ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ 24ನೇ ವರ್ಷದ ‘ಕೆಮ್ತೂರು ದೊಡ್ಡಣ್ಣ ಶೆಟ್ರೆನ ನೆಂಪುದ ತುಳು ನಾಟಕ ಪರ್ಬ’ಸೋಮವಾರ ಉದ್ಘಾಟನೆಗೊಂಡಿತು.
‘ಕೆಮ್ತೂರು ದೊಡ್ಡಣ್ಣ ಶೆಟ್ರೆನ ತುಳು ನಾಟಕ ಪರ್ಬ’ ಉದ್ಘಾಟನೆ
ಉಡುಪಿ: ಮಾಧ್ಯಮಗಳೇ ಇಲ್ಲದಿದ್ದ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಈ ಭಾಗದಲ್ಲಿ ತುಳು ನಾಟಕಗಳು ಸಾಮಾಜಿಕ ಜಾಗೃತಿ ಮೂಡಿಸುವ ಮಾಧ್ಯಮಗಳಾಗಿದ್ದವು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ.ಸೋಮವಾರ ಇಲ್ಲಿನ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ 24ನೇ ವರ್ಷದ ‘ಕೆಮ್ತೂರು ದೊಡ್ಡಣ್ಣ ಶೆಟ್ರೆನ ನೆಂಪುದ ತುಳು ನಾಟಕ ಪರ್ಬ’ವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಭಾಗದಲ್ಲಿ ದೊಡ್ಡಣ್ಣ ಶೆಟ್ರು, ಮಂಗಳೂರು ಭಾಗದಲ್ಲಿ ತಿಂಗಳಾಯ ಸಹೋದರರು ತುಳು ನಾಟಕಗಳ ಮೂಲಕ ಸಾಮಾಜಿಕ ಚಳವಳಿಯನ್ನೇ ಹುಟ್ಟು ಹಾಕಿದ್ದರು. ದೊಡ್ಡಣ್ಣ ಶೆಟ್ರು ತಾವೇ ಬರೆದು ನಿರ್ದೇಶಿಸಿ ನಟಿಸುತಿದ್ದ ನಾಟಕಗಳಲ್ಲಿ ಕೇವಲ ಹಾಸ್ಯ ಮಾತ್ರವಲ್ಲ, ಮೂಢನಂಬಿಕೆಗಳ ವಿರುದ್ಧ ಜಾಗೃತಿ, ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ, ದೇಶಾಭಿಮಾನಕ್ಕೆ ಪ್ರೇರಣೆ ನೀಡುತಿದ್ದವು. ತುಳು ನಾಟಕ ರಂಗದಲ್ಲಿ ಪ್ರಪ್ರಥಮ ವೃತ್ತಿಪರ ನಾಟಕ ತಂಡವನ್ನು ಕಟ್ಟಿದ ಮಹಿಳಾ ಪಾತ್ರಗಳನ್ನು ಮಹಿಳೆಯರಿಂದಲೇ ಮಾಡಿಸುತ್ತಿದ್ದ ದೊಡ್ಡಣ್ಣ ಶೆಟ್ರ, ಜನ್ಮ ಶತಮಾನೋತ್ಸವವನ್ನು ಮುಂದಿನ ವರ್ಷ ತುಳು ಸಾಹಿತ್ಯ ಅಕಾಡೆಮಿ ವಿಶೇಷ ರೀತಿಯಲ್ಲಿ ನಡೆಸಲುದ್ದೇಶಿಸಿದೆ ಎಂದರು.ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೆ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ ವನಿತಾ ಮಯ್ಯ ಆಗಮಿಸಿದ್ದರು.
ತುಳುಕೂಟದ ಸ್ಥಾಪಕಾಧ್ಯಕ್ಷ ಡಾ. ಭಾಸ್ಕರಾನಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ತುಳು ಸಾಹಿತ್ಯ ಅಕಾಡೆಮಿ ರೆಜಿಸ್ಟ್ರಾರ್ ಪೂರ್ಣಿಮಾ, ಕೆಮ್ತೂರು ಕುಟುಂಬದ ವಿಜಯಕುಮಾರ್ ಶೆಟ್ಟಿ, ತುಳುಕೂಟದ ಉಪಾಧ್ಯಕ್ಷ ಶೋಭಾ ಶೆಟ್ಟಿ, ದಿವಾಕರ ಸನಿಲ್, ಕೋಶಾಧಿಕಾರಿ ಚೈತನ್ಯ ಎಂ.ಜಿ. ಹಾಜರಿದ್ದರು.ತುಳುಕೂಟದ ಉಪಾಧ್ಯಕ್ಷ ಭುವನಪ್ರಸಾದ್ ಹೆಗ್ಡೆ ಸ್ವಾಗತಿಸಿದರು, ವಿ. ಕೆ. ಯಾದವ್ ನಿರೂಪಿಸಿದರು. ನಾಟಕ ಸ್ಪರ್ಧೆ ಸಂಚಾಲಕ ಬಿ. ಪ್ರಭಾಕರ್ ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜ್ಯೋತಿ ಪ್ರಾರ್ಥಿಸಿದರು, ಪ್ರ. ಕಾರ್ಯದರ್ಶಿ ಗಂಗಾಧರ್ ಕಿದಿಯೂರು ವಂದಿಸಿದರು.ಕಲಾಮಂದಿರ ಉಡುಪಿ ಇವರಿಂದ ಪ್ರಥಮ ದಿನದ ನಾಟಕ ‘ಪಿಲಿ’ ಪ್ರದರ್ಶನಗೊಂಡಿತು.