ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನ ಪರವಾಗಿ ಟಿಕೆಟ್ ಕೊಡಿಸಲು ಹೋರಾಟ ಮಾಡಿಲ್ಲ ಎಂಬ ನೋವು ನನಗಿದೆ ಎಂದು ಎನ್ನುವ ಮೂಲಕ ಮಾಜಿ ಸಚಿವ ಮಾಧುಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದ ಅವರು, ಯಡಿಯೂರಪ್ಪ ಅವರು ಎರಡು, ಮೂರು ಸಲ ನನ್ನನ್ನು ಕರೆಸಿಕೊಂಡು ಚುನಾವಣೆಗೆ ಸ್ಪರ್ಧೆ ಮಾಡು ಎಂದರು. ಆಗ ನಾನು ಇಂತವರು ನನಗೆ ಸಹಕರಿಸುವುದಿಲ್ಲ ಎಂದಿದ್ದಕ್ಕೆ ನಾವು ಅವರನ್ನ ಸಮಾಧಾನ ಮಾಡುವುದಾಗಿಯೂ ತಿಳಿಸಿದ್ದರು. ಇಷ್ಟೆಲ್ಲಾ ಆದ ಮೇಲೂ ಇಲ್ಲಿ ಇರಬೇಕಾ ಬೇಡ್ವಾ ಅನ್ನುವ ಚಿಂತನೆ ಆಗಿದೆ ಎಂದರು.
ಕಾರ್ಯಕರ್ತರನ್ನು ಕರೆದು ಅವತ್ತಿನಿಂದ ಇವತ್ತಿನವರೆಗೆ ಆಗಿರುವುದನ್ನು ಚರ್ಚಿಸಿ ಯಾವ ದಿಕ್ಕಿನಲ್ಲಿ ಹೋದರೆ ಅನುಕೂಲ ಆಗುತ್ತೆ ಅನ್ನೋದನ್ನ ತಿಳಿದುಕೊಳ್ಳುವುದಾಗಿ ತಿಳಿಸಿದರು. ಕಾಂಗ್ರೆಸ್ ಗೆ ಹೋದರೆ ಸೇಪ್ ಜೋನ್ ಅಲ್ಲ. ಇಲ್ಲಿ ಇರುವುದು ಸೇಫ್ ಅಂತ ನಾನು ಅಂದುಕೊಂಡಿಲ್ಲ. ಮುಂದಿನ ನಡಿಗೆ ಹೇಗೆ ಅಂತ ನಮಗೆ ಅರ್ಥ ಆಗಿಲ್ಲ. ಅಂದರೆ ಪಬ್ಲಿಕ್ಸ್ ಜಡ್ಜ್ ಮೆಂಟ್ ಮಾಡ್ತಾರೆ. ನಾನು ಯಾವ ದಾರಿಗೆ ಹೋಗಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತೇನೆ. ಅದಕ್ಕೋಸ್ಕರ ಐದಾರು ದಿನ ಟೈಮ್ ತಗೊಂಡಿದಿನಿ ಎಂದರು.ಚುನಾವಣಾ ಪ್ರಕ್ರಿಯೆಗಳು ಶುರುವಾದ ಮೇಲೆ ಕಾರ್ಯಕರ್ತರ ಸಭೆ ಕರೆಯುತ್ತೇನೆ. ಆಗ ಏನ್ ಮಾಡೋದು ಅಂತ ತೀರ್ಮಾನ ಮಾಡುವುದಾಗಿ ತಿಳಿಸಿದರು. ನಮ್ಮವರೆಲ್ಲಾ ಅವಮಾನ ಆದರೂ ಪರವಾಗಿಲ್ಲ ಸಹಿಸಿಕೊಂಡು ಇರಿ ಅಂದರೆ ಇರುತ್ತೇನೆ. ಅವಮಾನ ಸಹಿಸೋಕೆ ಆಗುವುದಿಲ್ಲ ಬೇರೆ ದಿಕ್ಕು ನೋಡಿಕೊಳ್ಳಿ ಅಂದರೆ ನೋಡಿಕೊಳ್ಳುವುದಾಗಿ ತಿಳಿಸಿದರು. ತಕ್ಷಣಕ್ಕೆ ನಾವು ಪಕ್ಷ ಬಿಡುವ ಆಲೋಚನೆ ಮಾಡಿಲ್ಲ. ಪಕ್ಷ ನಮಗೇನು ಕೆಟ್ಟದ್ದು ಮಾಡಿಲ್ಲ. ಬೇರೆ ಕಡೆ ಹೋಗುವ ಬಗ್ಗೆ ಯೋಚನೆ ಮಾಡಿದ್ದು ನಿಜ. ಒಂದೆರಡು ತಿಂಗಳ ಹಿಂದೆ ಸರಿಯಾದ ರೆಸ್ಪಾನ್ಸ್ ಬಂದಿಲ್ಲ. ಯಡಿಯೂರಪ್ಪ ನನಗೆ ಹೇಳಿದ ಮೇಲೆ ನಾನು ಟಿಕೆಟ್ ಅಕಾಂಕ್ಷಿ ಅಂತ ಹೇಳಿದ್ದು ಎಂದರು.ಈಶ್ವರಪ್ಪನ ಮಗನಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಈಶ್ವರಪ್ಪ ಅಸಮಾಧಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೇಲ್ನೋಟಕ್ಕೆ ನೋಡಿದವರಿಗೆ ಇದು ಸರಿ ಅನ್ನಿಸುತ್ತದೆ. ನಮ್ಮನ್ನೆಲ್ಲಾ ತಗೊಂಡು ಹೋಗಿ ಬಲಿ ಕೊಟ್ಟರು ಅಂತಾ. ನನಗೆ ದೃಢವಾದ ವಿಶ್ವಾಸವಿದೆ, ಸೋಮಣ್ಣನ ನಾಲಿಗೆಗೆ ಸೋಮಣ್ಣನ ಬೈಗುಳಕ್ಕೆ ಯಡಿಯೂರಪ್ಪ ಹೆದರಿಕೊಂಡು, ನನ್ನನ್ನು ಬಲಿಯಾಕಿದರು, ಆ ನೋವು ನನಗಿದೆ. ಅವರಿಗೆ ಮಾಧುಸ್ವಾಮಿ, ಈಶ್ವರಪ್ಪನನ್ನು ಕಟ್ಟಿಕೊಂಡು ಏನಾಗಬೇಕು ಅಂತ ಅನ್ನಿಸಿರಬಹುದು. ಅಪ್ಪ ಮಕ್ಕಳಿಗೆ ಸ್ವಹಿತಸಕ್ತಿಯೇ ಹೆಚ್ಚಾಗಿರಬಹುದು ಎಂದರು.
ಸೋಮಣ್ಣ ಪರ ಪ್ರಚಾರ ಮಾಡುವುದಿಲ್ಲ......ಚುನಾವಣೆಯಲ್ಲಿ ಸೋಮಣ್ಣ ಪರವಾಗಿ ನಾವು ಮಾಡುವುದಿಲ್ಲ ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಸೋಮಣ್ಣಗೆ ಟಿಕೆಟ್ ಕೊಟ್ಟರೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದ ಅವರು ಹೊರಗಿನವರಿಗೆ ಯಾರಿಗೆ ಕೊಟ್ಟರೂ ನಾನು ಮಾಡುತ್ತಿರಲಿಲ್ಲ ಎಂದರು. ಈ ಜಿಲ್ಲೆಯಲ್ಲಿ ಯಾರಿಗೇ ಕೊಟ್ಟರೂ ನಾನು ಮಾಡುತ್ತಿದ್ದೆ ಎಂದರು. ನನ್ನನ್ನು ನಂಬಿಕೊಂಡಿರುವರನ್ನು ಸಹ ಜೊತೆಗೆ ಕರೆದುಕೊಂಡು ಹೋಗಬೇಕಲ್ಲ ಎಂದ ಮಾಧುಸ್ವಾಮಿ ನಮ್ಮ ಕಾರ್ಯಕರ್ತರು ತಟಸ್ಥವಾಗಿ ಇರೋಣ ಅಂದ್ರೆ ತಟಸ್ಥವಾಗಿ ಇರುತ್ತೇನೆ ಎಂದರು. ಇಲ್ಲ ನಮಗೆ ಅನ್ಯಾಯ ಮಾಡಿದವರಿಗೆ ತಕ್ಕ ಉತ್ತರ ಕೊಡಬೇಕು ಅಂದರೆ ಕೊಡುವುದಾಗಿ ತಿಳಿಸಿದರು.
ಬಿ ಫಾರಂ ತಂದು ಕೊಡುವ ಜವಾಬ್ದಾರಿ ನಂದೆ ಎಂದಿದ್ದ ಬಿಎಸ್ವೈನಿನಗೆ ಬಿ ಫಾರಂ ತಂದು ಕೊಡುವ ಜವಾಬ್ದಾರಿ ನಂದೆ ಅಂತ ಯಡಿಯೂರಪ್ಪ ಹೇಳಿದ್ದರು. ನಾನು ಡೆಲ್ಲಿಗೆ ಹೋಗ್ತಿನಿ ಅಂತ ಹೇಳಿದ್ದೆ. ನೀನು ಯಾಕಪ್ಪ ಹೋಗ್ತಿಯಾ, ಹೋಗ್ಬೇಡಾ ಅಂದಿದ್ದರು. ಎಲೆಕ್ಷನ್ ಕಾವು ಬರಲಿ, ಎಲೆಕ್ಷನ್ ಕ್ಯಾಲೆಂಡರ್ ಹಾಕಿದ ಮೇಲೆ ಸಭೆ ಮಾಡುತ್ತೇನೆ. ಅಲ್ಲಿಯವರೆಗೆ ಕಾರ್ಯಕರ್ತರ ಸಭೆ ಮಾಡುವುದಿಲ್ಲ. ನನ್ನಷ್ಟಕ್ಕೆ ನಾನು ನಿರ್ಧಾರ ತೆಗೆದುಕೊಂಡು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಕ್ಕೆ ಆಗುವುದಿಲ್ಲ. ಎಲ್ಲ ಕ್ಷೇತ್ರದ ಶಾಸಕರು ಹಾಗೂ ಸೋತಿರುವ ಶಾಸಕರ ಅಭಿಪ್ರಾಯ ತಗೋಬೇಕು ಎಂದರು. 1996, 1997 ರಲ್ಲಿ ರಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ಗೆದ್ದಿದ್ದೆ. ಕ್ಷೇತ್ರದ ಜನ ನನ್ನನ್ನು ಉಳಿಸಿಕೊಂಡಿದ್ದರು ಎಂದರು.