ಕಾಸರಕೋಡ ಕಡಲತೀರದಲ್ಲಿ ನೂರಾರು ಮೊಟ್ಟೆಗಳನ್ನಿಟ್ಟ ಆಮೆಗಳು

| Published : Jan 25 2024, 02:03 AM IST

ಕಾಸರಕೋಡ ಕಡಲತೀರದಲ್ಲಿ ನೂರಾರು ಮೊಟ್ಟೆಗಳನ್ನಿಟ್ಟ ಆಮೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಜ. 22ರಂದು ಕಡಲ ತೀರದಲ್ಲಿ ಆಮೆಗಳು ಓಡಾಡಿರುವುದು ಕಂಡುಬಂದಿದ್ದು ಪರಿಶೀಲಿಸಿದಾಗ ಮೊಟ್ಟೆ ಇಟ್ಟಿರುವುದು ಗಮನಕ್ಕೆ ಬಂದಿದೆ. ಮೊಟ್ಟೆಗಳಿಗೆ ನಾಯಿ ಅಥವಾ ಇತರ ಪ್ರಾಣಿಗಳು ಹಾನಿ ಮಾಡದಂತೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಅಳವಡಿಸಿ ರಕ್ಷಿಸಿದ್ದಾರೆ.

ಕಾರವಾರ:

ಹೊನ್ನಾವರ ಕಾಸರಕೋಡ ಕಡಲತೀರದಲ್ಲಿ ಈಚೆಗೆ ಮೂರು ಕಡಲಾಮೆಗಳು ನೂರಾರು ಮೊಟ್ಟೆ ಇಟ್ಟಿರುವುದು ಬೆಳಕಿಗೆ ಬಂದಿದೆ.

ಜ. 22ರಂದು ಕಡಲ ತೀರದಲ್ಲಿ ಆಮೆಗಳು ಓಡಾಡಿರುವುದು ಕಂಡುಬಂದಿದ್ದು ಪರಿಶೀಲಿಸಿದಾಗ ಮೊಟ್ಟೆ ಇಟ್ಟಿರುವುದು ಗಮನಕ್ಕೆ ಬಂದಿದೆ. ಮೊಟ್ಟೆಗಳಿಗೆ ನಾಯಿ ಅಥವಾ ಇತರ ಪ್ರಾಣಿಗಳು ಹಾನಿ ಮಾಡದಂತೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಅಳವಡಿಸಿ ರಕ್ಷಿಸಿದ್ದಾರೆ.ಈ ಅವಧಿಯಲ್ಲಿ ಕಡಲಾಮೆಗಳು ಮೊಟ್ಟೆ ಇಡಲು ಕಡಲ ತೀರಕ್ಕೆ ಆಗಮಿಸುತ್ತವೆ. ಕಾಸರಕೋಡ ಕಡಲತೀರದಲ್ಲಿ ಆಮೆಗಳು ಮೊಟ್ಟೆ ಇಡುವ ತಾಣವಾಗಿದ್ದು, ಈ ಪ್ರದೇಶದಲ್ಲಿ ಬಂದರು ಚಟುವಟಿಕೆ ಆರಂಭಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಮೂರು ಆಮೆಗಳು ಬಂದು ಮೊಟ್ಟೆ ಇಟ್ಟಿರುವುದು ಪರಿಸರ ಪ್ರಿಯರ ವಾದಕ್ಕೆ ಪುಷ್ಟಿ ನೀಡಿದಂತಾಗಿದೆ.ಕಾಸರಕೋಡ ಕಡಲ ತೀರದಲ್ಲಿ ಕಳೆದ ವರ್ಷವೂ ಆಮೆಗಳು ಬಂದು ಮೊಟ್ಟೆ ಇಟ್ಟಿರುವುದು ಕಂಡುಬಂದಿತ್ತು. ಸಂರಕ್ಷಿಸಲಾದ ಮೊಟ್ಟೆಗಳಿಂದ ಹೊರಬಂದ ಮರಿಗಳು ಸುರಕ್ಷಿತವಾಗಿ ಕಡಲು ಸೇರಿದ್ದವು.ಕಾಸರಕೋಡ, ಕಾರವಾರ ಕಡಲತೀರ, ದೇವಬಾಗ ಕಡಲತೀರ ಮತ್ತಿತರ ಕಡೆಗಳಲ್ಲಿ ಈಚಿನ ವರ್ಷಗಳಲ್ಲಿ ಆಮೆಗಳು ಮೊಟ್ಟೆ ಇಡುವುದು ಹೆಚ್ಚುತ್ತಿದೆ. ಈ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳದೆ ಆಮೆಗಳ ಸಂತತಿ ವೃದ್ಧಿಯ ತಾಣವನ್ನಾಗಿ ರೂಪಿಸಬೇಕು ಎಂದು ಪರಿಸರಪ್ರಿಯರು ಅಭಿಪ್ರಾಯಪಡುತ್ತಾರೆ. ಅಚ್ಚರಿ:

ಜ. 22ರಂದು ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣಪ್ರತಿಷ್ಠೆ ನಡೆದಿದೆ. ಅಂದು ಶ್ರೀಹರಿಯ ಕೂರ್ಮಾವತಾರದ ದಿನವೂ ಹೌದು. ಅದೇ ದಿನ ಸಮುದ್ರ ಕೂರ್ಮಗಳು ನೂರಾರು ಮೊಟ್ಟೆ ಇಟ್ಟಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಶ್ರೀ ಹರಿಯ ಕೂರ್ಮಾವತಾರದ ದಿನದಂದು ರಾಮ ಮಂದಿರ ಲೋಕಾರ್ಪಣೆ ನಡೆದಿರುವುದು ವಿಶೇಷ ಎಂದು ಕಾಸರಕೋಡ ಟೊಂಕಾ ಕೊಂಕಣ ಖಾರ್ವಿ ಮೀನುಗಾರ ಸಮಾಜದ ಮುಖಂಡ ರಾಜೇಶ ಗೋವಿಂದ ತಾಂಡೇಲ ತಿಳಿಸಿದ್ದಾರೆ.

ಕಾಸರಕೋಡ ಕಡಲತೀರ ಮೊಟ್ಟೆ ಇಡಲು ಆಮೆಗಳಿಗೆ ಪ್ರಶಸ್ತವಾದ ತಾಣ. ಪ್ರತಿ ವರ್ಷ ಇಲ್ಲಿ ಆಮೆಗಳು ಮೊಟ್ಟೆ ಇಡುತ್ತವೆ. ಈ ಕಡಲತೀರವನ್ನು ರಕ್ಷಿಸಬೇಕಾದ ಅಗತ್ಯತೆ ಇದೆ ಎಂದು ಸಾಗರ ವಿಜ್ಞಾನಿ ಡಾ. ಪ್ರಕಾಶ ಮೇಸ್ತ ಹೇಳಿದರು.