ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಸುಡು ಬಿಸಿಲಿದ್ದರೂ ಸಿದ್ಧಗಂಗಾ ಕ್ಷೇತ್ರದಲ್ಲಿ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ನಡೆಯುತ್ತಿರುವ ದನಗಳ ಪರಿಷೆ ಗಮನಸೆಳೆಯುತ್ತಿದ್ದು ರಾಜ್ಯದ ಮೂಲೆ ಮೂಲೆಗಳಿಂದ ರೈತರು ರಾಸುಗಳ ಕರೆತರುವ ಮೂಲಕ ದನಗಳ ಜಾತ್ರೆ ಕಳೆಗಟ್ಟುವಂತೆ ಮಾಡಿದ್ದಾರೆ.ಸಿದ್ಧಗಂಗೆ ದನಗಳ ಜಾತ್ರೆ ಎಂದಾಕ್ಷಣ ರಾಜ್ಯದ ಮೂಲೆ ಮೂಲೆಗಳಿಂದ ರೈತರು ದನಗಳು ಕರೆ ತಂದು ಮಾರಾಟ ಮಾಡುವ ಪದ್ಧತಿ ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಾಗೆಯ ಈ ಬಾರಿಯೂ ಗದಗ, ವಿಜಯಪುರ, ಬಳ್ಳಾರಿ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ರಾಮನಗರ, ದಾವಣಗೆರೆ, ತುಮಕೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಉತ್ತರ ಕರ್ನಾಟಕ ಭಾಗಗಳಿಂದ ರೈತ ಸಮೂಹ ದನಗಳನ್ನು ಮಾರಾಟ ಮತ್ತು ಖರೀದಿಗಾಗಿ ಶ್ರೀಕ್ಷೇತ್ರಕ್ಕೆ ಬಂದು ವಾಸ್ತವ್ಯ ಹೂಡಿದ್ದು, ರಾಸುಗಳ ಮಾರಾಟ ಮತ್ತು ಖರೀದಿಯಲ್ಲಿ ತೊಡಗಿರುವುದು ಕಂಡು ಬರುತ್ತಿದೆ.
ಸಿದ್ಧಗಂಗಾ ಮಠದ ಜಾಗದಲ್ಲಿ ಎತ್ತ ಕಣ್ಣಾಯಿಸಿದರೂ ದನಗಳ ಜಾತ್ರೆಯದ್ದೇ ಕಾರುಬಾರು. ಶ್ರೀ ಕ್ಷೇತ್ರದಲ್ಲಿ ದನಗಳ ಜಾತ್ರೆಯ ವಿಹಂಗಮ ನೋಟ ನೋಡುಗರ ಕಣ್ಮನ ಸೆಳೆಯುತ್ತಿದೆ.ರಾಜ್ಯದ ನಾನಾ ಕಡೆಗಳಿಂದ ರೈತರು ತಾವು ಸಾಕಿ ಸಲುಹಿರುವ ಎತ್ತುಗಳನ್ನು ಕರೆ ತಂದಿದ್ದು, ರಾಸುಗಳಿಗೆ ಬಿಸಿಲಿನ ಝಳ ತಾಗದಂತೆ ಪೆಂಡಾಲ್ ಹಾಕಿ ಮನೆ ಮಕ್ಕಳಂತೆ ಸಲುಹುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
ಈ ಬಾರಿ ರಾಜ್ಯದಲ್ಲಿ ಮಳೆ ಇಲ್ಲದೆ ಬರ ಪರಿಸ್ಥಿತಿ ತಾಂಡವವಾಡುತ್ತಿರುವುದರಿಂದ ಬೆಳೆ ನಾಶವಾಗಿದ್ದು, ರಾಸುಗಳಿಗೆ ಕುಡಿಯುವ ನೀರು, ಮೇವಿಗೂ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಬರ ಪರಿಸ್ಥಿತಿಯನ್ನು ಲೆಕ್ಕಿಸದೆ ಅನ್ನದಾತರು ಸಾಕಿ ಸಲುಹಿರುವ ರಾಸುಗಳನ್ನು ಜಾತ್ರೆಗೆ ಮಾರಾಟ ಮಾಡಲು ಮತ್ತು ಕೊಳ್ಳಲು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಧಾವಿಸಿರುವುದು ವಿಶೇಷವಾಗಿದೆ.ಸಿದ್ಧಗಂಗೆಗೆ ದನಗಳ ಜಾತ್ರೆಯಲ್ಲಿ ಮಾರಾಟಕ್ಕಾಗಿ ಬಂದು ಸೇರಿರುವ ದನಗಳು ಮತ್ತು ರೈತರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಊಟ, ಶೌಚಾಲಯದ ಸೇರಿದಂತೆ ಅವಶ್ಯಕ ವ್ಯವಸ್ಥೆಗಳನ್ನು ಶ್ರೀಮಠದ ವತಿಯಿಂದ ಮಾಡಲಾಗಿದೆ.
ಈ ವರ್ಷ ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿನ ಝಳ ಬಲು ಜೋರಾಗಿರುವ ಹಿನ್ನೆಲೆಯಲ್ಲಿ ರಾಸುಗಳಿಗೆ ಮೈ ಸುಡಬಾರದು ಎಂಬ ಉದ್ದೇಶದಿಂದ ಶಾಮಿಯಾನ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.ಬಿಸಿಲಿನ ತಾಪವನ್ನು ಲೆಕ್ಕಿಸದೇ ನಾಡಿನ ವಿವಿಧೆಗಳಿಂದ ಆಗಮಿಸಿರುವ ರೈತರು ಸಿದ್ಧಗಂಗೆಯ ದನಗಳ ಪರಿಷೆಯಲ್ಲಿ ರಾಸುಗಳ ಖರೀದಿ ಹಾಗೂ ಮಾರಾಟಕ್ಕೆ ಎಂದಿಗಿಂತಲೂ ಆ ಬಾರಿ ಆಸಕ್ತರಾಗಿರುವುದು ಕಂಡು ಬರುತ್ತಿದೆ.
ವಿವಿಧ ತಳಿಗಳ ಆಕರ್ಷಣೆ:ರಾಸುಗಳ ಜಾತ್ರೆಗೆ ಈ ಬಾರಿ ಹಳ್ಳಿಕಾರ್, ಅಮೃತ್ ಮಹಲ್, ಕಿಲಾರಿ, ಗಿಡ್ಡ ಹೋರಿ, ನಾಟಿ ಹಸು, ಮಲೆನಾಡ ಗಿಡ್ಡ, ಕೃಷ್ಣ ವ್ಯಾಲಿ ಸೇರಿದಂತೆ ವಿವಿಧ ತಳಿಗಳ ರಾಸುಗಳು ರಾಜ್ಯದ ವಿವಿಧ ಮೂಲೆಗಳಿಂದ ಬಂದು ಸೇರಿದ್ದು, ಇಷ್ಟೂ ತಳಿಗಳನ್ನು ಒಂದೇ ಕಡೆ ನೋಡುವ ಭಾಗ್ಯ ಶ್ರೀಕ್ಷೇತ್ರದಲ್ಲಿ ದೊರೆತಿದೆ.
ಈ ಬಾರಿ ಜಾತ್ರೆಯಲ್ಲಿ ಸಾವಿರಾರು ದನಗಳು ಪಾಲ್ಗೊಂಡಿದ್ದು, 75ಸಾವಿರದಿಂದ 10 ಲಕ್ಷದ ವರೆಗಿನ ರಾಸುಗಳು, ಹೋರಿಗಳು, ಹಸುಗಳು ಬಂದು ಸೇರಿವೆ. ಈಗಾಗಲೇ ದನಗಳ ಜಾತ್ರೆಯಲ್ಲಿ ರಾಸುಗಳ ಮಾರಾಟ ಮತ್ತು ಖರೀದಿ ಬಲು ಜೋರಾಗಿ ನಡೆದಿದ್ದು, ರೈತರುಗಳು ರಾಸುಗಳ ಗುಣಗಾನ ಹಾಗೂ ರಾಸುಗಳಲ್ಲಿ ಇರುವ ತಪ್ಪುಗಳನ್ನು ಹುಡುಕಿ ಅಲ್ಲಗಳೆಯುವಿಕೆ ಮಾಡುತ್ತಿರುವುದು ಸಹ ಸಾಮಾನ್ಯವಾಗಿದೆ.ತಮಗೆ ಗಿಟ್ಟಿದ ದರದಲ್ಲಿ ರೈತರು ರಾಸುಗಳನ್ನು ಖರೀದಿಸಿ ತಮ್ಮ ಊರುಗಳಿಗೆ ಟೆಂಪೋ ಸೇರಿದಂತೆ ಸರಕು ಸಾಗಣೆ ವಾಹನಗಳಲ್ಲಿ ಕೊಂಡೊಯ್ಯುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ಜಾತ್ರೆಗೆ ಬಂದಿರುವ ರಾಸುಗಳಿಗೆ ಯಾವುದೇ ರೋಗ ರುಜಿಗಳು ಅಂಟದಂತೆ ಪಶುಪಾಲನಾ ಇಲಾಖೆ ವತಿಯಿಂದ ಲಸಿಕೆ ಹಾಕುವ ವ್ಯವಸ್ಥೆಯನ್ನು ಮಾಡಲಾಗಿದೆ.ಸಿದ್ಧಗಂಗೆ ಜಾತ್ರೆಯಲ್ಲಿ ರೈತರು ಮತ್ತು ಜಾನುವಾರುಗಳಿಗೆ ಮಾಡಿರುವ ಮೂಲಭೂತ ಸೌಕರ್ಯದ ವ್ಯವಸ್ಥೆ, ಊಟದ ವ್ಯವಸ್ಥೆಯನ್ನು ಕಂಡು ಬೇರೆ ಜಿಲ್ಲೆಗಳ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರದರ್ಶನ, ಬಹುಮಾನ: ಪ್ರತಿ ವರ್ಷದಂತೆ ಈ ಬಾರಿಯೂ ಸಿದ್ಧಗಂಗೆ ದನಗಳ ಜಾತ್ರೆಗೆ ಬರುವ ಉತ್ತಮ ರಾಸುಗಳ ಪ್ರದರ್ಶನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಜಾತ್ರೆಯಲ್ಲಿ ಸೇರಿರುವ ಉತ್ತಮ ರಾಸುಗಳ ಆಯ್ಕೆಯಾಗಿ ಜಾನುವಾರುಗಳ ಪೆರೇಡ್ ಸಹ ನಡೆಸಲಾಗುತ್ತದೆ. ಜಿಲ್ಲೆಯ ಜನ ಮಾತ್ರವಲ್ಲದೆ ವಿವಿಧ ಜಿಲ್ಲೆಗಳ ಸಾವಿರಾರು ಜನ ಈ ಸಂಭ್ರಮನವನ್ನು ಕಣ್ತುಂಬಿಕೊಳ್ಳಲು ಆಗಮಿಸಲಿದ್ದು, ಪಶುಪಾಲನಾ ಇಲಾಖೆಯ ವೈದ್ಯರು, ಜಾತ್ರೆ ಸಮಿತಿ ಸದಸ್ಯರು ಹಾಗೂ ತಜ್ಞರು ಇದರ ತೀರ್ಪುಗಾರರಾಗಿರುತ್ತಾರೆ.