ತುಂಗಭದ್ರಾ: ಕಾರ್ಖಾನೆಗಳಿಗೆ ಚಳಿಗಾಲದಲ್ಲೇ ಎದುರಾದ ನೀರಿನ ಅಭಾವ

| Published : Dec 19 2023, 01:45 AM IST

ಸಾರಾಂಶ

ತುಂಗಭದ್ರಾ ಜಲಾಶಯದ ಹಿನ್ನೀರನ್ನೇ ನೆಚ್ಚಿಕೊಂಡು ಜಿಲ್ಲೆಯಲ್ಲಿ ಸುಮಾರು 17 ಬೃಹತ್ ಮತ್ತು ಮಧ್ಯಮ ಗಾತ್ರದ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ನೇರವಾಗಿ ಹತ್ತಾರು ಸಾವಿರ ಕಾರ್ಮಿಕರಿಗೆ ಹಾಗೂ ಪರೋಕ್ಷವಾಗಿ 40-50 ಸಾವಿರ ಜನರ ಬದುಕಿಗೆ ಆಸರೆಯಾಗಿವೆ. ಆದರೆ, ಈ ವರ್ಷ ಜಲಾಶಯಕ್ಕೆ ತೀರಾ ಕಡಿಮೆ ನೀರು ಬಂದಿದ್ದರಿಂದ ಚಳಿಗಾಲದಲ್ಲಿಯೇ ಕುಡಿಯುವ ನೀರಿಗೂ ಹಾಹಾಕಾರ ಆರಂಭವಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ರಾಜ್ಯದ ರೈತರ ಹಿತದೃಷ್ಟಿಯಿಂದ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿದ್ದ ನೀರು ಸ್ಥಗಿತಗೊಂಡಿದ್ದರಿಂದ ಕಾರ್ಖಾನೆಗಳಲ್ಲೂ ನೀರಿಗಾಗಿ ಹಾಹಾಕಾರ ಶುರುವಾಗಿದೆ.

ಕೆಲವೊಂದು ಘಟಕಗಳನ್ನೇ ಸ್ಥಗಿತಗೊಳಿಸಲು ಕಾರ್ಖಾನೆಗಳಲ್ಲಿ ಚಿಂತನೆ ನಡೆದಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೇಸಿಗೆಯಲ್ಲಿ ಬಹುತೇಕ ಕಾರ್ಖಾನೆಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡುವ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿ ಇಲ್ಲ ಎಂದೇ ಹೇಳಲಾಗುತ್ತಿದೆ.

ತುಂಗಭದ್ರಾ ಜಲಾಶಯದ ಹಿನ್ನೀರನ್ನೇ ನೆಚ್ಚಿಕೊಂಡು ಜಿಲ್ಲೆಯಲ್ಲಿ ಸುಮಾರು 17 ಬೃಹತ್ ಮತ್ತು ಮಧ್ಯಮ ಗಾತ್ರದ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ನೇರವಾಗಿ ಹತ್ತಾರು ಸಾವಿರ ಕಾರ್ಮಿಕರಿಗೆ ಹಾಗೂ ಪರೋಕ್ಷವಾಗಿ 40-50 ಸಾವಿರ ಜನರ ಬದುಕಿಗೆ ಆಸರೆಯಾಗಿವೆ. ಆದರೆ, ಈ ವರ್ಷ ಜಲಾಶಯಕ್ಕೆ ತೀರಾ ಕಡಿಮೆ ನೀರು ಬಂದಿದ್ದರಿಂದ ಚಳಿಗಾಲದಲ್ಲಿಯೇ ಕುಡಿಯುವ ನೀರಿಗೂ ಹಾಹಾಕಾರ ಆರಂಭವಾಗಿದೆ.

ಜಲಾಶಯದಲ್ಲಿ ಈಗ 10 ಟಿಎಂಸಿಯಷ್ಟೂ ನೀರಿಲ್ಲ. ಇದರಲ್ಲಿ ಕುಡಿಯುವ ನೀರು, ರಾಯಬಸವಣ್ಣ ಕಾಲುವೆ ಸೇರಿದಂತೆ ಕೆಲವೊಂದು ಕಾಲುವೆಗಳಿಗೆ ಬೇಸಿಗೆಯಲ್ಲೂ ನೀರು ನೀಡಬೇಕಾಗಿರುವುದರಿಂದ ಈ ನೀರು ಸಾಲುವುದಿಲ್ಲ ಎನ್ನುವಂತಾಗಿದೆ.

ಜಲಾಶಯದ ಹಿನ್ನೀರಿನಿಂದ ಕಾರ್ಖಾನೆಗಳಿಗೆ ಪೂರೈಕೆಯಾಗುತ್ತಿದ್ದ ನೀರು ಸ್ಥಗಿತಗೊಂಡಿದೆ. ಕೆಲವು ಕಾರ್ಖಾನೆಗಳು ನೀರು ಸಂಗ್ರಹಿಸಿಟ್ಟುಕೊಂಡಿದ್ದು, ಅದರಲ್ಲಿಯೇ ಈಗ ಕಾರ್ಯನಿರ್ವಹಿಸುತ್ತಿವೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಎರಡು-ಮೂರು ತಿಂಗಳಿಗೆ ಆಗುವಷ್ಟು ಮಾತ್ರ ನೀರು ಇರುತ್ತಿತ್ತು. ಆದರೆ, ಈ ವರ್ಷ ನಾಲ್ಕು ತಿಂಗಳು ಮೊದಲೇ ನೀರಿನ ಅಭಾವದಿಂದ ಕಾರ್ಖಾನೆಗಳು ತತ್ತರಿಸಿವೆ.

ಬೋರ್‌ವೆಲ್ ಮೊರೆ:

ಕಾರ್ಖಾನೆಗಳು ಈಗ ಖಾಸಗಿ ಬೋರ್‌ವೆಲ್ ಮೊರೆ ಹೋಗುತ್ತಿವೆ. ಅಲ್ಲಿಂದ ನೀರನ್ನು ಕಾರ್ಖಾನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆಯೂ ಹೀಗೆಯೇ ಆಗಿತ್ತು. ಆಗಲೂ ಸುತ್ತಮುತ್ತ ಇದ್ದ ಖಾಸಗಿ ಬೋರ್‌ವೆಲ್‌ಗಳ ಮಾಲೀಕರಿಗೆ ಹಣ ಕೊಟ್ಟು ಕಾರ್ಖಾನೆಗಳು ನೀರು ಖರೀದಿಸುತ್ತಿದ್ದವು. ಈ ವರ್ಷವೂ ಅದೇ ಪರಿಸ್ಥಿತಿ ಬಂದಿದೆ. ಪದೇ ಪದೇ ನೀರಿನ ಅಭಾವ ಎದುರಾಗುತ್ತಿರುವುದರಿಂದ ಕಾರ್ಖಾನೆಗಳಿಗೆ ಸಮಸ್ಯೆಯಾಗುತ್ತಿದೆ. ಕಾರ್ಖಾನೆ ಮುನ್ನಡೆಸುವುದು ಕಷ್ಟ ಎನ್ನುತ್ತಾರೆ ಕಾರ್ಖಾನೆಯ ಪ್ರತಿನಿಧಿಗಳು.

ಕಾರ್ಖಾನೆಗಳಿಗೆ ಬೇಕಾಗುವ ನಾಲ್ಕಾರು ಟಿಎಂಸಿ ನೀರನ್ನು ಕಾರ್ಖಾನೆಗಳಿಗೆ ಮೀಸಲು ಇಡುವಂತೆ ಆಗಬೇಕು. ಈ ದಿಸೆಯಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಕಾರ್ಖಾನೆಗಳು ಬಂದ್ ಆದರೆ ಕಾರ್ಮಿಕರು ಬೀದಿಗೆ ಬರುತ್ತಾರೆ ಎನ್ನುವ ಎಚ್ಚರಿಕೆಯನ್ನು ಈಗಾಗಲೇ ಕಾರ್ಖಾನೆಯ ಪ್ರತಿನಿಧಿಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.

ಕೈ ಚೆಲ್ಲಿದ ಸರ್ಕಾರ: ಜಲಾಶಯದಲ್ಲಿ ನೀರಿಲ್ಲದಿರುವುದರಿಂದ ನಾವೇನೂ ಮಾಡಲು ಆಗುವುದಿಲ್ಲ. ನೀವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಖಡಕ್ ಆಗಿಯೇ ಸರ್ಕಾರ ಹೇಳಿದೆ. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಕಾರ್ಖಾನೆಯ ಪ್ರತಿನಿಧಿಗಳು ಭೇಟಿಯಾದರೂ ಪ್ರಯೋಜನ ಇಲ್ಲದಂತಾಗಿದೆ.

ಕಾರ್ಮಿಕರು ಬೀದಿಗೆ: ಕಾರ್ಖಾನೆಗಳು ಉತ್ಪಾದನಾ ಘಟಕಗಳನ್ನು ನೀರಿಲ್ಲದೇ ಕೆಲವು ದಿನ ಬಂದ್ ಮಾಡುವ ಸ್ಥಿತಿ ನಿರ್ಮಾಣವಾದರೆ ಕಾರ್ಮಿಕರು ಬೀದಿಗೆ ಬರುತ್ತಾರೆ. ಅವರಿಗೆ ಕಡ್ಡಾಯ ರಜೆ ನೀಡುವ ಕುರಿತು ಕಾರ್ಖಾನೆಗಳು ಚಿಂತನೆ ನಡೆಸಿವೆ.

ನೀರಿನ ಅಭಾವ ಇರುವುದರಿಂದ ಕಾರ್ಖಾನೆಗಳಿಗೆ ನೀರು ನೀಡಲು ಆಗುತ್ತಿಲ್ಲ. ಕಾರ್ಖಾನೆಗಳಿಗೆ ನೀರು ಪೂರೈಕೆಯನ್ನು ರೈತರು ಮತ್ತು ಕುಡಿಯುವ ನೀರಿಗಾಗಿ ಸ್ಥಗಿತಗೊಳಿಸಲಾಗಿದೆ ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.