ಸಾರಾಂಶ
- ಹೊನ್ನಾಳಿ ಬಾಲರಾಜ್ ಘಾಟ್ ವ್ಯಾಪ್ತಿ ಇನ್ನಷ್ಟು ನಿವಾಸಿಗಳ ಸ್ಥಳಾಂತರಕ್ಕೆ ಕ್ರಮ: ಎಸಿ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ ಹಲವೆಡೆ ಮಳೆ ಮುಂದುವರಿದಿದೆ. ತುಂಗಾ ಮತ್ತು ಭದ್ರಾ ಜಲಾಶಯಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತಿದೆ.ಶುಕ್ರವಾರ ತುಂಗಭದ್ರಾ ನದಿಯಲ್ಲಿ 10.300 ಮೀಟರ್ ಇದ್ದ ನೀರಿನಮಟ್ಟ ಶನಿವಾರ ಸಂಜೆ ವೇಳೆಗೆ 10.800 ಮೀಟರ್‌ಗೆ ಏರಿಕೆಯಾಗಿದೆ. ಬಾಲರಾಜ್ ಘಾಟ್ ವ್ಯಾಪ್ತಿಯ ಮನೆಗಳವರೆಗೆ ನೀರು ಬಂದಿದ್ದು, ಇನ್ನಷ್ಟು ನಿವಾಸಿಗಳ ಸ್ಥಳಾಂತರ ಸಾಧ್ಯತೆ ಇದೆ.
ತುಂಗಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಜಲಾಶಯಕ್ಕೆ 88 ಸಾವಿರ ಕ್ಯುಸೆಕ್ ನೀರು ಹೊರಬರುತ್ತಿದೆ. ಇದರಿಂದ ಹೊನ್ನಾಳಿ ಬಳಿ ತುಂಗಭದ್ರಾ ನದಿ ನೀರಿನ ಮಟ್ಟ ಏರಿಕೆ ಕಂಡಿದೆ. ಭದ್ರಾ ಡ್ಯಾಂದಿಂದ ನೀರು ಬಿಟ್ಟರೆ ಮಾತ್ರ ಹೊನ್ನಾಳಿಯಲ್ಲಿ ಅಪಾಯದಮಟ್ಟ ಮಿರಿ ನದಿ ಹರಿಯಲಿದೆ. ಭದ್ರಾ ಜಲಾಶಯಕ್ಕೆ 35 ಸಾವಿರದಿಂದ 40 ಸಾವಿರ ಕ್ಯುಸೆಕ್ ಒಳಹರಿವು ಹೆಚ್ಚಾಗಿದೆ. ಭದ್ರಾ ಜಲಾಶಯ ಕೂಡ ಭರ್ತಿಯಾಗುವ ಮಟ್ಟಕ್ಕೆ ತಲುಪಿದೆ.ಸೋಮವಾರ ಬೆಳಗ್ಗೆ 10 ಸಾವಿರ ಕ್ಯುಸೆಕ್ ನೀರು ಹೊರಬಿಡುವು ಸೂಚನೆಗಳಿವೆ. ಈ ಹಿನ್ನೆಲೆ ಹೊನ್ನಾಳಿ ಪಟ್ಟಣದ ನದಿಪಾತ್ರದ ಬಾಲರಾಜ್ ಘಾಟ್ ನಿವಾಸಿಗಳನ್ನು ಸಮೀಪದಲ್ಲಿರುವ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಾಲರಾಜ್ ಘಾಟ್ ಬಳಿಯ ನದಿ ತೀರದ ಹತ್ತಿರವಿರುವ 13 ಮನೆಗಳ ಜನರನ್ನು ಈಗಾಗಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಉಳಿದ ಕುಟುಂಬಗಳ ಜನರನ್ನು ಕೂಡ ಅಂಬೇಡ್ಕರ್ ಭವನದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ಎಸಿ ತಿಳಿಸಿದ್ದಾರೆ.
ಮಳೆ ವಿವರ:ಹೊನ್ನಾಳಿ- 8.8 ಮಿಮೀ, ಸವಳಂಗ 33.6, ಬೆಳಗುತ್ತಿ 23.5, ಹರಳಹಳ್ಳಿ 8.5, ಗೋವಿನಕೋವಿ 12.8, ಕುಂದೂರು 8.4, ಸಾಸ್ವೇಹಳ್ಳಿ 15.6 ಮಿಮೀ ಮಳೆಯಾಗಿದೆ. ತುಂಗಭದ್ರಾ ನದಿ ನೀರಿನಮಟ್ಟ 10.800 ಮೀಟರ್‌ನಷ್ಟು ಇದೆ.
ಮನೆಗೆ ಹಾನಿ:ಶುಕ್ರವಾರ ಸುರಿದ ಮಳೆಗೆ ತಾಲೂಕಿನ ಸೊರಟೂರು,ಎಚ್.ಗೋಪಗೊಂಡನಹಳ್ಳಿ ಸೇರಿದಂತೆ ಒಟ್ಟು ಐದು ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಕಂದಾಯಾಧಿಕಾರಿ ತಿಳಿಸಿದ್ದಾರೆ.
- - -ಕೋಟ್
ಹೊನ್ನಾಳಿ ತಾಲೂಕು ಆಡಳಿತ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ತಹಸೀಲ್ದಾರ್ ಪಟ್ಟರಾಜ ಗೌಡ ಶನಿವಾರ ನಾಲ್ಕೈದು ಬಾರಿ ಬಾಲರಾಜ್ ಘಾಟ್ ಪ್ರದೇಶಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ. ಇನ್ನು ತಾಲೂಕಿನ ಸಾಸ್ವೇಹಳ್ಳಿ, ಚೀಲೂರು ಸೇರಿದಂತೆ ನದಿ ಪಾತ್ರಗಳ ಹಳ್ಳಿಗಳ ಪರಿಸ್ಥಿತಿ ಳ ಬಗ್ಗೆಯೂ ನಿರಂತರ ಗಮನಹರಿಸಲು ಸಂಬಂಧಿಸಿದ ಗ್ರಾ.ಪಂ.ಗಳ ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ- ವಿ. ಅಭಿಷೇಕ್, ಉಪವಿಭಾಗಾಧಿಕಾರಿ
- - - -27ಎಚ್.ಎಲ್.ಐ2: ಮಳೆಯಿಂದಾಗಿ ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ.-27ಎಚ್.ಎಲ್.ಐ2ಎಃ: ತುಂಗಭದ್ರಾ ನದಿಯಲ್ಲಿ ನೀರಿನಮಟ್ಟ ಏರಿಕೆಯಾಗಿ ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್ ಪ್ರದೇಶದ ಮನೆಗಳ ಸಮೀಪಕ್ಕೆ ನದಿ ನೀರು ಬಂದಿರುವುದು.