ತುಂಗಭದ್ರಾ ಜಲಾಶಯದ ನೀರು ಮತ್ತೆ ಹಸಿರು

| Published : Nov 19 2024, 12:46 AM IST

ಸಾರಾಂಶ

ತುಂಗಭದ್ರಾ ಜಲಾಶಯ ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಕುಡಿಯುವ ನೀರಿಗೂ ಆಸರೆಯಾಗಿದೆ.

ಹೊಸಪೇಟೆ: ತುಂಗಭದ್ರಾ ಜಲಾಶಯದ ನೀರು ಮತ್ತೆ ಹಸಿರು ಬಣ್ಣಕ್ಕೆ ತಿರುಗಿದೆ. ಜಲಾಶಯ ನೆಚ್ಚಿರುವ ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದ್ದು, ಪರಿಸರ ಪ್ರೇಮಿಗಳು ಜಲಾಶಯದ ನೀರು ಪದೇ ಪದೇ ಹಸಿರು ಬಣ್ಣಕ್ಕೆ ತಿರುಗುತ್ತಿರುವುದರಿಂದ ಎಚ್ಚೆತ್ತುಕೊಂಡು ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ತುಂಗಭದ್ರಾ ಜಲಾಶಯ ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಕುಡಿಯುವ ನೀರಿಗೂ ಆಸರೆಯಾಗಿದೆ. ಜೊತೆಗೆ ನೀರಾವರಿಯೂ ಆಸರೆಯಾಗಿದೆ. ಜಲಾಶಯದಿಂದ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ನೀರು ಪಡೆಯುತ್ತಿವೆ. ಹೀಗಿದ್ದರೂ ಜಲಾಶಯದ ನೀರು ಪದೇಪದೇ ಹಸಿರು ಬಣ್ಣಕ್ಕೆ ತಿರುಗುತ್ತಿದ್ದು, ಇದಕ್ಕೆ ಮೂಲ ಕಾರಣ ಕಂಡುಕೊಳ್ಳಬೇಕು. ಜಲಾಶಯದ ಮೇಲ್ಭಾಗದಲ್ಲಿ ತ್ಯಾಜ್ಯ ಸೇರುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಇದುವರೆಗೆ ಜಲಾಶಯದ ಒಡಲಿಗೆ ಸೇರಿರುವ ತ್ಯಾಜ್ಯದ ಕುರಿತು ಅಧ್ಯಯನ ನಡೆದಿಲ್ಲ.

ಒಂದು ಕಡೆಯಲ್ಲಿ ಜಲಾಶಯದ 33 ಕ್ರಸ್ಟ್‌ ಗೇಟ್‌ಗಳನ್ನು ಬದಲಿಸಬೇಕು ಎಂದು ಈಗಾಗಲೇ ತಜ್ಞರು ವರದಿ ನೀಡಿದ್ದಾರೆ. ಈ ನಡುವೆ ಈಗ ಜಲಾಶಯದ ನೀರೇ ಹಸಿರು ಬಣ್ಣಕ್ಕೆ ತಿರುಗಿದೆ. ಜಲಾಶಯದಲ್ಲಿ ಶೀಘ್ರವೇ ತುಂಗಭದ್ರಾ ಮಂಡಳಿ ಸಭೆ ಕೂಡ ನಡೆಯಲಿದೆ. ಗ್ರೀನ್‌ ಅಲ್ಗೆ ಎಂಬ ಸೂಕ್ಷ್ಮಾಣುಜೀವಿಯಿಂದ ಈ ರೀತಿ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿದೆ ಎಂದು ಪರಿಸರ ಪ್ರೇಮಿಗಳು ಹೇಳುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವ ಪ್ರಮುಖ ಅಂಶಗಳ ಬಗ್ಗೆ ನಿಖರತೆ ದೊರೆಯುತ್ತಿಲ್ಲ. ಹಾಗಾಗಿ ಜಲಾಶಯದ ನೀರು ಹಚ್ಚ ಹಸಿರು ಬಣ್ಣಕ್ಕೆ ತಿರುಗುತ್ತಿರುವ ಬಗ್ಗೆ ಅಧ್ಯಯನಗಳು ನಡೆಯಲಿ ಎಂದು ಪರಿಸರಪ್ರೇಮಿಗಳು ಒತ್ತಾಯಿಸಿದ್ದಾರೆ.

ತುಂಗಭದ್ರಾ ಜಲಾಶಯದ ನೀರು ಮತ್ತೆ ಹಸಿರು ಬಣ್ಣಕ್ಕೆ ತಿರುಗಿರುವುದು.