ತುಮಕೂರು: ಯುವನಿಧಿ ಫಲಾನುಭವಿಗಳ ನೋಂದಣಿ ಆರಂಭ- ಡೀಸಿ ಶುಭ ಕಲ್ಯಾಣ್‌

| Published : Dec 27 2023, 01:31 AM IST

ತುಮಕೂರು: ಯುವನಿಧಿ ಫಲಾನುಭವಿಗಳ ನೋಂದಣಿ ಆರಂಭ- ಡೀಸಿ ಶುಭ ಕಲ್ಯಾಣ್‌
Share this Article
  • FB
  • TW
  • Linkdin
  • Email

ಸಾರಾಂಶ

ಯುವನಿಧಿ ನೋಂದಣಿ ಆರಂಭವಾಗಿದೆ ಎಂದು ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಸರ್ಕಾರದ ಯುವನಿಧಿ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಅರ್ಹತೆ ಹೊಂದಿದ ಯಾವುದೇ ಫಲಾನುಭವಿಯು ಯೋಜನೆಯಿಂದ ಹೊರಗುಳಿಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದರು.

ಯುವನಿಧಿ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡುವ ಕುರಿತು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 2023ರ ವರ್ಷದಲ್ಲಿ ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರರು ಮತ್ತು ಡಿಪ್ಲೋಮಾ ಪಡೆದ ನಿರುದ್ಯೋಗಿ ವಿದ್ಯಾವಂತರಿಗೆ ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು ಪಾವತಿಸಲು ಮಾರ್ಗಸೂಚಿ ಅನುಸಾರ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು, ಇಂದಿನಿಂದ ಸೇವಾಸಿಂಧು ಪೋರ್ಟಲ್ ಮೂಲಕ ಈ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಜನವರಿ 2024 ರಿಂದ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಪಾವತಿಯಾಗುವಂತೆ ಕ್ರಮವಹಿಸಿ ಸರ್ಕಾರದ ಯುವನಿಧಿ ಯೋಜನೆಯಡಿ ಶೇ. 100ರಷ್ಟು ಗುರಿ ಸಾಧಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಅರ್ಹ ನಿರುದ್ಯೋಗಿಗಳಿಗೆ ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಯ ಕುರಿತು ಸಮಗ್ರ ಮಾಹಿತಿಯನ್ನು ನೀಡಲು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ತೇರ್ಗಡೆ ಹೊಂದಿದ ಅರ್ಹ ಪದವೀಧರರು ಮತ್ತು ಡಿಪ್ಲೋಮಾ ಪಡೆದ ನಿರುದ್ಯೋಗಿ ವಿದ್ಯಾರ್ಥಿಗಳಲ್ಲಿ ಯುವನಿಧಿ ಯೋಜನೆಯಡಿ ಕುರಿತು ಆಯಾ ಆಯಾ ಕಾಲೇಜುಗಳ ಪ್ರಾಂಶುಪಾಲರು ಅಗತ್ಯ ಅರಿವು ಮೂಡಿಸಬೇಕು, ನೋಂದಣಿಯಾದ ಅರ್ಹ ಪದವೀಧರರಿಗೆ 3 ಸಾವಿರ ರು. ಹಾಗೂ ಡಿಪ್ಲೋಮಾ ತೇರ್ಗಡೆಯಾದ ನಿರುದ್ಯೋಗಿಗಳಿಗೆ 1500 ರು. ಗಳನ್ನು ಮಾಸಿಕ ನಿರುದ್ಯೋಗ ಭತ್ಯೆಯನ್ನು ಆಧಾರ್ ಜೋಡಣೆಯ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿಯಾಗುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಕೆಯಾದ ನಂತರ ಅಧಿಕಾರಿಗಳು ಅರ್ಜಿಯ ಪರಿಶೀಲನೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಮಾತನಾಡಿ, ಈಗಾಗಲೇ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸಾವಿರಾರು ನಿರುದ್ಯೋಗಿಗಳು ನೋಂದಣಿಯಾಗಿದ್ದು, ಈ ದತ್ತಾಂಶವನ್ನು ಯುವನಿಧಿ ಯೋಜನೆಯ ಅನುಷ್ಠಾನದಲ್ಲಿ ಬಳಸಿಕೊಳ್ಳುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕರಾದ ಆಂಜಿನಪ್ಪ, ಕೈಗಾರಿಕಾ ಜಂಟಿ ನಿರ್ದೇಶಕ ಡಿ.ಕೆ. ಲಿಂಗರಾಜು, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆಂಪಯ್ಯ, ಶಿವಕುಮಾರ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅರುಣ್ ಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜು, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.