ಸಾರಾಂಶ
ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 96ನೇ ಪುಣ್ಯ ತಿಥಿಯಂದು ತುಳುವೆರೆ ಬದ್ ಕ್ (ಕೂಡುಕಟ್ಟ್ - ಕಟ್ಟ್ ಪಾಡ್) ವಿಚಾರ ಸಂಕಿರಣ ನಡೆಯಿತು.
ಕನ್ನಡಪ್ರಭ ವಾರ್ತೆ ಪಡುಬಿದ್ರಿ
ನಮ್ಮ ತುಳು ಸಂಸ್ಕೃತಿ ಬಹು ಸಂಸ್ಕೃತಿ. ಆದರೆ ಸಾಂಸ್ಕೃತಿಕ ಸಂಘರ್ಷದಲ್ಲಿ ನಾವಿದ್ದೇವೆ. ಬದಲಾವಣೆಗೆ ಒಗ್ಗಿಕೊಳ್ಳಬೇಕಾಗಿದೆ. ಆದರೆ ನಮ್ಮ ಸಂಸ್ಕೃತಿಯನ್ನು ಮೂಲಸ್ವರೂಪದಲ್ಲಿ ಅಳವಡಿಸಲಾಗದಿದ್ದರೂ, ಸಾಧ್ಯವಿದ್ದಷ್ಟು ಪಾಲಿಸೋಣ ಎಂದು ಮೂಡಬಿದ್ರಿ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ ಹೇಳಿದರು.ಅವರು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ಪಡುಬಿದ್ರಿ ಘಟಕಗಳ ಜಂಟಿ ಆಶ್ರಯದಲ್ಲಿ ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಜರುಗಿದ ಬ್ರಹ್ಮಶ್ರೀ ನಾರಾಯಣಗುರುಗಳ 96ನೇ ಪುಣ್ಯ ತಿಥಿಯಂದು ತುಳುವೆರೆ ಬದ್ ಕ್ (ಕೂಡುಕಟ್ಟ್ - ಕಟ್ಟ್ ಪಾಡ್) ವಿಚಾರ ಸಂಕಿರಣದ ಸಮನ್ವಯಕಾರರಾಗಿ ಮಾತನಾಡಿದರು.ಯುವ ಚಿಂತಕ ಸಂತೋಷ್ ನಂಬಿಯಾರ್ ವಿಚಾರ ಮಂಡಿಸಿ, ತುಳುನಾಡಿನ ದೈವಾರಾಧನೆ ಜಾತಿ ಮತ ಧರ್ಮ ಮೀರಿದವು. ಆರಾಧನೆ ಬದುಕಿನ ನಡುವೆ ಕೂಡುಕಟ್ಟು ಬಹುಮುಖ್ಯ. ಹುಟ್ಟು ಸಾವಿನವರೆಗೂ ಇದು ಅನಿವಾರ್ಯವಾಗಿತ್ತು ಎಂದರು.ಜಾನಪದ ಚಿಂತಕ ಜಯ ಎಸ್. ಶೆಟ್ಟಿ ಪದ್ರ ವಿಚಾರ ಮಂಡಿಸಿ, ದ್ರಾವಿಡ ಮೂಲದ ತುಳುವರ ಬದುಕು ಕೃಷಿ ಆಧಾರಿತವಾಗಿತ್ತು. ಇಂದು ಕೃಷಿ ಹಿಂದುಳಿಯಲು ಕೌಟುಂಬಿಕತೆಯೇ ಕಾರಣ ಎಂದರು.ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ವಹಿಸಿದ್ದರು.ಈ ಸಂದರ್ಭ ವೈದ್ಯಕೀಯ ಶಿಕ್ಷಣದ ಸ್ನಾತಕೋತ್ತರ ವಿಷಯದಲ್ಲಿ 6ನೇ ರ‍್ಯಾಂಕ್ ಗಳಿಸಿದ ಡಾ. ಐಶ್ವರ್ಯ ಸಿ ಅಂಚನ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪಡುಬಿದ್ರಿ ಯುವವಾಹಿನಿ ಘಟಕದ ಅಧ್ಯಕ್ಷೆ ಶಶಿಕಲಾ ಯಶೋಧರ್, ನಾರಾಯಣಗುರು ಮಂದಿರದ ಪ್ರಧಾನ ಅರ್ಚಕ ಚಂದ್ರಶೇಖರ ಶಾಂತಿ, ಪಡುಬಿದ್ರಿ ಘಟಕದ ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕ ಭಾಸ್ಕರ್ ಎನ್ ಅಂಚನ್, ಬಿಲ್ಲವ ಸಂಘದ ಕಾರ್ಯದರ್ಶಿ ಲಕ್ಷ್ಮಣ ಡಿ ಪೂಜಾರಿ, ಯುವವಾಹಿನಿ ಘಟಕದ ಕಾರ್ಯದರ್ಶಿ ಸುಜಾತ ಪ್ರಸಾದ್ ಉಪಸ್ಥಿತರಿದ್ದರು.ಸುಜಿತ್ ಪೂಜಾರಿ ಪ್ರಸ್ತಾವನೆಗೈದರು. ರವಿರಾಜ್ ಕೋಟ್ಯಾನ್ ಮತ್ತು ಡಾ. ಐಶ್ವರ್ಯ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ಎನ್ ಅಂಚನ್ ವಂದಿಸಿದರು.