ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಶುಕ್ರವಾರದಂದು ಲೋಕಸಭಾ ಚುನಾವಣೆಯು ಸುಸೂತ್ರವಾಗಿ ನಡೆಯುವ ಸಲುವಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತುರುವೇಕೆರೆ ವಿಧಾನಸಭಾ ಕೇತ್ರದಲ್ಲಿ ಒಟ್ಟು ೧೮೪೫೬೮ ಮತದಾರರು ಇದ್ದಾರೆ. ಇವರಲ್ಲಿ ೯೧೬೦೮ ಪುರುಷ ಮತದಾರರು, ೯೨೯೬೦ ಮಹಿಳಾ ಮತದಾರರು ಇದ್ದಾರೆ. ಒಟ್ಟು ೨೨೪ ಮತಗಟ್ಟೆಗಳು ಇವೆ. ಇವುಗಳಲ್ಲಿ ಕಸಬಾ ಹೋಬಳಿಯಲ್ಲಿ ೪೯, ದಂಡಿನಶಿವರದಲ್ಲಿ ೪೧, ಮಾಯಸಂದ್ರದಲ್ಲಿ ೩೭, ದಬ್ಬೇಘಟ್ಟದಲ್ಲಿ ೩೯, ಸಿ ಎಸ್ ಪುರದಲ್ಲಿ ೩೦, ಕಡಬಾದಲ್ಲಿ ೧೭, ತುರುವೇಕೆರೆ ಪಟ್ಟಣದಲ್ಲಿ ೧೧ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಮಂಜುನಾಥ್ ತಿಳಿಸಿದರು.
ಕಸಬಾ ಹೋಬಳಿಯಲ್ಲಿ ೪೦೧೮೨ ಮತದಾರರು, ಮಾಯಸಂದ್ರದಲ್ಲಿ ೩೧೪೨೭ ಮತದಾರರು, ದಂಡಿನಶಿವರ ೩೨೨೧೨ ಮತದಾರರು, ದಬ್ಬೇಘಟ್ಟದಲ್ಲಿ ೩೧೮೦೬ ಮತದಾರರು, ಕಡಬಾದಲ್ಲಿ ೧೪೫೨೩ ಮತದಾರರು, ಸಿಎಸ್ ಪುರದಲ್ಲಿ ೨೩೪೨೯ ಮತದಾರರು, ತುರುವೇಕೆರೆ ಪಟ್ಟಣದಲ್ಲಿ ೧೦೯೮೯ ಮಂದಿ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆಂದು ಮಂಜುನಾಥ್ ತಿಳಿಸಿದರು.ಒಟ್ಟು ೧೯೬ ಸ್ಥಳಗಳಲ್ಲಿ ಮತದಾನ ನಡೆಯಲಿದೆ. ೧೭೧ ಸ್ಥಳಗಳಲ್ಲಿ ಒಂದೊಂದು ಮತಗಟ್ಟೆ, ೨೨ ಸ್ಥಳಗಳಲ್ಲಿ ೨ ಮತಗಟ್ಟೆಗಳು, ೩ ಸ್ಥಳಗಳಲ್ಲಿ ೩ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ೮೫ ವರ್ಷಕ್ಕೂ ಹೆಚ್ಚು ವಯಸ್ಸಿನವರು ೨೬೪೮ ಮಂದಿ ಇದ್ದಾರೆ. ಇವರಲ್ಲಿ ೧೦೯೧ ಪುರುಷರಿದ್ದರೆ, ೧೫೫೭ ಮಹಿಳಾ ಮತದಾರರು ಇದ್ದಾರೆ. ವಿಶೇಷ ಚೇತನ ಮತದಾರರು ೨೮೫೬ ಮಂದಿ ಇದ್ದಾರೆ. ಈ ಮತದಾರರ ಚುನಾವಣೆಯನ್ನು ಮನೆಯಲ್ಲೇ ಮಾಡಲಾಗಿದೆ. ಶೇಕಡ ೯೦ ಕ್ಕೂ ಹೆಚ್ಚು ಮಂದಿ ಮತ ಚಲಾಯಿಸಿದ್ದಾರೆಂದು ಮಂಜುನಾಥ್ ತಿಳಿಸಿದರು.
ಒಟ್ಟು ೭೪೪ ವಿಐಪಿ ಮತದಾರರು ಇದ್ದಾರೆ. ೨೨೪ ಮತಗಟ್ಟೆಗಳ ಪೈಕಿ ೫೯ ಸೂಕ್ಷ್ಮ ಮತಗಟ್ಟೆಗಳು ಇವೆ. ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಮತಯಂತ್ರಗಳ ಶೇಖರಣಾ ಕಾರ್ಯ ನಡೆಯಲಿದೆ. ತಾಂತ್ರಿಕ ದೋಷ ಕಂಡು ಬಂದಲ್ಲಿ ಶೇಕಡಾ ೨೦ ರಷ್ಟು ಹೆಚ್ಚುವರಿಯಾಗಿ ಮತಯಂತ್ರಗಳನ್ನು ಮೀಸಲಿಡಲಾಗಿದೆ ಎಂದು ಮಂಜುನಾಥ್ ತಿಳಿಸಿದರು.