ನಮ್ಮ ಹಕ್ಕಿನ 15 ಟಿಎಂಸಿ ನೀರು ನಮಗೆ ದಕ್ಕುತ್ತಿಲ್ಲ

| Published : Mar 16 2024, 01:46 AM IST

ಸಾರಾಂಶ

ಮಹಾರಾಷ್ಟ್ರ ಭಾಗದಲ್ಲಿ ಮಳೆ ಬಂದು ಜಲಾಶಯ ತುಂಬಿದರೂ 1998 ರಿಂದ ಈಚೆಗೆ ನಮ್ಮ ಹಕ್ಕಿನ 15 ಟಿಎಂಸಿ ನೀರು ನಮಗೆ ದಕ್ಕುತ್ತಿಲ್ಲ. ಹಾಗಾಗಿ ನಮ್ಮ ಪಾಲಿನ ನೀರು ನಮಗೆ ಕೊಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಎಂದು ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಮಹಾರಾಷ್ಟ್ರ ಭಾಗದಲ್ಲಿ ಮಳೆ ಬಂದು ಜಲಾಶಯ ತುಂಬಿದರೂ 1998 ರಿಂದ ಈಚೆಗೆ ನಮ್ಮ ಹಕ್ಕಿನ 15 ಟಿಎಂಸಿ ನೀರು ನಮಗೆ ದಕ್ಕುತ್ತಿಲ್ಲ. ಹಾಗಾಗಿ ನಮ್ಮ ಪಾಲಿನ ನೀರು ನಮಗೆ ಕೊಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಎಂದು ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ಆಗ್ರಹಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರ ಕೇಂದ್ರ ಜಲ ಸಂಪನ್ಮೂಲ ಮಂಡಳಿಯು ಅನುಮತಿ ಪಡೆಯದೇ ಉಜನಿ ಅಣೆಕಟ್ಟಿನ ಹಿನ್ನೀರಿನಲ್ಲಿ ಅಕ್ರಮವಾಗಿ ಸುಮಾರು 25 ಕಿಮೀ. ಉದ್ದದ ಸುರಂಗ ಮಾರ್ಗ ಕೊರೆದು ಸೀನಾ ನದಿಗೆ ಸಂಪರ್ಕ ಕಲ್ಪಿಸಿರುವುದರಿಂದ ರಾಜ್ಯದ ಭಾಗದಲ್ಲಿರುವ ಭೀಮಾತೀರದ ಗ್ರಾಮಗಳಿಗೆ ಸಮಸ್ಯೆ ಉಂಟಾಗುತ್ತಿದೆ. ನ್ಯಾ.ಬಚಾವತ್ ಅಧ್ಯಕ್ಷತೆಯ ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣ ಪೀಠದ ಭೀಮಾನದಿಯ ನೀರು ಹಂಚಿಕೆಯ ಎಲ್ಲ ನಿಯಮಗಳನ್ನು ಮಹಾರಾಷ್ಟ್ರ ಉಲ್ಲಂಘನೆ ಮಾಡುತ್ತಿದೆ ಎಂದು ದೂರಿದರು.

ಮಹಾರಾಷ್ಟ್ರದಿಂದ ಭೀಮಾನದಿಗೆ ಬರಬೇಕಿರುವ ನಮ್ಮ ಹಕ್ಕಿನ ನೀರನ್ನು ನಮಗೆ ರಾಜ್ಯ ಕೊಡಿಸುವ ಜವಾಬ್ದಾರಿ ಬಚಾವತ್ ಆಯೋಗದ ಮೇಲಿದ್ದು, 1976 ರಲ್ಲಿ ಆಯೋಗವು ನೀಡಿದ ತೀರ್ಪಿನಂತೆ ಒಟ್ಟು 351 ಟಿಎಂಸಿ ನೀರಿನಲ್ಲಿ ಮಹಾರಾಷ್ಟ್ರ 300.6, ಕರ್ನಾಟಕ 45.3 ಮತ್ತು ಆಂದ್ರ ಪ್ರದೇಶ 5.1 ಟಿಎಂಸಿ ಪ್ರಮಾಣದಲ್ಲಿ ಬಳಕೆ ಮಾಡಿಕೋಳ್ಳಲು ಸೂಚಿಸಿದೆ. ರಾಜ್ಯದಲ್ಲಿ ಆ ನೀರನ್ನು ಬಳಕೆ ಮಾಡಿಕೊಳ್ಳಲು ಸೂಕ್ತ ಯೋಜನೆಗಳು ರೂಪಗೊಳ್ಳದೇ ಇರುವುದು ಈ ನಮ್ಮ ಭಾಗದ ರೈತರ ದುರಾದೃಷ್ಟ ಎಂದು ಆರೋಪಿಸಿದರು.

ಈ ಬಾರಿ ಭೀಕರ ಬರಗಾಲ ಆವರಿಸಿದ್ದು, ಭೀಮಾನದಿ ಬತ್ತಿದ್ದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಭೀಮಾನದಿಗೆ ಕಾನೂನಾತ್ಮಕವಾಗಿ ಬರಬೇಕಿರುವ ನೀರಿನ ಪಾಲನ್ನು ಪಡೆಯುವ ನಿಟ್ಟಿನಲ್ಲಿ ನೆರೆಯ ಮಹಾರಾಷ್ಟ್ರ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ನೀರು ಬಿಡಿಸುವುದು ತುರ್ತು ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ರಾಜು ಕುಲಕರ್ಣಿ, ಮಹೇಶ ಹೂಗಾರ, ಮಹಿಬೂಬ್‌ ಬೇನೂರ, ರಾಜು ಪಡಗಾನೂರ, ದಾದು ಕೋಣಸಿರಸಗಿ, ಸಚಿನ ನಾವಿ, ಶಿವಾನಂದ ಮಡಿವಾಳ, ಸಂದೇಶ ಗಲಗಲಿ, ಪ್ರವೀಣ ಪೊದ್ದಾರ, ಶ್ರೀಕಾಂತ ಬಡಿಗೇರ, ಧರ್ಮರಾಜ ಸಾಲೋಟಗಿ, ರವಿ ಹೂಗಾರ, ಸುನೀಲ ಹಿರೇಮಠ, ಪ್ರಕಾಶ ಬಿರಾದಾರ, ಪ್ರವೀಣ ತಂಗಾ, ಕೇಶವ ಕಾಟಕರ, ಸುಧಾಕರ ಹೂಗಾರ, ಪ್ರಶಾಂತ ಗುಂದಗಿ ಇದ್ದರು.