ಸಾರಾಂಶ
ಕ್ಷೇತ್ರದ ಶಾಸಕರು ಈ ಭಾಗದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಮನವಿ ಮೇರೆಗೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಬೆಳಗಿನ ವೇಳೆಯಲ್ಲಿ ನೂಕು ನುಗ್ಗಲಿನಲ್ಲಿ ಶಾಲಾ ಕಾಲೇಜಿಗೆ ತೆರಳಬೇಕಾಗಿದ್ದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ.
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಹೋಬಳಿ ಕೇಂದ್ರದಲ್ಲಿ ಬೆಳಗಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಚನ್ನರಾಯಪಟ್ಟಣ ಡಿಪೋದಿಂದ ಹೆಚ್ಚುವರಿಯಾಗಿ ಎರಡು ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಹೋಬಳಿ ಕೇಂದ್ರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಸಂಚಾರದ ಬಸ್ ಗಳಿಗೆ ಪೂಜೆ ನೆರವೇರಿಸಿ ನೂತನ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ಅನೇಕ ತಿಂಗಳುಗಳಿಂದ ಬೆಳಗ್ಗೆ ಚನ್ನರಾಯಪಟ್ಟಣದ ಶಾಲಾ ಕಾಲೇಜುಗಳಿಗೆ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಹೋಗಲು ಹಾಗೂ ಈ ಭಾಗದ ಜನರಿಗೆ ಹೆಚ್ಚಿನ ಬಸ್ ವ್ಯವಸ್ಥೆ ಇಲ್ಲದೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು. ಈ ಬಗ್ಗೆ ನಿಗಮದ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡುವ ಮೂಲಕ ಎರಡು ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಕಾಯಂ ಸಂಚಾರ ನಡೆಸಲು ಕೆಎಸ್ಆರ್ ಟಿಸಿ ಬೆಂಗಳೂರು ಕೇಂದ್ರ ಕಚೇರಿಗೆ ಅನುಮತಿ ನೀಡುವಂತೆ ಕೋರಲಾಗಿದೆ. ಇದರ ಜೊತೆಗೆ ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ, ಶ್ರೀ ಸದಾಶಿವ ಸ್ವಾಮಿ ದೇವಾಲಯಗಳಿದ್ದು, ಬೆಂಗಳೂರಿನಿಂದ ಹಾಗೂ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಪ್ರತಿನಿತ್ಯ ದೇವಾಲಯಕ್ಕೆ ಆಗಮಿಸುತ್ತಾರೆ. ಈ ಹಿನ್ನೆಲೆ ಬೆಂಗಳೂರಿನಿಂದ ಕನಿಷ್ಠ ಎರಡು ಬಸ್ ವ್ಯವಸ್ಥೆ ಮಾಡುವಂತೆ ಸಾರಿಗೆ ಸಚಿವರಿಗೆ ಹಾಗೂ ನಿಗಮದ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.ಗ್ರಾಪಂ ಅಧ್ಯಕ್ಷ ಎನ್ಎಸ್ ಮಂಜುನಾಥ್ ಮಾತನಾಡಿ, ಕ್ಷೇತ್ರದ ಶಾಸಕರು ಈ ಭಾಗದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಮನವಿ ಮೇರೆಗೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಬೆಳಗಿನ ವೇಳೆಯಲ್ಲಿ ನೂಕು ನುಗ್ಗಲಿನಲ್ಲಿ ಶಾಲಾ ಕಾಲೇಜಿಗೆ ತೆರಳಬೇಕಾಗಿದ್ದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.
ನಿಗಮದ ಸಂಚಾರಿ ನಿಯಂತ್ರಕಿ ಗೌರಮ್ಮ, ಮುಖಂಡರಾದ ತೋಟಿ ನಾಗರಾಜ್, ವಿಕ್ಟರ್, ಮಹದೇವಮ್ಮ ಶಂಕರ್, ದೊರೆಸ್ವಾಮಿ, ವಿಎನ್ ಮಂಜುನಾಥ್, ಮಹಮ್ಮದ್ ಜಾವೀದ್, ಎಚ್. ಬಿ. ರಂಗಸ್ವಾಮಿ, ಹುಲಿಕೆರೆ ಸಂಪತ್ ಕುಮಾರ್, ಪಟೇಲ್ ಕುಮಾರ್, ಕೃಪಾ ಶಂಕರ್, ಜಗದೀಶ್, ಹರೀಶ್, ಪೊಲೀಸ್ ಬೆಟ್ಟಯ್ಯ, ಯಲ್ಲಪ್ಪ, ಶಿವ ಸ್ವಾಮಿ, ಚಂದ್ರು, ಮೊದಲಗೆರೆ ದಿಲೀಪ್, ಗ್ರಾಪಂ ಸದಸ್ಯರಾದ ಎನ್. ಆರ್. ಶಿವಕುಮಾರ್, ನಟರಾಜ್ ಯಾದವ್, ಹೊನ್ನೇಗೌಡ ಸೇರಿದಂತೆ ಇತರರು ಹಾಜರಿದ್ದರು.