ತುಂಗಭದ್ರಾ ಜಲಾಶಯಕ್ಕೆ ಹಗ್ಗ ಜೋಡಣೆ ಗೇಟ್‌ ಅಳವಡಿಕೆ ಚಿಂತನೆ

| Published : Nov 28 2024, 12:33 AM IST

ಸಾರಾಂಶ

ಹಳೇ ಮಾದರಿ ಡಿಸೈನ್‌ ಬದಲಿಗೆ ಹೊಸ ಮಾದರಿ ಡಿಸೈನ್‌ ರೂಪಿಸುವುದರ ಬಗ್ಗೆ ಚಿಂತನೆ ಕೂಡ ನಡೆಸಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ ಗೇಟ್‌ಗಳನ್ನು ಬದಲಿಸಲು ಮುಂದಾಗಿರುವ ತುಂಗಭದ್ರಾ ಮಂಡಳಿ ಚೈನ್‌ ಸಿಸ್ಟಮ್‌ ಗೇಟ್‌ ಬದಲಿಗೆ ಹಗ್ಗವುಳ್ಳ ಗೇಟ್‌ಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಿದೆ. ಇದಕ್ಕೆ ರಾಷ್ಟ್ರೀಯ ಡ್ಯಾಂ ಸೇಫ್ಟಿ ಪರಿಣತರ ಅಭಿಪ್ರಾಯ ಕೇಳಲು ಮುಂದಾಗಿದೆ.

ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಚೈನ್‌ ಕಟ್ಟಾಗಿ ಕಳಚಿ ಬಿದ್ದ ಬಳಿಕ ಚೈನ್‌ ವುಳ್ಳ ಗೇಟ್‌ಗಳ ಬದಲಿಗೆ ಹಗ್ಗದಿಂದ ಜೋಡಣೆ ಮಾಡಿರುವ ಗೇಟ್‌ಗಳನ್ನು ಅಳವಡಿಸುವ ಬಗ್ಗೆ ತುಂಗಭದ್ರಾ ಮಂಡಳಿ ಚಿಂತನೆ ನಡೆಸಿದೆ. ಹಳೇ ಮಾದರಿ ಡಿಸೈನ್‌ ಬದಲಿಗೆ ಹೊಸ ಮಾದರಿ ಡಿಸೈನ್‌ ರೂಪಿಸುವುದರ ಬಗ್ಗೆ ಚಿಂತನೆ ಕೂಡ ನಡೆಸಿದೆ. ಇದಕ್ಕಾಗಿ ರಾಷ್ಟ್ರೀಯ ಡ್ಯಾಂ ಸೇಫ್ಟಿ ಪರಿಣತರ ಅಭಿಪ್ರಾಯ ಪಡೆಯುತ್ತಿದೆ ಎಂದು ವಿಶ್ವಸನೀಯ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಜಲಾಶಯದಲ್ಲಿ ನ.22ರಂದು ಮಂಡಳಿ ಅಧ್ಯಕ್ಷ ಎಸ್‌.ಎನ್‌. ಪಾಂಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆಯಾಗಿದೆ. ಈಗಾಗಲೇ ಕೇಂದ್ರೀಯ ಡ್ಯಾಂ ಸೇಫ್ಟಿ ತಂಡ ಭೇಟಿ ನೀಡಿ ಜಲಾಶಯದ ಗೇಟ್‌ಗಳನ್ನು ಬದಲಿಸಲು ಸಲಹೆ ನೀಡಿರುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.

ಜಲಾಶಯದ ಗೇಟ್‌ಗಳು ಯಾವ ಮಾದರಿಯಲ್ಲಿ ಇರಬೇಕು ಎಂಬುದರ ಬಗ್ಗೆ ರಾಷ್ಟ್ರೀಯ ಡ್ಯಾಂ ಸೇಫ್ಟಿ ತಂಡದ ಸಲಹೆ ಪಡೆದು ಮುಂದುವರಿಯುವುದು ಉತ್ತಮ ಎಂದು ತುಂಗಭದ್ರಾ ಮಂಡಳಿ ನಿರ್ಣಯಿಸಿದೆ.

ಕರೈಕುಡಿಯ ಸಿಸಿಆರ್‌ಐ ಸಂಸ್ಥೆಗೆ ಜಲಾಶಯದ ಗೇಟ್‌ಗಳ ಡಿಸೈನ್‌ ರೂಪಿಸಲು ವಹಿಸಲಾಗಿದೆ. ರಾಷ್ಟ್ರೀಯ ಡ್ಯಾಂ ಸೇಫ್ಟಿ ತಂಡದ ಪರಿಣತರು ಡಿಸೈನ್‌ಗೆ ಸಹಮತ ವ್ಯಕ್ತಪಡಿಸಿದ ಬಳಿಕವಷ್ಷೇ ಜಲಾಶಯದ ಕ್ರಸ್ಟ್‌ ಗೇಟ್‌ಗಳ ನಿರ್ಮಾಣಕ್ಕಾಗಿ ಟೆಂಡರ್‌ ಕರೆಯಲು ತುಂಗಭದ್ರಾ ಮಂಡಳಿ ಮುಂದಾಗಿದೆ ಎಂದು ಮೂಲಗಳು ದೃಢಪಡಿಸಿವೆ.

ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಕಳಚಿಬಿದ್ದು 40 ಟಿಎಂಸಿ ನೀರು ನದಿಪಾಲಾಗಿತ್ತು. ಈಗ ಈ ಗೇಟ್‌ಗೆ ಸ್ಟಾಪ್‌ ಲಾಗ್ ಅಳವಡಿಕೆ ಮಾಡಲಾಗಿದೆ. ಈಗ ಜಲಾಶಯದ ಎಲ್ಲ ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್‌ಗಳನ್ನು ಅಳವಡಿಕೆ ತುಂಗಭದ್ರಾ ಮಂಡಳಿ ಮುಂದಾಗಿದೆ. ಇದಕ್ಕೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಕೂಡ ಒಮ್ಮತ ಸೂಚಿಸಿವೆ.

ಒಂದು ವೇಳೆ ಹಗ್ಗದ ಜೋಡಣೆಯೊಂದಿಗೆ ಗೇಟ್‌ಗಳನ್ನು ಅಳವಡಿಸಿದಾಗ ಹಗ್ಗ ತುಂಡಾದರೂ ಮತ್ತೆ ಜೋಡಣೆ ಮಾಡಬಹುದು. ಚೈನ್‌ ಜೋಡಣೆ ಕಷ್ಟಸಾಧ್ಯ ಎಂದು ಮಂಡಳಿಯಲ್ಲಿ ಚರ್ಚೆ ನಡೆದಿದೆ. ಈಗ ರಾಷ್ಟ್ರೀಯ ಡ್ಯಾಂ ಸೇಫ್ಟಿ ತಂಡದ ಪರಿಣತರ ಅಭಿಪ್ರಾಯದ ಮೇಲೆಯೇ ಯಾವ ಮಾದರಿ ಕ್ರಸ್ಟ್‌ ಗೇಟ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ ಎಂಬುದು ನಿರ್ಧಾರವಾಗಲಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬರುವ ಬೇಸಿಗೆಯೊಳಗೆ ಜಲಾಶಯಕ್ಕೆ ಹೊಸ ಗೇಟ್‌ಗಳನ್ನು ಅಳವಡಿಕೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.