ಶಿರಸಿಯ ತುಳಸಿ ಹೆಗಡೆ ವಿಶ್ವದಾಖಲೆಗೆ ಸೇರ್ಪಡೆ

| Published : Jul 03 2024, 12:15 AM IST

ಶಿರಸಿಯ ತುಳಸಿ ಹೆಗಡೆ ವಿಶ್ವದಾಖಲೆಗೆ ಸೇರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಅತ್ಯಂತ ಕಿರಿಯ ವಯಸ್ಸಿನಲ್ಲೇ ವಿಶ್ವಶಾಂತಿಗೆ ಯಕ್ಷ ನೃತ್ಯ ಮೂಲಕ ಕೊಡುಗೆ ನೀಡುತ್ತಿರುವ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಹೆಸರು ಇದೀಗ ಜಾಗತಿಕ ಮಟ್ಟದಲ್ಲೂ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ಅತ್ಯಂತ ಕಿರಿಯ ವಯಸ್ಸಿನಲ್ಲೇ ವಿಶ್ವಶಾಂತಿಗೆ ಯಕ್ಷ ನೃತ್ಯ ಮೂಲಕ ಕೊಡುಗೆ ನೀಡುತ್ತಿರುವ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಹೆಸರು ಇದೀಗ ಜಾಗತಿಕ ಮಟ್ಟದಲ್ಲೂ ದಾಖಲಾಗಿದೆ. ಲಂಡನ್ ಮೂಲದ ಪ್ರತಿಷ್ಠಿತ ವಲ್ಡ್‌ ರೆಕಾರ್ಡ್ ಸಂಸ್ಥೆಯು ತುಳಸಿ ಹೆಗಡೆ ಹೆಸರನ್ನು ತನ್ನ ವಿಶ್ವದಾಖಲೆಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಂಡಿದೆ. ಯಕ್ಷಗಾನ ಕಲಾ ಪ್ರಕಾರದಿಂದ ವಿಶ್ವಶಾಂತಿಗೆ ಈವರೆಗೆ 9 ಕಲಾ ಕುಸುಮದ ಮೂಲಕ ನೀಡುತ್ತಿರುವ ಕೊಡುಗೆಗಳನ್ನು ಗಮನಿಸಿ ಮಕ್ಕಳ ವಿಭಾಗ ತನ್ನ ದಾಖಲಾತಿಯಲ್ಲಿ ಸೇರಿಸಿಕೊಂಡಿದೆ.

ಬೆರಳ ತುದಿಯಲ್ಲಿ ನರ್ತನ ಮಾಡುವ ವಿದೇಶವೊಂದರ ನೃತ್ಯ ಕಲಾ ಪ್ರಕಾರ ಹೊರತುಪಡಿಸಿದರೆ ಈವರೆಗೆ ಪ್ರಪಂಚದ ಯಾವುದೇ ಕಲಾ ಪ್ರಕಾರ ಈ ದಾಖಲಾತಿ ಪಟ್ಟಿಗೆ ಸೇರ್ಪಡೆ ಆಗಿರಲಿಲ್ಲ ಎಂದು ಈ ಸಂಸ್ಥೆ ತಿಳಿಸಿದೆ. ಈ ದಾಖಲೆಗೆ ತುಳಸಿ ಹೆಗಡೆ ಹೆಸರು ಸೇರ್ಪಡೆಯಿಂದ ಯಕ್ಷ ರೂಪಕದ ಮೂಲಕ ಯಕ್ಷಗಾನದ ಹೆಸರೂ ಇದೇ ಪ್ರಥಮ ಬಾರಿಗೆ ಸೇರಿದಂತಾಗಿದೆ.

ಶಿರಸಿ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ೧೦ನೇ ತರಗತಿ ಓದುತ್ತಿರುವ ತುಳಸಿ ಹೆಗಡೆ ತನ್ನ 3 ವರ್ಷದಿಂದಲೇ ಯಕ್ಷಗಾನ ಕ್ಷೇತ್ರಕ್ಕೆ ಬಾಲ ಹೆಜ್ಜೆ ಇಟ್ಟವಳು. ಐದೂವರೆ ವರ್ಷದಿಂದ ವಿಶ್ವಶಾಂತಿ ರೂಪಕಗಳನ್ನು ಪ್ರಸ್ತುತಗೊಳಿಸುತ್ತಿದ್ದಾಳೆ. ರಾಜ್ಯ, ಹೊರ ರಾಜ್ಯಗಳಲ್ಲಿ ೮೫೦ಕ್ಕೂ ಅಧಿಕ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾಳೆ.