ಹರಪನಹಳ್ಳಿ ತಾಲೂಕಿನ ಚಿಗಟೇರಿ-ನಿಚ್ಚವನಹಳ್ಳಿ ಮತ್ತು ಇತರೆ 105 ಹಳ್ಳಿಗಳಿಗೆ ಶೀಘ್ರದಲ್ಲೇ ತುಂಗಭದ್ರಾ ನದಿಯಿಂದ ನೀರು ಪೂರೈಸಲಾಗುವುದು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಹರಪನಹಳ್ಳಿ: ತಾಲೂಕಿನ ಚಿಗಟೇರಿ-ನಿಚ್ಚವನಹಳ್ಳಿ ಮತ್ತು ಇತರೆ 105 ಹಳ್ಳಿಗಳಿಗೆ ಶೀಘ್ರದಲ್ಲೇ ತುಂಗಭದ್ರಾ ನದಿಯಿಂದ ನೀರು ಪೂರೈಸಲಾಗುವುದು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಕೆಕೆಆರ್ ಡಿಬಿ ಯೋಜನೆಯಡಿ 4 ಕೋಟಿ ಮೊತ್ತದ ಎಕ್ಕುಂಬಿ ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಬೆಣ್ಣೆಹಳ್ಳಿ-ಕಡಕೋಳ ಗ್ರಾಮ ಪರಿಮಿತಿ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಕಳೆದ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡಿದ್ದ ಚಿಗಟೇರಿ-ನಿಚ್ಚವನಹಳ್ಳಿ ಮತ್ತು ಇತರೆ 105 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಇದೀಗ ಶೇ. 90ರಷ್ಟು ಕೆಲಸ ಪೂರ್ಣಗೊಂಡಿದ್ದು, ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕ ಕೂಡಲೇ ನದಿಯಿಂದ ನೀರು ಸರಬರಾಜು ಆಗಲಿದೆ ಎಂದರು.
ರಾಜ್ಯ ಸರ್ಕಾರದಿಂದ ಶೀಘ್ರದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಮೂರು ಲಕ್ಷ ವಸತಿ ಮನೆಗಳು ಮಂಜೂರಾಗಲಿದ್ದು, ಕ್ಷೇತ್ರಕ್ಕೆ ಎರಡರಿಂದ ಮೂರು ಸಾವಿರ ಮನೆಗಳು ಬರುವ ಸಾಧ್ಯತೆ ಇದೆ. ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುವುದು ಎಂದರು.ಕ್ಷೇತ್ರಕ್ಕೆ ಈಗಾಗಲೇ ನೂರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಉಳಿದ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಕುಬೇರ್ ಗೌಡ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಲಾಟಿ ದಾದಾಪೀರ, ಎಇಇ ರಾಘವೇಂದ್ರ, ಮುಖಂಡರಾದ ಮೈದೂರು ರಾಮಪ್ಪ, ಎಚ್. ವಸಂತಪ್ಪ, ದೇವೇಂದ್ರಗೌಡ, ಮತ್ತೂರು ಬಸವರಾಜ್, ಸಾಸಿವೆಹಳ್ಳಿ ನಾಗರಾಜ್, ಶಿವರಾಜ್, ಚಿಗಟೇರಿ ಪಿಎಸ್‌ಐ ನಾಗರತ್ನಾ, ಗುತ್ತಿಗೆದಾರ ಚೇತನ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.