ತುಮಕೂರ: ಬಾಕಿ ಬಿಲ್ ಪಾವತಿಗೆ ಗುತ್ತಿಗೆದಾರರ ಆಗ್ರಹ

| Published : Feb 07 2024, 01:46 AM IST

ಸಾರಾಂಶ

ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕಾಮಗಾರಿಗಳ ಬಿಲ್ಲನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಕಂಟ್ರಾಕ್ಟರ್‌ ಅಸೋಸಿಯೇಷನ್ ಸಭೆಯಲ್ಲಿ ಗುತ್ತಿಗೆದಾರರು ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕಾಮಗಾರಿಗಳ ಬಿಲ್ಲನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಕಂಟ್ರಾಕ್ಟರ್‌ ಅಸೋಸಿಯೇಷನ್ ಸಭೆಯಲ್ಲಿ ಗುತ್ತಿಗೆದಾರರು ಸರ್ಕಾರವನ್ನು ಒತ್ತಾಯಿಸಿದರು.

ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ತಮ್ಮ ಸಮಸ್ಯೆ ಕುರಿತು ಚರ್ಚೆ ನಡೆಸಿದ ಗುತ್ತಿಗೆದಾರರು, ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯಲು ತೀರ್ಮಾನ ಮಾಡಿದರು.

ಜಿಲ್ಲಾ ಕಂಟ್ರಾಕ್ಟರ್‌ ಅಸೋಸಿಯೇಷನ್ ಅಧ್ಯಕ್ಷ ಎ.ಡಿ. ಬಲರಾಮಯ್ಯ ಮಾತನಾಡಿ, ಜಿಲ್ಲೆಯ ವಿವಿಧ ಇಲಾಖೆಗಳ ಸುಮಾರು 2 ಸಾವಿರ ಕೋಟಿ ರು. ಕಾಮಗಾರಿ ಬಿಲ್ ಬಾಕಿ ಇದೆ. ಸಾಲ-ಸೋಲ ಮಾಡಿ ಗುತ್ತಿಗೆದಾರರು ಕಾಮಗಾರಿ ಮುಗಿಸಿದ್ದರೂ ಸರ್ಕಾರ ಬಿಲ್ ಪಾವತಿಸಿಲ್ಲ, ಮಾಡಿದ ಸಾಲದ ಬಡ್ಡಿ ಕಟ್ಟಲಾಗದೆ ಗುತ್ತಿಗೆದಾರರು ಸಂಕಟಪಡುತ್ತಿದ್ದಾರೆ ಎಂದರು.

2 ಸಾವಿರ ಕೋಟಿ ಪೈಕಿ ಈಗಿನ ಸರ್ಕಾರ ಒಂದೆರಡು ಬಾರಿ ಎಲ್‌ಓಸಿ ಬಿಡುಗಡೆ ಮಾಡಿದೆ. ಇದು ಬಾಕಿ ಬಿಲ್‌ನ ಶೇಕಡ ಹತ್ತರಷ್ಟೂ ಇಲ್ಲ. ಇಲಾಖೆಗಳ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ವಿಪರೀತವಾಗಿದೆ. ಕೆಲವು ಇಲಾಖೆಗಳ ಅಧಿಕಾರಿಗಳು ಮನಸಿಗೆ ಬಂದಂತೆ ಷರತ್ತು ಹಾಕಿ ಗುತ್ತಿಗೆದಾರರಿಗೆ ಹಿಂಸೆ ನೀಡುತ್ತಿದ್ದಾರೆ. ನಿರ್ವಹಿಸಿದ ಕಾಮಗಾರಿಗೆ ಸಕಾಲಕ್ಕೆ ಬಿಲ್ ಪಾವತಿಯಾಗದೆ, ಬ್ಯಾಂಕ್ ಸಾಲ ತೀರಿಸಲಾಗದೆ, ಬ್ಯಾಂಕ್ ಅಧಿಕಾರಿಗಳ ಹಿಂಸೆಗೆ ಸಾಮಾನ್ಯ ಗುತ್ತಿಗೆದಾರರು ಕಂಗಾಲಾಗಿದ್ದಾರೆ ಎಂದು ಹೇಳಿದರು.

ಹಣ ಒದಗಿಸದಿದ್ದರೆ ಕಾಮಗಾರಿಗೆ ಟೆಂಡರ್‌ ಕರೆಯಬಾರದು. 1:1 ಗ್ರಾಂಟ್ ಇದ್ದರೆ ಮಾತ್ರ ಕಾಮಗಾರಿಗೆ ಟೆಂಡರ್‌ ಕರೆಯಬೇಕು. ಕೇಂದ್ರ ಸರ್ಕಾರಗಳ ಯೋಜನೆಗಳಲ್ಲಿ 1:1 ಗ್ರಾಂಟ್ ಅನುಸರಿಸಿ ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗುತ್ತದೆ. ಮುಗಿದ ನಂತರ ಬಿಲ್ ಪಾವತಿಯಾಗುತ್ತದೆ. ರಾಜ್ಯ ಸರ್ಕಾರವೂ ಇದೇ ಮಾದರಿ ಅನುಸರಿಸಬೇಕು ಎಂದು ಎ.ಡಿ. ಬಲರಾಮಯ್ಯ ಒತ್ತಾಯಿಸಿದರು.

ಗುತ್ತಿಗೆದಾರರ ಸಮಸ್ಯೆ ಬಗ್ಗೆ ಸಾಕಷ್ಟ ಬಾರಿ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೂ ಸರ್ಕಾರ ಗುತ್ತಿಗೆದಾರರ ಸಮಸ್ಯೆ ನಿವಾರಿಸುವ ಪ್ರಯತ್ನ ಮಾಡಿಲ್ಲ. ಹೀಗೆ ನಿರ್ಲಕ್ಷ ಮಾಡಿದರೆ ಗುತ್ತಿಗೆದಾರರು, ಅವರ ಕುಟುಂಬಗಳು ಆರ್ಥಿಕ ಸಂಕಷ್ಟಗಳಿಗೆ ಬಲಿಯಾಗುತ್ತಾರೆ. ಇದು ಕೇವಲ ಗುತ್ತಿಗೆದಾರರ ಸಮಸ್ಯೆ ಮಾತ್ರವಲ್ಲ, ರಾಜ್ಯದ ಆರ್ಥಿಕ ದಿವಾಳಿತನಕ್ಕೂ ಕಾರಣವಾಗುತ್ತದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮರ್ಪಕ ತೀರ್ಮಾನ ಮಾಡಿ ಕಾಮಗಾರಿಯ ಬಾಕಿ ಬಿಲ್ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಅಸೋಸಿಯೇಷನ್ ಕಾರ್ಯದರ್ಶಿ ಬಿ.ಪಿ. ಸುರೇಶ್‌ ಕುಮಾರ್‌, ಖಜಾಂಚಿ ಕೋದಂಡರಾಮು, ಸಹಕಾರ್ಯದರ್ಶಿ ಸಿ.ಆರ್‌. ಹರೀಶ್ ಸೇರಿದಂತೆ ಜಿಲ್ಲೆಯ ಗುತ್ತಿಗೆದಾರು ಸಭೆಯಲ್ಲಿ ಭಾಗವಹಿಸಿ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು.