ವಿಪರ್ಯಾಸವೆಂದರೆ ಬುಧವಾರ ಮಾ.17 ರಿಂದಲೇ ಈ ಕಾಲುವೆ ಮೂಲಕ ಎರಡೂ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗಾಗಿ 2 ಸಾವಿರ ಕ್ಯೂಸೆಕ್‌ ನೀರನ್ನು ಹರಿಬಿಡಲಾಗಿದ್ದು, ನೀರು ಬಿಟ್ಟ 18 ಗಂಟೆಗಳಲ್ಲಿ ಕಾಲುವೆ ಒಡೆದಿದೆ

ಮುನಿರಾಬಾದ್: ತುಂಗಭದ್ರಾ ಜಲಾಶಯದಿಂದ ರಾಯಚೂರು, ಕೊಪ್ಪಳ ಜಿಲ್ಲೆಯ ಕೆಲ ನಗರ, ಗ್ರಾಮಗಳಿಗೆ ಕುಡಿಯವ ನೀರು ಕಾಲುವೆ ಮೂಲಕ ಬಿಡುತ್ತಿದ್ದ ವೇಳೆ ಬುಧವಾರ ಬೆಳಗಿನಜಾವ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಎಡದಂತೆ ನಾಲೆ ಒಡೆದು, ನೀರು ಪೋಲಾಗಿದ್ದು, ಅಲ್ಲದೆ, ರೈತರ ಭೂಮಿ ಕೊಚ್ಚಿಕೊಂಡು ಹೋಗಿ, ಕೋಟ್ಯಂತರ ಹಾನಿಯಾಗಿದೆ.

ವಿಪರ್ಯಾಸವೆಂದರೆ ಬುಧವಾರ ಮಾ.17 ರಿಂದಲೇ ಈ ಕಾಲುವೆ ಮೂಲಕ ಎರಡೂ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗಾಗಿ 2 ಸಾವಿರ ಕ್ಯೂಸೆಕ್‌ ನೀರನ್ನು ಹರಿಬಿಡಲಾಗಿದ್ದು, ನೀರು ಬಿಟ್ಟ 18 ಗಂಟೆಗಳಲ್ಲಿ ಕಾಲುವೆ ಒಡೆದಿದೆ.

ರಂಧ್ರ ಬಿದ್ದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರೂ ಲೆಕ್ಕಿಸಿದೆ, ಅದನ್ನು ದುರಸ್ತಿ ಸಹ ಮಾಡದೆ ವಿವಿಧ ನಗರಗಳಿಗೆ ಕುಡಿಯುವ ನೀರಿಗಾಗಿ ಕಾಲುವೆಯಲ್ಲಿ 200 ಕ್ಯೂಸೆಕ್‌ನಿಂದ 2 ಸಾವಿರ ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಕಾಲುವೆಗೆ ಬೋಂಗಾ ಬಿದ್ದಿದ್ದು, ನಂತರ ಸುಮಾರು 100 ಅಡಿಯಷ್ಟು ಅಗಲ ಒಡೆದಿದೆ. ಹೀಗೆ ಒಡೆದಿದ್ದರಿಂದ ಕಾಲುವೆಯಲ್ಲಿನ ನೀರು ನುಗ್ಗಿ ಅಪಾರ ಪ್ರಮಾಣದ ಭೂಮಿ ಕೊಚ್ಚಿಕೊಂಡು ಹೋಗಿದ್ದು, ರೈತರು ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಬೇಸಿಗೆಯ ವೇಳೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಭೀತಿ ಎದುರಾಗಿದೆ.

ಕುಡಿವ ನೀರಿಗಾಗಿ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಪ್ರಮುಖ ನಗರಗಳಿಗೆ ಮಾ.17 ರಿಂದ ಕಾಲುವೆಯಲ್ಲಿ ಪ್ರತಿನಿತ್ಯ 2000 ಕ್ಯೂಸೆಕ್‌ ನೀರನ್ನು ಹರಿಸುವ ವೇಳೆಯಲ್ಲಿಯೇ ಕಾಲುವೆ ಒಡೆದು ಹೋಗಿದೆ. ಇದರಿಂದ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಪ್ರಮುಖ ನಗರಗಳಿಗೆ ಕುಡಿಯುವ ನೀರಿನ ಸಂಕಷ್ಟ ಎದುರಾಗಲಿದೆ.

ಕಾಲುವೆಯ ಗೋಡೆ ಒಡೆದ ಕಾರಣ ಭಾರೀ ಪ್ರಮಾಣದಲ್ಲಿ ನೀರು ಪೋಲಾಗಿದ್ದು, ಸುಮಾರು 200 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದು ನಿಂತ ಭತ್ತ ಸಂಪೂರ್ಣ ನಾಶವಾಗಿದೆ. ಇನ್ನೇನು ವಾರದಲ್ಲಿ ಕಟಾವಿಗೆ ಬರಬೇಕಾಗಿದ್ದ ಭತ್ತವು ನೀರು ಪಾಲಾಗಿದ್ದು ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೋಟ್ಯಂತರ ಬೆಲೆಯ ಬೆಳೆದು ನಿಂತ ಭತ್ತ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.

ರೆಸಾರ್ಟ್ ಗೆ ನುಗ್ಗಿದ ಕಾಲುವೆ ನೀರು:

ಬಸಾಪುರ ಗ್ರಾಮದಲ್ಲಿರುವ ಐದು ರೆಸಾರ್ಟ್‌ಗಳಿಗೆ ನೀರು ನುಗ್ಗಿದೆ. ಅದರಲ್ಲಿ ಮೂರು ರೆಸಾರ್ಟ್‌ಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಅದೃಷ್ಟವಶಾತ್ ಎರಡು ವಾರಗಳ ಹಿಂದೆ ರೆಸಾರ್ಟ್ ಗಳಿಗೆ ಪರವಾನಗಿ ಇಲ್ಲ ಎಂದು ಜಿಲ್ಲಾಡಳಿತವು ಬಂದ್‌ ಮಾಡಿದ ಹಿನ್ನೆಲೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ನಾಲ್ಕು ಗ್ರಾಮಕ್ಕೆ ನುಗ್ಗಿದ ನೀರು: ಎಡದಂಡೆ ಮುಖ್ಯ ಕಾಲುವೆಯ ಗೋಡೆ ಒಡೆದ ಪರಿಣಾಮ ಕಾಲುವೆಯ ನೀರು ಬಸಾಪುರ, ನಾರಾಯಣಪೇಟ್, ಅಯೋಧ್ಯ ಹಾಗೂ ರಾಜಾರಾಮ್ ಪೇಟ್ ಗ್ರಾಮಗಳಿಗೆ ನೀರು ನುಗ್ಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಬಸವರಾಜ್ ಕ್ಯಾವಟರ್ ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿದರು.

ಕಾಲುವೆ ನೀರು ನುಗ್ಗಿ 200 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಹಾನಿಯಾಗಿದ್ದು, ರೈತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಪ್ರಭಾರಾಜ್ ಪಾಟೀಲ್, ಖಾಜಾ ಹುಸೇನ್ ದೊಡ್ಮನಿ, ಮಹೇಶ್ ಹಳ್ಳಿ, ಪ್ರದೀಪ್ ಪಲ್ಲೆದ್, ಪ್ರದೀಪ್ ಗೌಡ ಪಾಟೀಲ್, ಹನಮಂತಪ್ಪ ಸೇರಿದಂತೆ ಇತರರು ಇದ್ದರು.

ವಾರದಲ್ಲಿ ಕಾಲುವೆ ದುರಸ್ತಿ: ಬಿರುಕು ಬಿಟ್ಟ ಕಾಲುವೆಯನ್ನು ವಾರದಲ್ಲಿ ದುರಸ್ತಿಗೊಳಿಸಲಾಗುವುದು ಎಂದು ನೀರಾವರಿ ಇಲಾಖೆಯ ವಡ್ಡರಹಟ್ಟಿ ವಿಭಾಗದ ಕಾರ್ಯ ಪಾಲಕ ಅಭಿಯಂತರ ಗೋಡೆಕರ್ ತಿಳಿಸಿದ್ದಾರೆ.

ಬಿರುಕು ಬಿಟ್ಟ ಪ್ರದೇಶವು ಅತ್ಯಂತ ಸೂಕ್ಷ್ಮ ವಲಯದ ಪ್ರದೇಶ ಎಂದು ಗುರುತಿಸಲಾಗಿದ್ದು. ಕಾಲುವೆಯ ಮುಂಭಾಗ ಹಾಗೂ ಹಿಂಭಾಗದಲ್ಲಿ ಸಮತೋಲನ ಜಲಾಶಯಗಳು ಇರುವ ಕಾರಣ ನೀರಿನ ಒತ್ತಡ ಹೆಚ್ಚಾಗಿ ಕಾಲುವೆ ಬಿರುಕು ಬಿಟ್ಟಿದೆ ಎಂದರು.

ಎಡದಂಡೆ ಮುಖ್ಯ ಕಾಲುವೆಯಲ್ಲಿ ಜ. 10ಕ್ಕೆ ನೀರು ಹರಿಸುವುದನ್ನು ನಿಲ್ಲಿಸಲಾಯಿತು. ಮಾ.17ಕ್ಕೆ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಪ್ರಮುಖ ನಗರಗಳಿಗೆ ಕುಡಿಯುವ ನೀರಿಗಾಗಿ ಕಾಲುವೆಯಲ್ಲಿ 2,000 ಕ್ಯೂ ಸೆಕ್‌ ನೀರು ಹರಿಸಲಾಯಿತು. ನೀರು 104 ಮೈಲಿನವರೆಗೆ ತಲುಪಿತ್ತು. ಕಾಲುವೆ ಬಿರುಕು ಬಿಟ್ಟ ಕಾರಣ ನೀರು ಹರಿಸುವದನ್ನು ಸ್ಥಗಿತಗೊಳಿಸಲಾಗಿದೆ ಎಂದರು.

ಸ್ಥಳದಲ್ಲಿ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಮಲಗಿವಾಡ, ನೀರಾವರಿ ಇಲಾಖೆ ಅಧಿಕಾರಿಗಳು ಇದ್ದಾರೆ.