ಸಾರಾಂಶ
ಕಲ್ಪತರು ಸಾಂಸ್ಕೃತಿಕ ವೇದಿಕೆ, ತುಮಕೂರು ವತಿಯಿಂದ ಫೆ.24 ರ ಶನಿವಾರ ಮತ್ತು ಫೆ.25 ರ ಭಾನುವಾರ ಎರಡು ದಿನಗಳ ಸಾಂಸ್ಕೃತಿಕ ಹಬ್ಬವನ್ನು ನಗರ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ತುಮಕೂರು
ಕಲ್ಪತರು ಸಾಂಸ್ಕೃತಿಕ ವೇದಿಕೆ, ತುಮಕೂರು ವತಿಯಿಂದ ಫೆ.24 ರ ಶನಿವಾರ ಮತ್ತು ಫೆ.25 ರ ಭಾನುವಾರ ಎರಡು ದಿನಗಳ ಸಾಂಸ್ಕೃತಿಕ ಹಬ್ಬವನ್ನು ನಗರ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕರುನಾಡ ವಿಜಯಸೇನೆಯ ರಾಜ್ಯಾಧ್ಯಕ್ಷ ಎಚ್.ಎನ್. ದೀಪಕ್ ತಿಳಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಸ್ಕೃತಿಕ ಹಬ್ಬದ ಅಂಗವಾಗಿ ಖ್ಯಾತ ಗಾಯಕರು, ಕಲಾವಿದರಿಂದ ನೃತ್ಯ, ಗಾಯನ, ಸಂಗೀತ ಪರಿಕರಗಳ ವಾದನದ ಜೊತೆಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರಿಗೆ ಕಲ್ಪತರುಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಫೆ.24ರ ಶನಿವಾರ ಸಂಜೆ 5.30ಕ್ಕೆ ಸಾಂಸ್ಕೃತಿಕ ಹಬ್ಬದ ಮೊದಲ ದಿನದ ಕಾರ್ಯಕ್ರಮ ಆರಂಭವಾಗಲಿದ್ದು, ಸರಿಗಮಪ ಖ್ಯಾತಿಯ ಸ್ಥಳೀಯ ಪ್ರತಿಭೆ ಕಂಬದ ರಂಗಯ್ಯ ಮತ್ತು ತಂಡದವರಿಂದ ಗಾಯನ, ನೃತ್ಯ ಕಾರ್ಯಕ್ರಮಗಳು ಜರುಗಿದರೆ, ರ‍್ಯಾಫ್ ಗಾಯಕ ಅಲೋಕ್ ಅವರಿಂದ ಗಾಯನ ಹಾಗೂ ಗಿಚ್ಚಿಗಿಲಿಗಿಲಿ ತಂಡದ ಸದಸ್ಯರಿಂದ ಹಾಸ್ಯ ಕಾರ್ಯಕ್ರಮಗಳು ರಾತ್ರಿ 11 ಗಂಟೆಯವರೆಗೆ ಜರುಗಲಿವೆ.ಫೆ.25ರ ಭಾನುವಾರ ಸಂಜೆ ಐದು ಮೂವತ್ತಕ್ಕೆ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕರಾದ ವಿಜಯಪ್ರಕಾಶ್, ಅನುರಾಧ ಭಟ್, ಅನುಪಮ ಭಟ್ ಹಾಗೂ ತಂಡದವರಿಂದ ಗಾಯನ ನಡೆಯಲಿದೆ. ಇವರೊಂದಿಗೆ ಇಂದು ನಾಗರಾಜ್, ಶಿವಾನಿ, ಅಂಕಿತ ಕುಂಡು ಸೇರಿದಂತೆ ಹಲವಾರು ಉದಯೋನ್ಮುಖ ಗಾಯಕರು ಕಾರ್ಯಕ್ರಮದಲ್ಲಿ ತಮ್ಮ ಗಾನಸುಧೆಯನ್ನು ಹರಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರುನಾಡ ವಿಜಯಸೇನೆಯ ಸಲಹೆಗಾರರಾದ ಡಾ. ಸುದೀಪ್ ಕುಮಾರ್, ಕನ್ನಡ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಂಕರ್ ಎಸ್., ತನುಜ್‌ಕುಮಾರ್, ಕರುನಾಡ ವಿಜಯಸೇನೆಯ ರಾಜ್ಯ ಉಪಾಧ್ಯಕ್ಷ ರಂಜನ್, ಸೋಮಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.ಫೋಟೊಸುದ್ದಿಗೋಷ್ಠಿಯಲ್ಲಿ ಕರುನಾಡ ವಿಜಯಸೇನೆಯ ರಾಜ್ಯಾಧ್ಯಕ್ಷ ಎಚ್.ಎನ್. ದೀಪಕ್ ಮಾತನಾಡಿದರು.