ತುಮಕೂರು ದಸರಾ; ಈ ಬಾರಿಯೂ ಹಲವು ವಿಶೇಷ: ಡಿಸಿ

| Published : Aug 01 2025, 11:45 PM IST

ತುಮಕೂರು ದಸರಾ; ಈ ಬಾರಿಯೂ ಹಲವು ವಿಶೇಷ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯ ತುಮಕೂರು ದಸರಾದಲ್ಲಿ ಪಂಜಿನ ಕವಾಯತು ಸೇರಿದಂತೆ ಹಲವು ವಿಶೇಷತೆಗಳು ಇರಲಿವೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಈ ಬಾರಿಯ ತುಮಕೂರು ದಸರಾದಲ್ಲಿ ಪಂಜಿನ ಕವಾಯತು ಸೇರಿದಂತೆ ಹಲವು ವಿಶೇಷತೆಗಳು ಇರಲಿವೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ತುಮಕೂರು ದಸರಾ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು, ಈ ಬಾರಿಯ ತುಮಕೂರು ದಸರಾ ಕಾರ್ಯಕ್ರಮದಲ್ಲಿ ನವರಾತ್ರಿ ವಿಶೇಷ ಪೂಜಾ ಕೈಂಕರ್ಯಗಳ ಜೊತೆಗೆ ಮೈಸೂರು ಮಾದರಿಯಲ್ಲಿ ಪಂಜಿನ ಕವಾಯತು ಕಾರ್ಯಕ್ರಮವೂ ಇರಲಿದೆ. ಸುಮಾರು 600ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ಈ ಕವಾಯತಿನಲ್ಲಿ ಭಾಗವಹಿಸಲಿದ್ದು ಇವರಿಗೆ ಚೆನ್ನೈ ಮೂಲದ ಪರಿಣಿತರು ತರಬೇತಿ ನೀಡಲಿದ್ದಾರೆ ಎಂದರು.

ಪ್ರಸಕ್ತ ಸಾಲಿನ ದಸರಾ ಆಚರಣೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಈಗಾಗಲೇ ತಳ ಹಂತದ ಸಿದ್ಧತೆಗಳು ನಡೆಯುತ್ತಿವೆ. ಕಳೆದ ವರ್ಷದಂತೆ ಸಾಂಪ್ರದಾಯಿಕ ಕಾರ್ಯಕ್ರಮಗಳ ಜೊತೆಗೆ ಈ ಬಾರಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕೆಂದು ಅವರು ಸೂಚಿಸಿದರು.

ತುಮಕೂರು ನಗರದಲ್ಲಿ ವಿಶೇಷ ದೀಪಾಲಂಕಾರ, ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಸಾಂಪ್ರದಾಯಿಕ ನಾಡ ಕುಸ್ತಿ, ಸ್ಥಳೀಯರಿಂದ ದಿನವೂ ಸಾಂಸ್ಕೃತಿಕ ಕಾರ್ಯಕ್ರಮ, ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸುವ ತಾತ್ಕಾಲಿಕ ದೇವಾಲಯದಲ್ಲಿ ಚಾಮುಂಡೇಶ್ವರಿ ದೇವಿಗೆ ದಿನವೂ ವಿಶೇಷ ಅಲಂಕಾರ ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಕಳೆದ ವರ್ಷದಂತೆ ಈ ವರ್ಷವೂ ಕನ್ನಡ ಚಿತ್ರರಂಗದ ಖ್ಯಾತ ನಟ ನಟಿಯರು, ಹೆಸರಾಂತ ಗಾಯಕರಿಂದ ವಿಶೇಷ ಮನರಂಜನಾ ಕಾರ್ಯಕ್ರಮಗಳು ಇರಲಿವೆ. ಈಗಾಗಲೇ ಕೆಲವರೊಂದಿಗೆ ಸಂಪರ್ಕದಲ್ಲಿದ್ದು ಸದ್ಯದಲ್ಲಿಯೇ ಸಿದ್ಧತೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತೊಂದು ಸಭೆ ನಡೆಸಲಿದ್ದಾರೆ ಹಾಗೂ ತಯಾರಿಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್‌.ತಿಪ್ಪೇಸ್ವಾಮಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಪುರುಷೋತ್ತಮ, ಸಿ.ಗೋಪಾಲ್‌ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.