ಮತದಾರರ ಪಟ್ಟಿ ಕುರಿತು ಸಮೀಕ್ಷೆ ನಡೆಸಿ: ತುಷಾರ್‌

| Published : Aug 22 2024, 12:52 AM IST

ಸಾರಾಂಶ

ಮತದಾರರ ವಿಶೇಷ ಪರಿಷ್ಕರಣೆ ಅಂಗವಾಗಿ ಮಂಗಳವಾರದಿಂದ ಅ.18 ವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಿದ್ದು, ಅನರ್ಹರರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕುವುದಕ್ಕೆ ಕ್ರಮ ಕೈಗೊಳ್ಳಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ರಾಜಕೀಯ ಮುಖಂಡರೊಂದಿಗೆ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗದ ಸೂಚನೆಯಂತೆ ಮತದಾರ ಪಟ್ಟಿ ಪರಿಷ್ಕರಣೆ ಹಮ್ಮಿಕೊಳ್ಳಲಾಗಿದೆ. ಬೂತ್‌ ಮಟ್ಟದ ಅಧಿಕಾರಿಗಳು ಅ 18ವರೆಗೆ ಮನೆ ಮನೆ ಸಮೀಕ್ಷೆ ನಡೆಸಿ ಅರ್ಹ ಮತದಾರರನ್ನು ಮತದಾರ ಪಟ್ಟಿಗೆ ಸೇರಿಸುವುದಕ್ಕೆ, ತಿದ್ದುಪಡಿಗೆ ಕ್ರಮ ವಹಿಸಲಿದ್ದಾರೆ. ಜತೆಗೆ ಮೃತಪಟ್ಟವರು, ಅನರ್ಹರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಿದ್ದಾರೆ. ಅಂತಿಮವಾಗಿ ಅ. 29ಕ್ಕೆ ಮತದಾರರ ಕರಡು ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ಆಕ್ಷೇಪಣೆಗೆ ಸಲ್ಲಿಸುವುದಕ್ಕೆ ಅವಕಾಶ ನೀಡಿ, 2025ರ ಜನವರಿ 5 ರಂದು ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಈ ಬಾರಿ ಆ್ಯಪ್‌ ಆಧಾರಿಸಿ ಸಮೀಕ್ಷೆ ನಡೆಸಲಿದ್ದಾರೆ. ಮತದಾರರು ಸಹ ಚುನಾವಣಾ ಆಯೋಗದ ವೋಟರ್ ಹೆಲ್ಪ್ ಲೈನ್ ಮೊಬೈಲ್ ಅಫ್ಲಿಕೇಷನ್ (ವಿಎಚ್ಎ) ಮತ್ತು ವೋಟರ್ ಸರ್ವೀಸ್ ಪೋರ್ಟಲ್(ವೆಬ್ ಅಫ್ಲಿಕೇಷನ್) ಗಳನ್ನು ಬಳಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಮತಗಟ್ಟೆಗಳ ಪರಿಶೀಲನೆ:ನಗರದಲ್ಲಿ ಸುಮಾರು 9000 ಮತಗಟ್ಟೆಗಳಿದ್ದು, ಮತಗಟ್ಟೆಗಳನ್ನು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮತಗಟ್ಟೆಗಳಿಗೆ ಅನುಗುಣವಾಗಿ ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿರುತ್ತದೆ ಎಂದರು. ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಸ್ನೇಹಲ್, ದಯಾನಂದ್, ಅವಿನಾಶ್ ಮೆನನ್ ರಾಜೇಂದ್ರನ್, ಚುನಾವಣಾ ವಿಭಾಗದ ಸಹಾಯಕ ಆಯುಕ್ತ ಶರಣಪ್ಪ ಇದ್ದರು.