ಕಿಡಿಗೇಡಿಗಳ ಕೃತ್ಯಕ್ಕೆ ತುಮಕೂರ್ಲಹಳ್ಳಿ ಕಮರ ಕಾವಲ್ ಅರಣ್ಯ ಭಸ್ಮ

| Published : Feb 19 2025, 12:48 AM IST

ಕಿಡಿಗೇಡಿಗಳ ಕೃತ್ಯಕ್ಕೆ ತುಮಕೂರ್ಲಹಳ್ಳಿ ಕಮರ ಕಾವಲ್ ಅರಣ್ಯ ಭಸ್ಮ
Share this Article
  • FB
  • TW
  • Linkdin
  • Email

ಸಾರಾಂಶ

20ಕ್ಕೂ ಹೆಚ್ಚು ಹೆಕ್ಟೇರ್ ಕಾಯ್ದಿರಿಸಿದ ಅರಣ್ಯ ಪ್ರದೇಶದೊಂದಿಗೆ ಸಂಶೋಧನಾ ವಲಯವೂ ಆಹುತಿ । ಪ್ರಾಣಿ ಸಂಕುಲಗಳಿಗೆ ಎದುರಾದ ಭೀತಿ

ಬಿ.ಜಿ.ಕೆರೆ ಬಸವರಾಜ

ಕನ್ನಡಪ್ರಭ ವಾರ್ತೆ ಮೊಳಕಾಲ್ಮರು

ತಾಲೂಕಿನ ತುಮಕೂರ್ಲಹಳ್ಳಿ ಕಮರ ಕಾವಲ್ ಅರಣ್ಯ ಪ್ರದೇಶದಲ್ಲಿ ಕಿಡಿ ಗೇಡಿಗಳ ಕೃತ್ಯಕ್ಕೆ ಹತ್ತಾರು ಎಕರೆ ಅರಣ್ಯ ಭೂಮಿ ಬೆಂಕಿಗೆ ಆಹುತಿಯಾಗಿದ್ದು ಅಪಾರ ಪ್ರಮಾಣದ ವೃಕ್ಷ ಸಂಪತ್ತು ಹೊಂದಿರುವ ಹುಲ್ಲುಗಾವಲು ಮತ್ತು ಸಂಶೋಧನಾ ವಲಯ ಸುಟ್ಟು ಭಸ್ಮವಾಗಿದೆ.

ತುಮಕೂರ್ಲಹಳ್ಳಿ ಬೀಟ್ ನ ಸೂರಮ್ಮನಹಳ್ಳಿಗೆ ಹೋಗುವ ಅರಿವಿನ ದೊಡ್ಡಿ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದಾಗಿ 20ಕ್ಕೂ ಹೆಚ್ಚು ಹೆಕ್ಟೇರ್ ಕಾಯ್ದಿರಿಸಿದ ಅರಣ್ಯ ಪ್ರದೇಶದ ಜತಗೆ ಸಂಶೋಧನಾ ವಲಯವೂ ಆಹುತಿಯಾಗಿದೆ. ಬೆಂಕಿ ನಂದಿಸುವಲ್ಲಿ ಸಿಬ್ಬಂದಿಗಳು ಹರಸಾಹಸ ಪಡುವಂತಾಗಿದೆ.

ಕಳೆದ 5 ವರ್ಷದಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹಲವು ಜಾತಿಯ ಗಿಡಗಳನ್ನು ನೆಟ್ಟು ಜತನದಿಂದ ಪೋಷಣೆ ಮಾಡುವತ್ತ ಅರಣ್ಯ ಇಲಾಖೆ ಮುಂದಾಗಿದೆ. ಕೆಎಂಆರ್‌ಸಿ ಅನುದಾನದಲ್ಲಿ ಈಗಾಗಲೇ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ಕಾಮಗಾರಿ ನಿರ್ವಹಿಸಲಾಗಿದೆ. ಕುರುಚಲು ಅರಣ್ಯ ಪ್ರದೇಶವಾಗಿರುವ ಈ ಭಾಗದಲ್ಲಿ ಬಂದರಿ, ತಂಗಟಿ, ಕಮರ, ಆಸು, ತುಗ್ಗಲಿ, ಆಲ, ಹೊಂಗೆ, ತಬಸೇ ಹಾಗೂ ನೇರಳೆ, ಚಳ್ಳೆ, ಸೀತಾಫಲ, ಕವಳೇ, ಕಾರೆ ಸೇರಿದಂತೆ ಹತ್ತಾರು ಜಾತಿಯ ಹಣ್ಣಿನ ಗಿಡಗಳು ನೈಸರ್ಗಿಕವಾಗಿ ಬೆಳೆದಿವೆ ಹಾಗೂ ಕಾಡು ಹಂದಿ, ನವಿಲು, ಕೌಜುಗ, ನರಿ, ಕಡವೆ, ಜಿಂಕೆ, ಮೊಲ ಸೇರಿದಂತೆ ಹಲವು ರೀತಿಯ ಪ್ರಾಣಿ ಪಕ್ಷಿಗಳೂ ಇವೆ. ಕಳೆದೊಂದು ವಾರದಿಂದ ಬೆಳಕಿಗೆ ಬರುತ್ತಿರುವ ಬೆಂಕಿಯ ಪ್ರಕರಣಗಳಿಂದಾಗಿ. ಪ್ರಾಣಿ ಸಂಕುಲಗಳ ಆವಾಸ್ತಾನಕ್ಕೆ ಧಕ್ಕೆಯಾಗುವ ಭೀತಿ ಎದುರಾಗಿದೆ.

ಕಳೆದೊಂದು ವಾರದಿಂದ ಉಲ್ಬಣ ಗೊಂಡಿರುವ ಬಿಸಿಲಿನ ತಾಪಮಾನದ ಪರಿಣಾಮ ಹುಲ್ಲುಗಾವಲು ಸಂಪೂರ್ಣವಾಗಿ ಒಣಗಿದ್ದು, ವಸಂತ ಕಾಲದ ಸನಿಹದಲ್ಲಿದ್ದು ಗಿಡ ಮರಗಳ ಎಲೆಗಳ ಉದುರಿ ಚಿಗುರುವ ಸಂಯದಲ್ಲಿರುವ ಇಂಥ ದಿನಗಳಲ್ಲಿ ಬೆಂಕಿ ಬಿದ್ದಲ್ಲಿ ನಂದಿಸಲು ಸಾಧ್ಯವಾಗದಷ್ಟು ವೇಗವಾಗಿ ಸಾಗುತ್ತಾ ನೂರಾರು ಗಿಡ ಮರಗಳನ್ನು ಸ್ವಾಹ ಮಾಡುತ್ತಿದೆ.

4 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸಲು ಇಲಾಖೆ ಈಗಾಗಲೇ ನಿರ್ಧರಿಸಿದೆ. ಕೆಎಂಆರ್‌ಸಿ ಅನುದಾನದಲ್ಲಿ ರಕ್ಷಣಾ ಗೋಡೆ ಕಟ್ಟಿ ಮೀಸಲು ಅರಣ್ಯ ಪ್ರದೇಶ ರಕ್ಷಣೆಗೆ ಕ್ರಮ ವಹಿಸಲಾಗಿದೆ.

ಕುರಿಗಾಹಿಗಳ ಕೃತ್ಯ:

ಮೀಸಲು ಅರಣ್ಯದಲ್ಲಿ ಮಳೆಗಾಲ ಆರಂಭಕ್ಕೂ ಮುನ್ನಾ ಹಳೆ ಹುಲ್ಲು ಹೋದರೆ ಹೊಸ ಹುಲ್ಲು ಚಿಗುರಲು ಅನುಕೂಲವಾಗಲಿದೆ ಎನ್ನುವ ಕಾರಣದಿಂದ ಅರಣ್ಯದಂಚಿನ ಕುರಿಗಾಹಿಗಳು ಅಲ್ಲಲ್ಲಿ ಬೆಂಕಿ ಇಡುತ್ತಿದ್ದಾರೆ ಎನ್ನಲಾಗಿದೆ. ಬೆಂಕಿ ಬೀಳದಂತೆ ಪೇರ್ ಲೈನ್ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರೂ ಪ್ರತಿ ಬಾರಿ ಇಂತಹ ಕೃತ್ಯಗಳು ನಡೆಯುತ್ತಿವೆ. ಮಾನವರಿಗೆ ಉಪಕಾರಿಯಾಗಿರುವ ಅರಣ್ಯ ಸಂಪತ್ತು ಉಳಿವಿಗೆ ಸಾರ್ವಜನಿಕರು ಜಾಗೃತರಾಗುವುದು ಅಗತ್ಯ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಬೆಂಕಿ ನಂದಿಸಲು ಆದುನಿಕ ಸಲಕರಣೆಗಳ ಕೊರತೆ

ಗಡಿ ಭಾಗದ ತಾಲೂಕಿನಲ್ಲಿ ಒಟ್ಟು 15 ಸಾವಿರ ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಪ್ರದೇಶವಿದೆ. ಹತ್ತಾರು ಜಾತಿಯ ವೃಕ್ಷ ಸಂಪತ್ತು ಇದ್ದರೂ ಬೆಂಕಿ ಅವಘಡಗಳು ಸಂಭವಿಸಿದಾಗ ನಂದಿಸಲು ಇಲಾಖೆಯಲ್ಲಿ ಆದುನಿಕ ಪರಿಕರಗಳ ಕೊರತೆ ಕಾಡುತ್ತಿದೆ. ಅಲ್ಲದೆ ಸ್ವಯಂ ರಕ್ಷಣೆಯ ಸಾಮಾಗ್ರಿಗಳ ಕೊರತೆ ಎದುರಾಗಿದೆ. ಇದರೊಟ್ಟಿಗೆ ನಿರೀಕ್ಷೆಗೆ ತಕ್ಕಂತೆ ಸಿಬ್ಬಂದಿ ಕೊರತೆ ಪ್ರಮುಕವಾಗಿದ್ದು ಸಿಬ್ಬಂದಿ ನೇಮಕ ಅಗತ್ಯವಾಗಿದೆ ಎನ್ನುವುದು ಬಹುತೇಕರ ಒತ್ತಾಯವಾಗಿದೆ.