ನರಸಿಂಹರಾಜಪುರ ತಾಲೂಕಲ್ಲಿ 20 ಡೆಂಘೀ ಪ್ರಕರಣ: ಡಾ.ವಿಜಯಕುಮಾರ್

| Published : Jul 05 2024, 12:53 AM IST

ಸಾರಾಂಶ

ನರಸಿಂಹರಾಜಪುರ, ತಾಲೂಕಿನಲ್ಲಿ 20 ಡೆಂಘೀ ಜ್ವರ ಕಾಣಿಸಿಕೊಂಡಿದ್ದು ಇವರಲ್ಲಿ 19 ಜನರು ಗುಣಮುಖರಾಗಿದ್ದು ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್‌ ತಿಳಿಸಿದರು.

ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನಲ್ಲಿ 20 ಡೆಂಘೀ ಜ್ವರ ಕಾಣಿಸಿಕೊಂಡಿದ್ದು ಇವರಲ್ಲಿ 19 ಜನರು ಗುಣಮುಖರಾಗಿದ್ದು ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್‌ ತಿಳಿಸಿದರು.

ಗುರುವಾರ ತಾಲೂಕು ಪಂಚಾಯಿತಿ ಸಾಮಾರ್ಥ್ಯ ಸೌಧದಲ್ಲಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎಲ್‌.ನಂದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು. ಡೆಂಘೀ ಜ್ವರ ಸೊಳ್ಳೆಗಳಿಂದ ಹರಡುವುದರಿಂದ ಸೊಳ್ಳೆಗಳ ನಿಯಂತ್ರಣಕ್ಕಾಗಿ ನಿಂತ ನೀರಿಗೆ ಟೆಮಿಪಾಸ್ ಎಂಬ ದ್ರಾವಣ ಹಾಕಿಸುತ್ತಿದ್ದೇವೆ. ಜನರ ಜಾಗೃತಿಗೆ ಹಲವು ಸಭೆಗಳನ್ನು ನಡೆಸಿದ್ದೇವೆ. ಆಶಾ ಕಾರ್ಯಕರ್ತೆಯರು ಮನೆ, ಮನೆಗಳಿಗೆ ಲಾರ್ವ ಸರ್ವೆ ಮಾಡುತ್ತಿದ್ದು ಮನೆ ಸುತ್ತ ನೀರು ನಿಲ್ಲದಂತೆ ಜಾಗ್ರತಿ ಮೂಡಿಸುತ್ತಿದ್ದಾರೆ.ಲಾರ್ವ ತಿನ್ನುವ ಗಂಬೂಸಿಯ ಎಂಬ ಮೀನು ಮರಿಗಳನ್ನು ಕೆರೆಗಳಿಗೆ ಬಿಡುವ ಚಿಂತನೆ ನಡೆಸಲಾಗುತ್ತಿದೆ ಎಂದರು.

ಕುಡಿಯುವ ನೀರಿನ ವಿಭಾಗದ ಎಂಜಿನಿಯರ್‌ ರಕ್ಷಿತ್‌ ಸಭೆಗೆ ಮಾಹಿತಿ ನೀಡಿ, ಒಟ್ಟು 42 ಬೋರ್ವೆಲ್‌ ಮಂಜೂರಾಗಿತ್ತು. ಇದರಲ್ಲಿ 34 ಕಾಮಗಾರಿ ಮುಗಿದಿದೆ. ವಿದ್ಯುತ್‌ ಸಮಸ್ಯೆಯಿಂದ 8 ಕಾಮಗಾರಿ ಉಳಿದಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇ.ಒ. ನವೀನ್ ಕುಮಾರ್ ಮಾತನಾಡಿ, ಜೆಜೆಎಂ ಯೋಜನೆಯಡಿ ಸರಿಯಾದ ಕಾಮಗಾರಿ ಆಗಿಲ್ಲ. ಜನರಿಂದ ದೂರು ಬರುತ್ತಿದೆ. ಕೆಲವು ಕಡೆ ನೀರಿನ ಮೂಲ ಇಲ್ಲದಿದ್ದರೂ ಬರೀ ಪೈಪ್ ಲೈನ್ ಮಾಡಿದ್ದಾರೆ. ಹಳೇ ಪೈಪ್‌ ಲೈನ್ ಕಿತ್ತು ಹಾಕಿ ಹೊಸ ಪೈಪ್‌ ಲೈನ್ ಮಾಡಿದ್ದಾರೆ. ಆದರೆ, ಹೊಸ ಪೈಪ್ ಲೈನಿಗೆ ನೀರಿನ ಸಂಪರ್ಕ ಕೊಟ್ಟಿಲ್ಲ. ಪೈಪ್‌ ಲೈನಿನ ಕಾಲುವೆ ಮುಚ್ಚಿಲ್ಲ. ಜೆಜೆಎಂ ನಲ್ಲಿ 88 ಕಾಮಗಾರಿ ಮುಗಿದಿದೆ ಎಂದು ವರದಿ ನೀಡಿದ್ದಾರೆ. ಇದರಲ್ಲಿ ಶೇ 90 ರಷ್ಟು ಕಾಮಗಾರಿ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ಪ್ರತಿ ದಿನ ನನಗೆ 2 ರಿಂದ 3 ದೂರುಗಳು ಬರುತ್ತಿದೆ. ಈ ಬಗ್ಗೆ ತುರ್ತಾಗಿ ಸಭೆ ಕರೆಯಬೇಕು ಎಂದು ಸೂಚಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರಮೇಶ್‌ ಸಭೆಗೆ ಮಾಹಿತಿ ನೀಡಿ, ತಾಲೂಕಿನಲ್ಲಿ 8 ಹಾಸ್ಟೆಲ್‌ ಗಳಿದ್ದು ಜೂನ್ 25 ರಿಂದ ಆನ್‌ ಲೈನ್‌ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 10 ರವರೆಗೆ ಅರ್ಜಿ ಹಾಕಬಹುದಾಗಿದೆ. ಶಾಸಕರ ಸಮಿತಿಯಲ್ಲಿ ಆಯ್ಕೆ ನಡೆಯಲಿದೆ.

ದೀಪ್ತಿ ಪ್ರೌಢ ಶಾಲೆ ಸಮೀಪದ ಹಾಸ್ಟೆಲ್ ನ ಹತ್ತಿರ ಇದ್ದ ದೊಡ್ಡ ಮರದಿಂದ ಅಪಾಯ ಎದುರಾಗಿದೆ. ಮರ ತೆಗೆಯಲು ಅನುಮತಿ ನೀಡಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್‌ ನಂದೀಶ್ ಮಾತನಾಡಿ, ಯಾವುದೇ ಕಟ್ಟಡದ ಮೇಲೆ ಮರ ಬೀಳುವ ಅಪಾಯ ಇದ್ದರೆ ತಕ್ಷಣ ಅರಣ್ಯ ಇಲಾಖೆಗೆ ಗಮನಕ್ಕೆ ತಂದರೆ ಅದನ್ನು ತೆಗೆಯಲು ಅನುಮತಿ ನೀಡಲಾಗುವುದು ಎಂದರು.

ಗ್ರಾಮ ಪಂಚಾಯಿತಿಗಳು ಕಸ ವಿಲೇವಾರಿ ಮಾಡುವಾಗ ಹಸಿ ಕಸ, ಒಣ ಕಸ ಬೇರೆ ಮಾಡುವಂತೆ ಜನರಿಗೆ ಸೂಚನೆ ನೀಡಬೇಕು. ಪ್ಲಾಸ್ಟಿಕ್ ಮುಂದಿನ ದಿನಗಳಲ್ಲಿ ಮನುಷ್ಯರಿಗೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ ಎಂದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್‌.ಡಿ.ನವೀನ್ ಕುಮಾರ್‌, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎಲ್‌.ನಂದೀಶ್‌ ಇದ್ದರು.

ಸಾಮಾನ್ಯ ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒಗಳು ಉಪಸ್ಥಿತರಿದ್ದರು.