಅನಾರೋಗ್ಯಕ್ಕೆ ಒಳಗಾದರೆ ಅಂತಹವರಿಗೆ 5 ಲಕ್ಷದವರೆಗೂ ವಿಮೆ ಸೌಲಭ್ಯ ಪಡೆದುಕೊಳ್ಳಬಹುದು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಚಿನಕುರಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಡ್ ಮಾಡಲಾಗುತ್ತಿದೆ. ಜನರು ತಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್ ತಂದು ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಕ್ಯಾತನಹಳ್ಳಿ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ಶೀಲ ಅವರು ವೈಯುಕ್ತಿಕವಾಗಿ 5 ಮಂದಿ ಕ್ಷಯ ರೋಗಿಗಳಿಗೆ ಆಹಾರ ಕಿಟ್ ವಿತರಣೆ ಮಾಡಿದರು.

ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಸದಸ್ಯ ಪುಟ್ಟಸ್ವಾಮಿ, ಟಿಎಪಿಸಿಎಂಎಸ್ ನಿರ್ದೇಶಕ ದಯಾನಂದ, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ರೈತ ಮುಖಂಡ ರವಿಕುಮಾರ್, ಹೆಲ್ತ್ ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ, ವೈದ್ಯಾಧಿಕಾರಿ ಡಾ.ಶೀಲಾ, ಕ್ಷಯರೋಗ ಮೇಲ್ವೀಚಾರಕಿ ರಶ್ಮಿ ಸೇರಿದಂತೆ ಆರೋಗ್ಯ ಇಲಾಖೆ, ಆಶಾ ಹಾಗೂ ಅಂಗನವಾಡಿ ಕಾರ್‍ಯಕರ್ತರು, ಸಿಬ್ಬಂದಿ ಹಾಜರಿದ್ದರು.