ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ವಿಶ್ವವಿದ್ಯಾಲಯ ಆವರಣದಲ್ಲಿ ಸೋಮವಾರ ನಡೆದ ದಸರಾ ವಿಶೇಷ ಹೆಲಿರೈಡ್‌ಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಚಾಲನೆ ನೀಡಿದರು.ದಸರಾ ಪ್ರಯುಕ್ತ ವಿಶೇಷ ಹೆಲಿರೈಡ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಹೆಲಿಕಾಪ್ಟರ್‌ನಲ್ಲಿ ನಗರದ ಸುತ್ತ ಸಂಚರಿಸಿ ಹೊಸ ಅನುಭವ ಪಡೆಯಬಹುದಾಗಿದೆ. ಆನ್‌ಲೈನ್ ಮೂಲಕ ಹೆಸರನ್ನು ನೋಂದಣಿ ಮಾಡಿಕೊಂಡು ಸಾರ್ವಜನಿಕರು ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮಾಡಿ 15 ನಿಮಿಷಗಳ ಕಾಲ ತುಮಕೂರಿನ ಪಕ್ಷಿ ನೋಟವನ್ನು ವೀಕ್ಷಿಸಬಹುದು ಎಂದು ತಿಳಿಸಿದರು. ಹೆಲಿಕಾಪ್ಟರ್ ಪ್ರವಾಸ ಮಾಡುವ ಅನುಭವ ಸುಲಭವಾಗಿ ದೊರೆಯುವುದಿಲ್ಲ. ದಸರಾ ಪ್ರಯುಕ್ತ ತುಮಕೂರಿನ ಜನತೆಗೆ ಹೆಲಿರೈಡ್ ಅವಕಾಶವನ್ನು ಕಲ್ಪಿಸಲಾಗಿದೆ. ಹೆಲಿಕಾಪ್ಟರ್‌ನಲ್ಲಿ ಪ್ರವಾಸ ಮಾಡಿ ಎತ್ತರದಿಂದ ತುಮಕೂರು ನಗರದ ಸೌಂದರ್ಯವನ್ನು ಸವಿಯಬಹುದು. ನಗರದ ನಾಮದ ಚಿಲುಮೆ, ಮಂದರಗಿರಿ ಬಸದಿಬೆಟ್ಟ, ಅಮಾನಿಕೆರೆ, ಶ್ರೀ ಸಿದ್ಧಗಂಗಾ ಮಠ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳನ್ನು ವೀಕ್ಷಿಸಬಹುದು ಎಂದು ತಿಳಿಸಿದರು. ಹೆಲಿರೈಡ್‌ನಲ್ಲಿ ಸುತ್ತಾಡಿ ಬಂದ ಪೂಜಾ ಮೇರಿ ಹಾಗೂ ಅನಿಲ್ ಅವರು ಸಚಿವರೊಂದಿಗೆ ತಮ್ಮ ಮೊದಲ ಅನುಭವವನ್ನು ಹಂಚಿಕೊಳ್ಳುತ್ತಾ, ಹೆಲಿಕಾಪ್ಟರ್‌ನಲ್ಲಿ ಹಾರಾಟ ನಮ್ಮ ಜೀವನದಲ್ಲೇ ಮರೆಯಲಾಗದ ಕ್ಷಣ. ಚಂದ್ರ ಲೋಕಕ್ಕೆ ಹೋಗಿ ಬಂದ ಅನುಭವವಾಗಿದೆ. ತುಮಕೂರಿನ ಸಂಪೂರ್ಣ ನಗರವನ್ನು ಪಕ್ಷಿಯ ನೋಟದಲ್ಲಿ ನೋಡುವ ಅವಕಾಶ ದೊರೆಯಿತು. ಇಂತಹ ಕಾರ್ಯಕ್ರಮಗಳು ಜನರಲ್ಲಿ ಹೊಸ ಉತ್ಸಾಹ ಮೂಡಿಸುತ್ತವೆ, ಎಂದು ಹೇಳಿದರು.ಈ ಸಂದರ್ಭದಲ್ಲಿ ತುಮುಲ್ ಅಧ್ಯಕ್ಷ ಹಾಗೂ ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಆಶೋಕ್, ಮಹಾನಗರ ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.