ಸಾರಾಂಶ
ಕೃಷ್ಣ ಲಮಾಣಿ ಹೊಸಪೇಟೆ
ತುಂಗಭದ್ರಾ ಜಲಾಶಯದ ನೀರು ದಿನೇ ದಿನೇ ತಳಕ್ಕೆ ಇಳಿಯುತ್ತಾ ಸಾಗಿದ್ದು, ಮಳೆಯಾದರೆ ಜಲಾಶಯಕ್ಕೆ ನೀರು ಹರಿದು ಬರಲಿದೆ. ಹಾಗಾಗಿ ಈಗ ಜಲಾಶಯ ನೆಚ್ಚಿರುವ ಅನ್ನದಾತರು ಆಗಸ ನೋಡುವಂತಾಗಿದೆ.ತುಂಗಭದ್ರಾ ಜಲಾಶಯ 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಈಗ ಜಲಾಶಯದಲ್ಲಿ 6.846 ಟಿಎಂಸಿ ನೀರಿದೆ. ಈ ಜಲಾಶಯದಲ್ಲಿ ಸಂಗ್ರಹವಾಗುವ ನೀರಿನಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಕುಡಿಯುವ ನೀರಿಗೂ ಬಳಕೆ ಮಾಡಲಾಗುತ್ತದೆ. ಈಗ ಮಳೆ ಸರಿಯಾಗಿ ಆದರೆ ಜಲಾಶಯಕ್ಕೆ ನೀರು ಹರಿದು ಬರಲಿದ್ದು, ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ದೊರೆಯಲಿದೆ.
ಈಗಿರುವ ನೀರಿನಲ್ಲಿ ಆಂಧ್ರದ ಪಾಲಿಲ್ಲ:ತುಂಗಭದ್ರಾ ಜಲಾಶಯದಲ್ಲಿ ಈಗಿರುವ ನೀರಿನಲ್ಲಿ ಆಂಧ್ರಪ್ರದೇಶದ ಪಾಲಿಲ್ಲ. ಜಲಾಶಯದಲ್ಲಿ ಈಗ ಬರೀ 6.846 ಟಿಎಂಸಿ ನೀರಿದೆ. ಆಂಧ್ರಪ್ರದೇಶ ತನ್ನ ಕೋಟಾದ ನೀರು ಪಡೆದಿದೆ. ತೆಲಂಗಾಣಕ್ಕೂ ನೀರು ಹಂಚಿಕೆ ಆಗಿದೆ. ಈಗ ರಾಜ್ಯದ ಪಾಲಿನ ನೀರು ಮಾತ್ರ ಉಳಿದಿದೆ.ಕುಡಿಯುವ ನೀರಿಗೆ ಬಳಕೆ:ಈಗ ಲಭ್ಯ ಇರುವ 6.846 ಟಿಎಂಸಿ ನೀರಿನಲ್ಲಿ 2 ಟಿಎಂಸಿಯಷ್ಟು ನೀರು ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಲಭ್ಯ ಇಲ್ಲ. ಇನ್ನೂ 1.5 ಟಿಎಂಸಿ ನೀರು ಆವಿ ಆಗಲಿದೆ. ಇಲ್ಲಿಗೆ ಮೂರೂವರೆ ಟಿಎಂಸಿ ನೀರು ಮುಗಿಯಲಿದ್ದು, ಉಳಿದ ಮೂರು ಟಿಎಂಸಿ ನೀರಿನಲ್ಲಿ ರಾಯಚೂರು ಜಿಲ್ಲೆಗೆ 1.7 ಟಿಎಂಸಿ ನೀರು ಕುಡಿಯುವ ನೀರಿಗೆ ಬಳಕೆ ಆಗಲಿದೆ. ಉಳಿದಂತೆ 0.3 ಟಿಎಂಸಿ ನೀರು ಕೊಪ್ಪಳ ಜಿಲ್ಲೆಗೆ ಮತ್ತು 0.3 ಟಿಎಂಸಿ ನೀರು ವಿಜಯನಗರ ಜಿಲ್ಲೆಗೆ ಬಳಕೆ ಆಗಲಿದೆ. ಇನ್ನೂ ಅರ್ಧ ಟಿಎಂಸಿಯಷ್ಟು ನೀರು ವಿಜಯನಗರ ಕಾಲದ ಕಾಲುವೆ ನೆಚ್ಚಿಕೊಂಡಿರುವ ರೈತರ ಜಮೀನುಗಳಲ್ಲಿ ಬೆಳೆದು ನಿಂತಿರುವ ಪೈರಿಗೆ ಬಳಕೆ ಮಾಡಲಾಗುತ್ತದೆ ಎಂದು ನೀರಾವರಿ ಇಲಾಖೆಯ ಮೂಲಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿವೆ.
ಒಳ ಹರಿವೇ ಈಗ ಆಸರೆ:ತುಂಗಭದ್ರಾ ಜಲಾಶಯದ ಒಳ ಹರಿವು 372 ಕ್ಯುಸೆಕ್ ಇದೆ. ಈ ನೀರು ಸ್ಥಳೀಯ ಮಟ್ಟದಲ್ಲಿ ಬಿದ್ದ ಮಳೆಯದ್ದಾಗಿದೆ. ಜಲಾಶಯದ ಮೇಲ್ಭಾಗದಲ್ಲಿ ಅದರಲ್ಲೂ ಮಲೆನಾಡಿನಲ್ಲಿ ಬೀಳುವ ನೀರು ಜಲಾಶಯಕ್ಕೆ ಜೀವಾಧಾರ ಆಗಿದ್ದು, ಈ ನೀರು ಹರಿದು ಬಂದರೆ ಜಲಾಶಯದ ಒಳ ಹರಿವು ಹೆಚ್ಚಲಿದೆ. ಹಾಗಾಗಿ ಜಲಾಶಯದ ನೀರಿಗಾಗಿ ಈಗ ರೈತರು ಮಳೆಯತ್ತ ಚಿತ್ತ ಹರಿಸುತ್ತಿದ್ದಾರೆ. ಇನ್ನೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲು ಕೂಡ ಜಲಾಶಯಕ್ಕೆ ನೀರು ಹರಿದು ಬರಬೇಕಿದೆ. ಇದರಿಂದ ಈ ಭಾಗದ ಅಂತರ್ಜಲಮಟ್ಟ ಕೂಡ ವೃದ್ಧಿಸಲಿದೆ. ಹಾಗಾಗಿ ಉತ್ತಮ ಮಳೆಯಾಗಬೇಕಿದೆ ಎಂದು ಹೇಳುತ್ತಾರೆ ಸ್ಥಳೀಯ ರೈತ ಶ್ರೀನಿವಾಸ್.ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಿದೆ. ಮಳೆ ಬಾರದಿದ್ದರೆ ರೈತರಿಗೆ ನೀರಿನ ಸಮಸ್ಯೆ ಆಗಲಿದ್ದು, ಜತೆಗೆ ಕುಡಿಯುವ ನೀರಿಗೂ ತೊಂದರೆ ಆಗಲಿದೆ ಎಂದು ವಿಜಯನಗರ ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಹೇಳಿದ್ದಾರೆ.