ತಹಸೀಲ್ದಾರ್ ಕುರ್ಚಿಗಾಗಿ ಇಬ್ಬರ ನಡುವೆ ಹಗ್ಗಜಗ್ಗಾಟ!

| Published : Jan 05 2025, 01:32 AM IST

ಸಾರಾಂಶ

ಕೆಎಟಿ ಆದೇಶ ಪಡೆದು ಕಚೇರಿಗೆ ಆಗಮಿಸಿದ ತಹಸೀಲ್ದಾರ್‌ ವೆಂಕಟೇಶಪ್ಪ ಅವರು ಕೊಠಡಿ ಇಲ್ಲದೆ ಪರದಾಡಿದರು. ನಂತರ ಹಾಲಿ ತಹಸೀಲ್ದಾರ್ ಕೆ.ಎನ್.ಸುಜಾತ ಬಂದು ತಮ್ಮ ಕೊಠಡಿಯಲ್ಲಿ ಕುಳಿತುಕೊಂಡರು. ಇದರಿಂದ ಕಚೇರಿಯ ಸಿಬ್ಬಂದಿ ತ್ರಿಶಂಕು ಸ್ಥಿತಿಗೆ ಜಾರುವಂತಾಯಿತು. ಅಸಲಿ ತಹಸೀಲ್ದಾರ್ ಯಾರು ಎಂಬುದು ತಿಳಿಯದೆ ಗೊಂದಲ ಉಂಟಾಯಿತು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ವರ್ಗಾವಣೆಗೊಂಡಿದ್ದ ತಹಸೀಲ್ದಾರ್ ದಿಢೀರನೆ ಪ್ರತ್ಯೇಕ್ಷವಾಗಿ ಅಧಿಕಾರವಹಿಸಿಕೊಳ್ಳಲು ಯತ್ನಿಸಿದಾಗ ಹಾಲಿ ತಹಸೀಲ್ದಾರ್ ಕುರ್ಚಿ ಬಿಟ್ಟುಕೊಡಲು ನಿರಾಕರಿಸಿದ ಕಾರಣ ಕಚೇರಿಯಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಇದನ್ನು ಅರಿತ ಪೊಲೀಸರು ಕಚೇರಿ ಸುತ್ತ ಬಿಗಿ ಬಂದೋಬಸ್ತ್ ಕಲ್ಪಿಸಿದ ಘಟನೆ ಶನಿವಾರ ನಡೆಯಿತು.

ಕಳೆದ ೫ ತಿಂಗಳ ಹಿಂದೆ ತಹಸೀಲ್ದಾರ್ ಆಗಿ ತಾಲೂಕಿಗೆ ವರ್ಗಾವಣೆಗೊಂಡು ಬಂದಿದ್ದ ವೆಂಕಟೇಶಪ್ಪರ ಅವರನ್ನು ಸರ್ಕಾರ ದಿಢೀರನೆ ಡಿ.೩೧ರಂದು ಇಲ್ಲಿಂದ ಕೋಲಾರ ಜಿಲ್ಲಾಧಿಕಾರಿಗ ಕಚೇರಿಯಲ್ಲಿ ಪುರಸಭಾ ತಹಸಿಲ್ದಾರ್ ಆಗಿ ವರ್ಗಾವಣೆ ಮಾಡಿತ್ತು, ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಜರಾಯಿ ತಹಸಿಲ್ದಾರ್ ಆಗಿದ್ದ ಕೆ.ಎನ್.ಸುಜಾತರವರನ್ನು ಬಂಗಾರಪೇಟೆ ತಾಲೂಕು ತಹಸೀಲ್ದಾರ್‌ ಸ್ಥಾನಕ್ಕೆ ನೇಮಿಸಿತ್ತು.

5 ತಿಂಗಳ ಹಿಂದೆ ವರ್ಗಾವಣೆ

ಬಂಗಾರಪೇಟೆ ತಹಸೀಲ್ದಾರ್ ಆಗಿ ತಾವು ಪೂರ್ಣಾವಧಿ ಪೂರೈಸುವ ಮೊದಲೇ ಕೇವಲ ೫ತಿಂಗಳಿಗೆ ಯಾವುದೇ ಗಂಭೀರ ಆರೋಪಗಳಿಲ್ಲದಿದ್ದರೂ ಸಹ ವರ್ಗಾಯಿಸಿರುವುದನ್ನು ವೆಂಕಟೇಶಪ್ಪ ಕೆಎಟಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಶುಕ್ರವಾರ ಕೆಎಟಿ ವೆಂಕಟೇಶಪ್ಪರಿಗೆ ಹಿಂದೆ ಇದ್ದ ಸ್ಥಾನದಲ್ಲೆ ಮುಂದುವರೆಯಲು ಆದೇಶ ನೀಡಿತ್ತು. ಈ ಹಿನ್ನೆಲೆ ಶನಿವಾರ ಕೆಎಟಿ ಆದೇಶ ಪ್ರತಿಯೊಂದು ತಾಲೂಕು ಕಚೇರಿಗೆ ಬಂದು ಅಧಿಕಾರವಹಿಸಿಕೊಳ್ಳಲು ಮುಂದಾದರು.

ಕಚೇರಿ ಸಿಬ್ಬಂದಿಗೆ ಗೊಂದಲ

ಆದರೆ ಅವರು ಕಚೇರಿಗೆ ಬಂದಾಗ ಅವರ ಕೊಠಡಿ ಸಿಗದೆ ಪರದಾಡಿದರು. ನಂತರ ಹಾಲಿ ತಹಸೀಲ್ದಾರ್ ಕೆ.ಎನ್.ಸುಜಾತ ಬಂದು ತಮ್ಮ ಕೊಠಡಿಯಲ್ಲಿ ಕುಳಿತುಕೊಂಡರು. ವೆಂಕಟೇಶಪ್ಪಗೆ ಕುರ್ಚಿ ಸಿಗದೆ ಪ್ಯಾಂಟ್ರಿ ಕೊಠಡಿಯಲ್ಲಿ ಕುಳಿತುಕೊಂಡಾಗ ಕಚೇರಿಯ ಸಿಬ್ಬಂದಿ ತ್ರಿಶಂಕು ಸ್ಥಿತಿಗೆ ಜಾರುವಂತಾಯಿತು. ಅಸಲಿ ತಹಸೀಲ್ದಾರ್ ಯಾರು ಎಂಬುದು ತಿಳಿಯದೆ ಗೊಂದಲ ಉಂಟಾಯಿತು.

ಈ ಬಗ್ಗೆ ಪ್ರತಿಕ್ರಿಸಿದ ವೆಂಕಟೇಶಪ್ಪ, ತಮ್ಮನ್ನು ವರ್ಗಾವಣೆ ಮಾಡಿದ ಆದೇಶಕ್ಕೆ ಕೆಎಟಿ ತಡೆ ನೀಡಿದೆ. ಆದರೆ ಇಲ್ಲಿ ತಮ್ಮ ಕೊಠಡಿಗೆ ಬೀಗ ಹಾಕಲಾಗಿದೆ. ಅದರಿಂದ ಅನಿವಾರ್ಯವಾಗಿ ಪ್ಯಾಂಟ್ರಿ ಕೊಠಡಿಯಲ್ಲಿ ಕೂತಿರುವೆ. ಜಿಲ್ಲಾಧಿಕಾರಿಗಳಿಂದ ಮೂಮೆಂಟ್ ಆದೇಶ ಬರುವರೆಗೂ ಇಲ್ಲಿರುವೆ. ಬಳಿಕ ನನ್ನ ಕೊಠಡಿಗೆ ಹೋಗುವೆ ಎಂದರು. ಬಳಿಕ ಸರ್ಕಾರಿ ವಾಹನದಲ್ಲಿ ತೆರಳಿದರು.ಹಾಲಿ ತಹಸೀಲ್ದಾರ್‌ ಪ್ರತಿಕ್ರಿಯೆ

ಹಾಲಿ ತಹಸೀಲ್ದಾರ್ ಕೆ.ಎನ್.ಸುಜಾತ ಅ‍ವರು ಪ್ರತಿಕ್ರಿಯಿಸಿ, ತಮಗೆ ಜಿಲ್ಲಾಧಿಕಾರಿಗಳು ಬಂಗಾರಪೇಟೆಯಲ್ಲಿ ತಹಸೀಲ್ದಾರ್ ಆಗಿ ಅಧಿಕಾರವಹಿಸಿಕೊಳ್ಳಲು ಆದೇಶ ನೀಡಿದ್ದರಿಂದ ಅಧಿಕಾರವಹಿಸಿಕೊಂಡಿರುವೆ. ವರ್ಗಾವಣೆಗೊಂಡಿದ್ದ ವೆಂಕಟೇಶಪ್ಪರಿಗೆ ಕೆಎಟಿ ವರ್ಗಾವಣೆಗೆ ತಡೆ ನೀಡಿದ್ದರೆ ಜಿಲ್ಲಾಧಿಕಾರಿಗಳಿಂದ ಅಧಿಕಾರವಹಿಸಿಕೊಳ್ಳಲು ಆದೇಶ ಪತ್ರ ತರಲಿ ನಾನು ಯಾವುದೇ ರದ್ದಾಂತ ಮಾಡದೆ ಅವರಿಗೆ ಅಧಿಕಾರವಹಿಸಿಕೊಡುವೆ. ಅದು ಬಿಟ್ಟು ಏಕಾಏಕಿ ಬಂದು ಕುರ್ಚಿ ಬಿಟ್ಟುಕೊಡಿ ಎಂದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.