ಸಾರಾಂಶ
ಕನಕಗಿರಿ:
ತುಂಗಭದ್ರಾ ಹಾಗೂ ಕೃಷ್ಣಾ ನದಿ ನೀರು ಕನಕಗಿರಿಗೆ ನೀರು ಹರಿದು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಈ ಭಾಗದ ರೈತರ ಬದುಕು ಬಂಗಾರವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ನಾಗಲಾಪೂರ ಗ್ರಾಮದ ಕೆರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಬಾಗಿನ ಅರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಕೃಷ್ಣಾ ಬಿ ಸ್ಕೀಂ ಹಾಗೂ ತುಂಗಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ಕನಕಗಿರಿ ತಾಲೂಕಿನ ಹಲವು ಗ್ರಾಮಗಳ ಕೆರೆಗಳಿಗೆ ನೀರು ಸರಬರಾಜು ಮಾಡಿ ರೈತರ ಬದುಕು ಹಸನುಗೊಳಿಸುವ ಮಹತ್ಕಾರ್ಯ ನಮ್ಮ ಸರ್ಕಾರ ಮಾಡಿದೆ. ಕೃಷ್ಣಾ ಬಿ ಸ್ಕೀಂ ಯೋಜನೆಯಡಿ ಕನಕಗಿರಿ ತಾಲೂಕು ಸೇರ್ಪಡೆಗೊಳಿಸಲು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿಗೆ ಹೋಗಿ ಮಾತನಾಡಿದ್ದರಿಂದಲೇ ಈಗ ತಾಲೂಕಿಗೆ ಕೃಷ್ಣಾ ನದಿ ನೀರು ಬರಲು ಕಾರಣವಾಗಿದೆ. ನಾನು ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿರುವ ಹೆಮ್ಮೆ ಇದೆ. ಬಿಜೆಪಿಯವರು ಒಂದು ಕೆರೆಯೂ ತುಂಬಿಸಲಿಲ್ಲ. ಅಭಿವೃದ್ಧಿಯೂ ಮಾಡಲಿಲ್ಲ. ಹೀಗಾಗಿ ಜನ ೪೨ ಸಾವಿರ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ ಎಂದರು.
₹ 200 ಕೋಟಿ ಬಿಡುಗಡೆ:ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಹಾಗೂ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿ ₹ ೨೦೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಅನುಮೋದನೆ ಪಡೆದು ಕಾಮಗಾರಿಗೆ ಚಾಲನೆ ನೀಡಲಾಗುವುದು. ಇನ್ನೂ ಬಂಕಾಪೂರ, ಮುಸಲಾಪೂರ ರಸ್ತೆ ಅಭಿವೃದ್ದಿಗೆ ₹ 2 ಕೋಟಿ ಅನುದಾನ ಮಂಜೂರಾಗಿದ್ದು, ಕೂಡಲೇ ಕಾಮಗಾರಿಗೆ ಚಾಲನೆ ನೀಡುವುದಾಗಿ ಸಚಿವರು ತಿಳಿಸಿದರು.ತಾಲೂಕಿನ ರಾಂಪುರ, ರಾಮದುರ್ಗಾ, ಇಂಗಳದಾಳ, ಬಸರಿಹಾಳ, ದೇವಲಾಪೂರ, ಲಾಯದುಣಸಿ, ಕೆ. ಕಾಟಾಪೂರ, ಲಕ್ಷ್ಮೀದೇವಿ ಕೆರೆಗಳಿಗೆ ಭೇಟಿ ನೀಡಿದ ಸಚಿವರು, ಎಲ್ಲ ಕೆರೆಗಳಿಗೂ ನೀರು ತುಂಬಿಸುವುದು, ಹಿರೇಖೇಡದಲ್ಲಿ ೧೧೦ ಕೆವಿ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪನೆ, ಸಿರಿವಾರದಲ್ಲಿ ತೋಟಗಾರಿಕೆ ಪಾರ್ಕ್ ನಿರ್ಮಾಣಕ್ಕೆ ₹ ೮೩ ಕೋಟಿ ಅನುದಾನ ಹಾಗೂ 100 ಎಕರೆ ಭೂಮಿ ಮೀಸಲಿಡಲಾಗಿದೆ ಎಂದರು. ಈ ವೇಳೆ ಗ್ರಾಪಂ ಅಧ್ಯಕ್ಷೆ ಹನುಮಯ್ಯ, ಉಪಾಧ್ಯಕ್ಷೆ ಮಲ್ಲಮ್ಮ ಮಮ್ಮಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಶರಣೇಗೌಡ, ಜಿಲ್ಲಾ ಕೆಡಿಪಿ ಸದಸ್ಯ ನಾಗಪ್ಪ ಹುಗ್ಗಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಜರತಹುಸೇನ್, ಪ್ರಮುಖರಾದ ಸಿದ್ದಪ್ಪ ನಿರ್ಲೂಟಿ, ವೀರೇಶ ಸಮಗಂಡಿ, ಬಸವಂತಗೌಡ ಪಾಟೀಲ್, ತಾಪಂ ಇಒ ರಾಜಶೇಖರ, ತಹಸೀಲ್ದಾರ್ ವಿಶ್ವನಾಥ ಮುರುಡಿ, ಬಸವಂತಗೌಡ ಪಾಟೀಲ್, ಧರ್ಮಸ್ಥಳ ಸಂಸ್ಥೆಯ ಕೃಷಿ ಅಧಿಕಾರಿ ಗಂಗಾಧರ, ಕೆರೆ ಅಭಿವೃದ್ಧಿ ಅಧಿಕಾರಿ ಸತೀಶ್, ಕೆರೆ ಅಭಿವೃದ್ಧಿ ಅಧ್ಯಕ್ಷ ಶಾಮನಗೌಡ ಇತರರಿದ್ದರು.
ನನ್ನ ಚರ್ಮದಿಂದ ಕನಕಗಿರಿ ಜನತೆಗೆ ಚಪ್ಪಲಿ ಮಾಡಿಕೊಟ್ಟರೂ ಋಣ ತೀರಿಸಲು ಸಾಧ್ಯವಿಲ್ಲ. ಅಗತ್ಯ ಬಿದ್ದರೇ ನನ್ನ ಚರ್ಮದಿಂದ ಚಪ್ಪಲಿ ಮಾಡಿಸಲು ಸಿದ್ಧನಿರುವೆ. ಬಿಜೆಪಿಯವರ ಬಣ್ಣದ ಮಾತುಗಳಿಗೆ ಸೀಮಿತವಾಗಿದ್ದಾರೆ. ಕ್ಷೇತ್ರದ ಎರಡೂ ತಾಲೂಕುಗಳನ್ನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.