ತುರುವೇಕೆರೆ: ಮಗು ಮೇಲೆ ಬಿದ್ದ ಅಂಗನವಾಡಿ ಮೇಲ್ಚಾವಣಿ

| Published : Jan 19 2024, 01:47 AM IST

ತುರುವೇಕೆರೆ: ಮಗು ಮೇಲೆ ಬಿದ್ದ ಅಂಗನವಾಡಿ ಮೇಲ್ಚಾವಣಿ
Share this Article
  • FB
  • TW
  • Linkdin
  • Email

ಸಾರಾಂಶ

ತುರುವೇಕೆರೆ ತಾಲೂಕಿನಲ್ಲಿ ಅಂಗನವಾಡಿ ಮೇಲ್ಚಾವಣಿ ಕುಸಿದು ಮಗುವಿಗೆ ಗಾಯ

ಕನ್ನಡಪ್ರಭ ವಾರ್ತೆ ತುರುವೇಕೆರೆ

ಅಂಗನವಾಡಿಯ ಮೇಲ್ಚಾವಣಿ ಮಗುವಿನ ಮೇಲೆ ಬಿದ್ದ ಪರಿಣಾಮ ಮಗುವಿನ ತಲೆಗೆ ಮತ್ತು ಕಾಲಿಗೆ ಪೆಟ್ಟು ಬಿದ್ದಿರುವ ಪ್ರಕರಣ ತಾಲೂಕಿನ ಹಡವನಹಳ್ಳಿಯಲ್ಲಿ ವರದಿಯಾಗಿದೆ.

ಹಡವನಹಳ್ಳಿಯ ಅಂಗನವಾಡಿಯ ಪ್ಲೇ ಹೋಮ್ ಗೆ ಸೇರಿದ್ದ ಹರ್ಷ ಮತ್ತು ವಿದ್ಯಾ ದಂಪತಿಯ ೨ ವರ್ಷದ ಪುತ್ರ ರುದ್ರೇಶ ಪೆಟ್ಟು ತಿಂದಿರುವ ದುರ್ದೈವಿ. ಗುರುವಾರ ರುದ್ರೇಶ್‌ನ ಅಜ್ಜಿ ಕಲ್ಪನಾ ಅವರು ರುದ್ರೇಶನನ್ನು ಅಂಗನವಾಡಿಯಿಂದ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಆ ವೇಳೆ ಅಜ್ಜಿ ಕಲ್ಪನಾ ಮೊಮ್ಮಗ ರುದ್ರೇಶನನ್ನು ಸೊಂಟದ ಮೇಲೆ ಎತ್ತಿಕೊಂಡು ಅಂಗನವಾಡಿಯಿಂದ ಮಕ್ಕಳ ಮನೆಗೆ ನೀಡಲಾಗುವ ದಿನಸಿ ವಸ್ತುಗಳ ವಿಚಾರಣೆ ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಅಂಗನವಾಡಿಯ ಮೇಲ್ಚಾವಣಿಯ ಸಿಮೆಂಟಿನ ತುಂಡೊಂದು ಮಗು ರುದ್ರೇಶ್‌ನ ಮೇಲೆ ಬಿದ್ದಿತು. ಗಾಯಗೊಂಡ ರುದ್ರೇಶನನ್ನು ಕೂಡಲೇ ದಂಡಿನಶಿವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಉಸ್ತುವಾರಿಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಮಗು ರುದ್ರೇಶ್ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ.

ಹೊಸ ಕಟ್ಟಡ: ೨೦೧೮-೧೯ ರಲ್ಲಿ ಕಟ್ಟಡ ಕಟ್ಟಡ ಅನುಮತಿ ನೀಡಲಾಗಿತ್ತು. ೨೧-೨೨ ರಲ್ಲಿ ಅಂಗನವಾಡಿ ಕಟ್ಟಡವನ್ನು ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಕಳಪೆ ಕಾಮಗಾರಿ ಮಾಡಿದ ಫಲವಾಗಿ ಕಟ್ಟಡದ ಮೇಲ್ಚಾವಣಿ ಕಿತ್ತು ಬಂದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಸಿಡಿಪಿಒ ಎಸ್. ಗೋಪಾಲಯ್ಯ, ಇಒ ಶಿವರಾಜಯ್ಯ ಭೇಟಿ ನೀಡಿದ್ದರು.

ಅಂಗನವಾಡಿ ಕಟ್ಟಡದ ಮೇಲ್ಚಾವಣಿ ಶಿಥಿಲಾವಸ್ಥೆಯಲ್ಲಿರುವುದರಿಂದ ಸಂಪೂರ್ಣವಾಗಿ ದುರಸ್ತಿ ಮಾಡಿಸಲು ಇಒ ಶಿವರಾಜಯ್ಯ ಗ್ರಾಮ ಪಂಚಾಯ್ತಿ ಪಿಡಿಒ ಗೆ ಸೂಚನೆ ನೀಡಿದ್ದಾರೆ.

ತಾಲೂಕಿನಲ್ಲಿ ಹಲವಾರು ಅಂಗನವಾಡಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಮತ್ತೆ ಕೆಲವು ಬಾಡಿಗೆ ಕಟ್ಟಡಗಳಲ್ಲಿ ಇವೆ. ವಿಧಿ ಇಲ್ಲದೇ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಜೀವಹಾನಿ ಆಗುವ ಮುನ್ನ ಕೂಡಲೇ ಸರ್ಕಾರ ಎಚ್ಚೆತ್ತು ಸೂಕ್ತ ಕಟ್ಟಡಗಳಿಗೆ ಅಂಗನವಾಡಿ ಕೇಂದ್ರಗಳನ್ನು ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.