ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಈ ಬಾರಿ ವಾಡಿಕೆಗಿಂತ ಶೇ.28 ರಷ್ಟು ಹೆಚ್ಚು ಮಳೆಯಾಗಿ ಬಹುತೇಕ ರಾಜ್ಯದ ಜಲಾಶಯಗಳು ಭರ್ತಿಯಾಗಿವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.ಪಟ್ಟಣದ ವೆಲ್ಲೆಸ್ಲಿ ಸೇತುವೆ ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಆದರೆ, ರಾಜ್ಯದಲ್ಲಿ 6 ಜಿಲ್ಲೆಗಳಲ್ಲಿ ವಾಡಿಕೆಗಿಂತ ಸಾಧಾರಣ ಮಳೆಯಾಗಿದೆ ಎಂದರು.
ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿ ಜಲಾಶಯಗಳು ಭರ್ತಿಯಾಗಿರುವುದರಿಂದ ನೀರು ಹೊರ ಬಿಡಲಾಗುತ್ತಿದೆ. ಹೇಮಾವತಿ ಸಹ ತುಂಬಿ ಹರಿಯುತ್ತಿದೆ. ಜಲಾಶಯದಿಂದ ಹೆಚ್ಚು ನೀರು ಬಿಡಲಾಗಿದೆ. ಕೆಆರ್‌ಎಸ್ ಅಣೆಕಟ್ಟೆಯಿಂದ 1.20 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರು ಬಿಡಲಾಗುತ್ತಿದೆ. ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅವುಗಳನ್ನೆಲ್ಲ ಪರಿಶೀಲಿಸಲಾಗಿದೆ ಎಂದು ತಿಳಿಸಿದರು.ಕೇರಳದ ವೈನಾಡಿನಲ್ಲಿ ಹೆಚ್ಚು ಮಳೆಯಾಗಿದೆ, ಕಬಿನಿ ಜಲಾಶಯ ತುಂಬಿದೆ, ಅಲ್ಲಿಯೂ 80 ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ. ಒಟ್ಟಾರೆ ಕೆಆರ್‌ಎಸ್-ಕಬಿನಿಯಿಂದ 1.50 ಲಕ್ಷ ಕ್ಯುಸೆಕ್ ನೀರು ಬಿಳಿಗುಂಡಲಿನಿಂದ ತಮಿಳುನಾಡಿಗೆ ಹೋಗುತ್ತಿದೆ. ಇದಕ್ಕೆಲ್ಲಾ ಲೆಕ್ಕವಿದೆ ಎಂದು ಮಾಹಿತಿ ನೀಡಿದರು.
ಈಗ 1.20 ರಿಂದ 30 ಲಕ್ಷ ಕ್ಯುಸೆಕ್ ನೀರು ಬರುತ್ತಿದೆ. ಈ ಹಿಂದೆ 1.70 ಲಕ್ಷ ಕ್ಯುಸೆಕ್ ವರೆಗೂ ನೀರು ಬಿಟ್ಟಿರುವ ದಾಖಲೆಗಳಿವೆ. ಆದಷ್ಟು ತಗ್ಗು ಪ್ರದೇಶದಲ್ಲಿರುವ ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸರ್ಕಾರದ ಮಟ್ಟದಲ್ಲಿ ಸಹಕಾರ ನೀಡುತ್ತದೆ ಎಂದರು.ಈಗಾಗಲೇ ತಗ್ಗು ಪ್ರದೇಶಗಳಲ್ಲಿ ಹಾನಿಯಾಗಿರುವ ಬಗ್ಗೆ ಮಾಹಿತಿಗಳು ಬಂದಿವೆ. ರಾಜ್ಯ ಸರ್ಕಾರದಲ್ಲಿ ಇರುವ ಹಣ ಬಳಕೆ ಮಾಡಿಕೊಂಡು ಪರಿಹಾರದ ವ್ಯವಸ್ಥೆ ಮಾಡಲಾಗುತ್ತದೆ. ವಿಪತ್ತು ನಿರ್ವಹಣೆಗಾಗಿ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಗೆ ಒಟ್ಟು 770 ಕೋಟಿ ರು. ಹಣವನ್ನು ಮೀಸಲಿರಿಸಲಾಗಿದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಗೂ ಸಹ 20 ಕೋಟಿ ರು. ಹಣ ನೀಡಲಾಗಿದೆ. ಎಲ್ಲಾ ತಾಲೂಕುಗಳಿಗೆ 25 ಲಕ್ಷ ರು. ನೀಡಲಾಗಿದೆ. ಸಣ್ಣ ಪುಟ್ಟ ತೊಂದರೆಯಾದಾಗ ರಾಜ್ಯ ಸರ್ಕಾರ ನಿಭಾಯಿಸುತ್ತದೆ. ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಹಾನಿ ಆದಾಗ ಮಾತ್ರ ಎನ್‌ಡಿಆರ್ ಎಫ್ ತಂಡಕ್ಕೆ ಆಹ್ವಾನ ನೀಡಬೇಕಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.2022-23ರಲ್ಲಿ 12 ಹೆಕ್ಟೇರ್ ನಷ್ಟು ಹಾನಿಯಾಗಿತ್ತು. ಸದ್ಯಕ್ಕೆ ಯಾವುದೇ ಸಾವು ಸಂಭವಿಸಿಲ್ಲ. ಈಗಾಗಲೇ ಜಿಲ್ಲಾಡಳಿತ ಚುರುಕು ಮೂಡಿಸುವ ಕೆಲಸ ಮಾಡುತ್ತಿದೆ. ಎಲ್ಲಾ ಕಡೆ ಅಲರ್ಟ್ ಆಗಿರಬೇಕು. ನದಿಯಲ್ಲಿ ನೀರು ಹೆಚ್ಚಳವಾಗುತ್ತದೆ. ಸಾರ್ವಜನಿಕರು ಸಹ ನದಿಗಿಳಿದು ಸೆಲ್ಫಿ ತೆಗೆದುಕೊಳ್ಳಲು ಹೋಗಬಾರದು. ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ಪರಿಶೀಲನೆ ವೇಳೆ ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.