ಬ್ಯಾಂಕ್ ನ ಗ್ರಾಹಕರೋರ್ವರ ಹಣವನ್ನು ಅವರ ಅರಿವಿಗೆ ಬಾರದಂತೆ ಹಣ ವಿತ್ ಡ್ರಾ ಮಾಡಿದ ಆರೋಪದ ಮೇರೆಗೆ ಇಬ್ಬರು ಬ್ಯಾಂಕ್ ಅಧಿಕಾರಿಗಳಿಗೆ ಸ್ಥಳೀಯ ನ್ಯಾಯಾಲಯ 2 ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು 25 ಸಾವಿರ ರು ದಂಡ ವಿಧಿಸಿದೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಬ್ಯಾಂಕ್ ನ ಗ್ರಾಹಕರೋರ್ವರ ಹಣವನ್ನು ಅವರ ಅರಿವಿಗೆ ಬಾರದಂತೆ ಹಣ ವಿತ್ ಡ್ರಾ ಮಾಡಿದ ಆರೋಪದ ಮೇರೆಗೆ ಇಬ್ಬರು ಬ್ಯಾಂಕ್ ಅಧಿಕಾರಿಗಳಿಗೆ ಸ್ಥಳೀಯ ನ್ಯಾಯಾಲಯ 2 ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು 25 ಸಾವಿರ ರು ದಂಡ ವಿಧಿಸಿದೆ.ತಾಲೂಕಿನ ಅಮ್ಮಸಂದ್ರದಲ್ಲಿರುವ ಎಸ್ ಬಿ ಐ ನಲ್ಲಿ ಅಮ್ಮಸಂದ್ರದ ಕೆ.ಬಸವಯ್ಯ ಎಂಬುವವರು ಉಳಿತಾಯ ಖಾತೆ ಹೊಂದಿದ್ದರು. 2016 ರಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಲಲಿತಾರಾಣಿ ಮತ್ತು ಕ್ಯಾಷಿಯರ್ ಆಗಿದ್ದ ಮರಮ್ ರವರು ಬಸವಯ್ಯನವರ ಅಕೌಂಟಿನಲ್ಲಿದ್ದ ಸುಮಾರು 2.80 ಲಕ್ಷ ರು.ಗಳನ್ನು ಗ್ರಾಹಕರ ಗಮನಕ್ಕೆ ಬಾರದಂತೆ ಡ್ರಾ ಮಾಡಿಕೊಂಡಿದ್ದರು.ಕೆಲವು ದಿನಗಳ ನಂತರ ಬ್ಯಾಂಕಿಗೆ ಬಂದಿದ್ದ ಬಸವಯ್ಯನವರು ತಮ್ಮ ಪಾಸ್ ಬುಕ್ ನೀಡಿ ಖಾತೆಯಲ್ಲಿರುವ ಹಣದ ಬಗ್ಗೆ ವಿಚಾರಣೆ ಮಾಡಲಾಗಿ ತಮ್ಮ ಖಾತೆಯಿಂದ 2.80 ಲಕ್ಷ ರು.ಗಳನ್ನು ತೆಗೆದಿರುವುದು ಕಂಡುಬಂದಿತ್ತು. ಇದರಿಂದ ಗಾಬರಿಗೊಂಡ ಬಸವಯ್ಯ ದಂಡಿನಶಿವರ ಪೊಲೀಸ್ ಠಾಣೆಗೆ ತೆರಳಿ ನಮ್ಮ ಗಮನಕ್ಕೆ ಬಾರದಂತೆ, ನನ್ನ ಸಹಿಯನ್ನು ನಕಲು ಮಾಡಿ ತಮ್ಮ ಖಾತೆಯಲ್ಲಿದ್ದ 2.80 ಲಕ್ಷ ರು.ಗಳನ್ನು ತೆಗೆದು ವಂಚಿಸಲಾಗಿದೆ ಎಂದು ದೂರು ದಾಖಲಿಸಿದ್ದರು. ತನಿಖೆ ವೇಳೆ ಮ್ಯಾನೇಜರ್ ಆಗಿದ್ದ ಲಲಿತಾ ರಾಣಿ ಮತ್ತು ಕ್ಯಾಷಿಯರ್ ಮರಮ್ ರವರು ಬಸವಯ್ಯನವರ ಸಹಿಯನ್ನು ನಕಲು ಮಾಡಿ ಹಣ ದುರುಪಯೋಗಪಡಿಸಿಕೊಂಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದಂಡಿನಶಿವರ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಇಲ್ಲಿಯ ಜೆ ಎಂ ಎಫ್ ಸಿ ಯ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಬಿ.ಸಿ.ದೀಪುರವರು ಇಬ್ಬರು ಆರೋಪಿಗಳಿಗೆ ಐಪಿಸಿ ಕಲಂ 409 ರ ಅಡಿ ತಲಾ ಒಂದು ವರ್ಷ ಸಾಧಾರಣ ಕಾರಾವಾಸ, ಕಲಂ 468 ರ ಅಡಿಯಲ್ಲಿ 6 ತಿಂಗಳು ಸಾಧಾರಣ ಕಾರಾವಾಸ, ಕಲಂ 465 ರ ಅಡಿಯಲ್ಲಿ 6 ತಿಂಗಳು ಸಾಧಾರಣ ಕಾರಾವಾಸ (ಒಟ್ಟು 2 ವರ್ಷ) ಹಾಗೂ ತಲಾ ಇಬ್ಬರಿಗೂ 25 ಸಾವಿರ ರುಗಳ ದಂಡವನ್ನು ವಿಧಿಸಿ ಆದೇಶಿಸಿದ್ದಾರೆ. ಸದರಿ ಪ್ರಕರಣದಲ್ಲಿ ಜೆಎಂಎಫ್ ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕರಾದ ಶಿವಬಸಪ್ಪ ಎಸ್ ಹುಕ್ಕೇರಿ ಯವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ದಂಡಿನಶಿವರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಎ.ಜಿ.ಹರೀಶ್ ಸಾಕ್ಷಿದಾರರನ್ನು ನಿಗದಿತ ದಿನಾಂಕಗಳಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಅಭಿಯೋಜನೆಗೆ ಸಹರಿಸಿದ್ದರು.
