2 ದಶಕವಾದರೂ ಕುಂಟುತ್ತಿದೆ ತುಮಕೂರು ವಿವಿ

| Published : Apr 16 2025, 12:50 AM IST

ಸಾರಾಂಶ

ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ನೆಲೆಯಲ್ಲಿ ತುಮಕೂರು ವಿವಿ ಆರಂಭವಾಗಿ ಎರಡು ದಶಕಗಳೇ ಕಳೆದಿವೆ. ಆದರೆ, ಅನುದಾನ ಕೊರತೆಯಿಂದ ಕ್ಯಾಂಪಸ್‌ ನಿರ್ಮಾಣ ಸೇರಿ ಅಭಿವೃದ್ಧಿ ವಿಷಯದಲ್ಲಿ ವಿವಿ ಕುಂಟುತ್ತಾ ಸಾಗಿದೆ.

ಉಗಮ ಶ್ರೀನಿವಾಸ್

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ನೆಲೆಯಲ್ಲಿ ತುಮಕೂರು ವಿವಿ ಆರಂಭವಾಗಿ ಎರಡು ದಶಕಗಳೇ ಕಳೆದಿವೆ. ಆದರೆ, ಅನುದಾನ ಕೊರತೆಯಿಂದ ಕ್ಯಾಂಪಸ್‌ ನಿರ್ಮಾಣ ಸೇರಿ ಅಭಿವೃದ್ಧಿ ವಿಷಯದಲ್ಲಿ ವಿವಿ ಕುಂಟುತ್ತಾ ಸಾಗಿದೆ.

ಜ್ಞಾನಸಿರಿ ಕ್ಯಾಂಪಸ್ ಅಭಿವೃದ್ಧಿಗೆ ₹260 ಕೋಟಿ ಅವಶ್ಯಕತೆಯಿದೆ ಎಂದು ಈಗಾಗಲೇ ಕುಲಪತಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ। ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಈವರೆಗೂ ಹಣದ ಬಗ್ಗೆ ಸರ್ಕಾರ ಚಕಾರವೆತ್ತಿಲ್ಲ. ಆದರೂ, ಆಂತರಿಕ ಆದಾಯದಲ್ಲೇ ಆರಂಭವಾದಾಗಿನಿಂದಲೂ ಮೂಲ ಸೌಕರ್ಯ ಹಾಗೂ ಶೈಕ್ಷಣಿಕ ಸಾಧನೆ ಕಡೆ ಹೆಜ್ಜೆ ಇಡುತ್ತಿದೆ. ಯುಜಿಸಿಯಿಂದ 12 (ಬಿ) ಮಾನ್ಯತೆ ಹಾಗೂ ನ್ಯಾಕ್‌ನಿಂದ ‘ಬಿ+’ ಶ್ರೇಣಿ ಪಡೆಯುವ ಮೂಲಕ ಸಂಶೋಧನಾ ಚಟುವಟಿಕೆಗಳಿಗೆ ಅನುದಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಜೊತೆಗೆ ಯುಜಿಸಿಯಿಂದ ರಾಷ್ಟ್ರೀಯ ಉತ್ಕೃಷ್ಟತಾ ಸಂಸ್ಥೆಯಾಗಿ ಗುರುತಿಸಿಕೊಳ್ಳುವುದರಲ್ಲೂ ಸಫಲವಾಗಿದೆ.

ಅನುದಾನ ನೀಡಿಕೆ ವಿಚಾರದಲ್ಲಿ ಈ ವಿವಿಗೆ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂಬ ಆರೋಪಗಳೂ ದಟ್ಟವಾಗಿ ಕೇಳಿಬರುತ್ತಿವೆ. ದೇಶದ ಭವಿಷ್ಯದ ಪ್ರಜೆಗಳನ್ನು ವಿದ್ಯಾವಂತರಾಗಿ, ಜ್ಞಾನವಂತರಾಗಿ ರೂಪಿಸುವ ವಿದ್ಯಾ ದೇಗುಲಗಳಿಗೆ ಅನುದಾನ ನೀಡಲು ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲವೂ ಮೀನಮೇಷ ಎಣಿಸುತ್ತಿರುವುದು ವಿಷಾದದ ಸಂಗತಿ ಎನ್ನುತ್ತಾರೆ ಜಿಲ್ಲೆಯ ಶಿಕ್ಷಣ ಕ್ಷೇತ್ರದ ಪರಿಣಿತರು.

ಸುಮಾರು 10 ವರ್ಷಗಳ ಹಿಂದೆ ತುಮಕೂರು ಗ್ರಾಮಾಂತರದ ಬಿದರಕಟ್ಟೆ ಕಾವಲ್‌ನಲ್ಲಿ ವಿವಿಗೆ 240 ಎಕರೆ ಜಾಗ ಕೊಟ್ಟು ನೂತನ ಕ್ಯಾಂಪಸ್ ‘ಜ್ಞಾನಸಿರಿ’ಗೆ ಚಾಲನೆ ಸಿಕ್ಕರೂ ಸರ್ಕಾರ ಕಾಲ ಕಾಲಕ್ಕೆ ಅನುದಾನ ನೀಡದ ಕಾರಣ ಅಭಿವೃದ್ಧಿ ಕುಂಟುತ್ತಾ ಸಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲಾಗಲೇ ಸುಸಜ್ಜಿತ ವಿವಿ ನಿರ್ಮಾಣವಾಗಬೇಕಾಗಿತ್ತು. ಆದರೆ, ಅನುದಾನ ಕೊರತೆಯಿಂದ ಮಂದಗತಿಯಲ್ಲಿ ಸಾಗಿದೆ.

ಸುಸಜ್ಜಿತ ವಿವಿಗೆ ಬೇಕು ₹1000 ಕೋಟಿ:

ಹಾಗೆ ನೋಡಿದರೆ, ಸುಸಜ್ಜಿತ ವಿವಿ ನಿರ್ಮಾಣವಾಗಬೇಕಾದರೆ ಒಂದು ಸಾವಿರ ಕೋಟಿ ರು. ಅವಶ್ಯಕತೆ ಇದೆ. ಆದರೆ, ಈವರೆಗೆ ಸಿಕ್ಕಿರುವುದು ಕೇವಲ ₹50 ಕೋಟಿ ಮಾತ್ರ. 2016ರಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಅವರಿಗೆ ವಿವಿ ಅಭಿವೃದ್ಧಿಗಾಗಿ ₹80 ಕೋಟಿ ಪ್ರಸ್ತಾವನೆ ಕೊಡಲಾಗಿತ್ತು. ಆದರೆ ಸರ್ಕಾರ ಮಂಜೂರು ಮಾಡಿದ್ದು ₹40 ಕೋಟಿ. ಅಷ್ಟೇ ಅಲ್ಲ, ಆ ಹಣವನ್ನು 4 ವರ್ಷಗಳಲ್ಲಿ 4 ಕಂತಿನಲ್ಲಿ ನೀಡಿತು. ಇದನ್ನೂ ಸೇರಿಸಿದರೆ ಈವರೆಗೆ ಸಿಕ್ಕಿರುವುದು ₹50 ಕೋಟಿ ಮಾತ್ರ ಎನ್ನುತ್ತಾರೆ ವಿವಿಯ ಅಧಿಕಾರಿಗಳು.

ಜಾಗಕ್ಕಾಗಿಯೇ ದಶಕ ಕಾಲ ಹೋರಾಟ:

ಫೆಬ್ರವರಿ 21, 2004ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ। ಜಿ.ಪರಮೇಶ್ವರ್ ಅವರ ಪ್ರಯತ್ನದಿಂದ ತುಮಕೂರಿಗೆ ವಿವಿ ಮಂಜೂರಾಗಿತ್ತು. ಆರಂಭದಲ್ಲಿ ತುಮಕೂರಿನ ಎಂ.ಜಿ.ರಸ್ತೆಯಲ್ಲಿರುವ ಅಂಬೇಡ್ಕರ್ ಭವನವನ್ನು ಆಡಳಿತ ಕಚೇರಿಗೆ ನೀಡಲಾಗಿತ್ತು. ಅಲ್ಲದೆ ದೇವರಾಯನದುರ್ಗ ಅರಣ್ಯದಲ್ಲಿ 300 ಎಕರೆ ಜಾಗ ನಿಗದಿಗೊಳಿಸಲಾಗಿತ್ತು. ಆದರೆ, ಪರಿಸರವಾದಿಗಳ ತೀವ್ರ ವಿರೋಧದಿಂದಾಗಿ ಆ ಜಾಗ ಕೈ ಬಿಟ್ಟು ಬೇರೆ ಜಾಗ ಹುಡುಕಲು ಆರಂಭಿಸಲಾಯಿತು.

ವಿವಿ ಆರಂಭವಾಗಿ 2 ದಶಕಗಳೇ ಆದರೂ ಭೂಮಿ ಪಡೆಯಲು ಸುದೀರ್ಘ ಒಂದು ದಶಕಗಳ ಕಾಲ ಬೇಕಾಯಿತು. ಕೊರಟಗೆರೆ, ಮಧುಗಿರಿ, ಶಿರಾ, ತಿಪಟೂರು, ಹೀಗೆ ಹಲವು ಕಡೆ ಕ್ಯಾಂಪಸ್‌ಗೆ ಜಾಗ ಹುಡುಕಿದರೂ ಸಿಗಲೇ ಇಲ್ಲ. ಅರಣ್ಯ ಜಾಗವೆಂದೋ ಅಥವಾ ಗೋಮಾಳವೆಂದೋ ಹೀಗೆ ನಾನಾ ಕಾರಣಗಳಿಂದಾಗಿ ಜಾಗ ಸಿಗದಂತಾಯಿತು. ಕಡೆಗೂ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿದರೆಕಟ್ಟೆ ಕಾವಲ್‌ನಲ್ಲಿ 240 ಎಕರೆ ಜಾಗವನ್ನು ವಿವಿಗೆ ನೀಡಲಾಯಿತು. ಜಾಗ ಹುಡುಕುವುದು ಒಂದು ಬಗೆಯ ಕಷ್ಟವಾದರೆ ಕ್ಯಾಂಪಸ್ ನಿರ್ಮಾಣಕ್ಕೆ ಹಣ ಹೊಂದಿಸುವುದು ಕೂಡ ಮತ್ತೊಂದು ಕಷ್ಟವಾಯಿತು.

ತುಮಕೂರು ವಿವಿ ಸಂಸ್ಥಾಪಕ ಕುಲಪತಿ ಪ್ರೊ.ಓ.ಅನಂತರಾಮಯ್ಯ ಅವರ ಕಾಲದಲ್ಲಿ ವಿವಿ ಜಾಗಕ್ಕೆ ಇನ್ನಿಲ್ಲದ ಹುಡುಕಾಟ ನಡೆಯಿತು. ಬಳಿಕ, ಬಂದ ಶರ್ಮಾ ಅವರು ಜಾಗ ಹುಡುಕಲು ತೀವ್ರ ಪ್ರಯತ್ನ ನಡೆಸಿದರು. ನಂತರ ಬಂದ ರಾಜಾಸಾಬ್, ಸಿದ್ದೇಗೌಡ ಹಾಗೂ ಹಾಲಿ ಕುಲಪತಿ ವಂಕಟೇಶ್ವರಲು ಅವರ ಪ್ರಯತ್ನದಿಂದ ಜ್ಞಾನಸಿರಿ ನೂತನ ಕ್ಯಾಂಪಸ್ ಸಿದ್ಧವಾಗುತ್ತಿದೆ.10 ವಿಭಾಗ ಮಾತ್ರ ಶಿಫ್ಟ್‌

ತುಮಕೂರು ವಿವಿಯಲ್ಲಿ 31 ವಿಭಾಗಗಳಿದ್ದು, ಸದ್ಯ ಹೊಸ ಕ್ಯಾಂಪಸ್‌ಗೆ 10 ವಿಭಾಗಗಳನ್ನು ಮಾತ್ರ ಸ್ಥಳಾಂತರ ಮಾಡಲಾಗಿದೆ. ಉಳಿದ 21 ವಿಭಾಗಗಳ ಸ್ಥಳಾಂತರ ಬಾಕಿ ಇದೆ. ಮತ್ತೆ 19 ಹೊಸ ವಿಭಾಗಗಳನ್ನು ಆರಂಭಿಸುವ ಚಿಂತನೆ ವಿವಿಗೆ ಇದೆ. ಆದರೆ, ಅನುದಾನದ ಕೊರತೆಯಿಂದ ಅದು ಸಾಧ್ಯವಾಗಿಲ್ಲ. ವಿವಿ ಆರಂಭವಾಗಿ 20 ವರ್ಷವಾದರೂ ಕ್ಯಾಂಪಸ್ ಆರಂಭವಾಗಿ ಕೇವಲ 10 ವರ್ಷವಾಯಿತು. ಆದರೆ, ಈವರೆಗೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿಲ್ಲ.

ಹೊಸ ಕ್ಯಾಂಪಸ್ ನಲ್ಲಿ ಇರುವ ಕಟ್ಟಡಗಳು

1. 3 ಪರಿಶಿಷ್ಟ ಜಾತಿ, ಪಂಗಡದ ಹಾಸ್ಟೆಲ್.

2. 1 ಸಾಮಾನ್ಯ ವರ್ಗದ ಹಾಸ್ಟೆಲ್.

3. 1 ಅಕಾಡೆಮಿಕ್‌ ಬ್ಲಾಕ್.ನಡೆಯುತ್ತಿರುವ ಕಾಮಗಾರಿಗಳು:

1. ಊಟೋಪಚಾರಕ್ಕಾಗಿ ಕೆಫೆಟೇರಿಯ.

2. ಕಲಾಭವನ.

3. ಪರೀಕ್ಷಾ ಪೂರ್ವ ತರಬೇತಿ ಕೇಂದ್ರ.

4. ವಿಜ್ಞಾನ ಕೇಂದ್ರ.

5. ಒಳಾಂಗಣ ಕ್ರೀಡಾಂಗಣ ಮತ್ತು ಗ್ರಂಥಾಲಯ.

ಒಂದು ಸುಸಜ್ಜಿತ ವಿವಿ ನಿರ್ಮಾಣಕ್ಕೆ ₹1 ಸಾವಿರ ಕೋಟಿ ಬೇಕು. ಹೊಸ ಕ್ಯಾಂಪಸ್ ಆರಂಭವಾಗಿ 10 ವರ್ಷ ಕಳೆದಿದೆ. ಸದ್ಯ 10 ವಿಭಾಗ ಮಾತ್ರ ಶಿಫ್ಟ್ ಆಗಿದೆ. ಹಾಲಿ 21 ವಿಭಾಗಗಳಿದ್ದು, ಹೊಸದಾಗಿ 19 ವಿಭಾಗ ಆರಂಭಿಸುವ ಚಿಂತನೆಯಿದೆ. ಅವೆಲ್ಲ ಆರಂಭಿಸಲು ಕಟ್ಟಡದ ಅಗತ್ಯ ಇದೆ. ಸರ್ಕಾರ ಹಣ ಮಂಜೂರು ಮಾಡಿದರೆ ಕ್ಷಿಪ್ರಗತಿಯಲ್ಲಿ ಕೆಲಸ ಆರಂಭಿಸಬಹುದು.

-ವೆಂಕಟೇಶ್ವರಲು, ಕುಲಪತಿ, ತುಮಕೂರು ವಿವಿ.