ಸಾರಾಂಶ
ಹಿಂಬದಿ ಕುಳಿತ ಯುವಕನಿಗೂ ತೀವ್ರ ಗಾಯ । ಹುಲ್ಲೇಪುರ, ಚೌಡಹಳ್ಳಿ ಗ್ರಾಮದ ರಸ್ತೆಯಲ್ಲಿ ಅಪಘಾತ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಹೆಲ್ಮೆಟ್ ಧರಿಸದ ಕಾರಣ ಸ್ಥಳದಲ್ಲೇ ಮೃತ ಪಟ್ಟ, ಮತ್ತೋರ್ವ ಸವಾರನಿಗೂ ತೀವ್ರತರ ಗಾಯಗಳಾದ ಘಟನೆ ತಾಲೂಕಿನ ಹುಲ್ಲೇಪುರ-ಚೌಡಹಳ್ಳಿ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ಹುಂಡೀಪುರ ಗ್ರಾಮದ ನಿವಾಸಿ ಅಜಿತ್ (22), ಚೌಡಹಳ್ಳಿ ಗ್ರಾಮದ ಶಿವಯ್ಯ (56) ತಲೆಗೆ ಹೆಲ್ಮೆಟ್ ಧರಿಸದೆ ಬೈಕ್ ಓಡಿಸುತ್ತಿದ್ದ ಕಾರಣ ಇಬ್ಬರು ಸವಾರರು ಸಾವನ್ನಪ್ಪಿದ್ದಾರೆ. ಮೃತ ಅಜಿತ್ ಗುಂಡ್ಲುಪೇಟೆ ಕಡೆಯಿಂದ ಹುಂಡೀಪುರಕ್ಕೆ ಬುಲೆಟ್ ಬೈಕ್‌ನಲ್ಲಿ, ಮೃತ ಶಿವಯ್ಯ ಚೌಡಹಳ್ಳಿಯಿಂದ ಗುಂಡ್ಲುಪೇಟೆ ಕಡೆಗೆ ಹೋಂಡಾ ಆ್ಯಕ್ಟೀವ್ ಮೊಪೆಡ್‌ನಲ್ಲಿ ಹೋಗುತ್ತಿದ್ದಾಗ ಎದುರು, ಬದುರು ಡಿಕ್ಕಿ ಹೊಡೆದು ಸಾವನ್ನಪ್ಪಿದರೆ, ಹೋಂಡಾ ಆಕ್ಟೀವ್‌ದಲ್ಲಿ ಹಿಂಬದಿ ಕುಳಿತಿದ್ದ ಚೌಡಹಳ್ಳಿ ಗ್ರಾಮದ ಚಂದ್ರು ಗಾಯಗೊಂಡಿದ್ದು, ಆತನನ್ನು ಚಾಮರಾಜನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಾಹೇಬ ಗೌಡ ಆರ್.ಬಿ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೈಕ್‌ಗಳನ್ನು ವಶಕ್ಕೆ ಪಡೆದು, ಮೃತರಾದ ಅಜಿತ್ ಹಾಗೂ ಶಿವಯ್ಯನನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂದ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಹೆಲ್ಮೆಟ್ ಧರಿಸಿರಲಿಲ್ಲ!: ತಾಲೂಕಿನ ಹುಲ್ಲೇಪುರ-ಚೌಡಹಳ್ಳಿ ರಸ್ತೆಯಲ್ಲಿ ಬೈಕ್‌ಗಳ ಮುಖಾ ಮುಖಿಯಲ್ಲಿ ಸಾವನ್ನಪ್ಪಿದ್ದ ಇಬ್ಬರು ಸವಾರರು ತಲೆಗೆ ಹೆಲ್ಮೆಟ್ ಧರಿಸಿರಲಿಲ್ಲ ಇದು ಸಾವಿಗೆ ಪ್ರಮುಖ ಕಾರಣವಾಗಿದೆ. ತಾಲೂಕಿನಲ್ಲಿ ಹೆಲ್ಮೆಟ್ ರಹಿತವಾಗಿ ಬೈಕ್ ಸವಾರರು ಸಂಚರಿಸುತ್ತಿದ್ದರೂ ಪೊಲೀಸರು ಹೆಲ್ಮೆಟ್ ರಹಿತರ ಸವಾರರನ್ನು ಹಿಡಿದು ದಂಡ ಅಥವಾ ಕೇಸು ದಾಖಲಿಸಿದರೆ ಬೈಕ್ ಸವಾರರ ಪ್ರಾಣವಾದರೂ ಕನಿಷ್ಟ ಉಳಿಯುತ್ತದೆ.ಶಾಸಕರೂ ಹೇಳಲಿ!:
ಪೊಲೀಸರು ಹೆಲ್ಮೆಟ್ ಇಲ್ಲದೆ ಬೈಕ್ ಸವಾರರ ಹಿಡಿದು ಪೊಲೀಸರು ದಂಡ ವಸೂಲಿಗೆ ಶಾಸಕರ ಬೆಂಬಲಿಗರೇ ಅಡ್ಡಿ ಪಡಿಸುತ್ತಿದ್ದಾರೆ, ಈ ಕಾರಣದಿಂದ ಪೊಲೀಸರು ತಪಾಸಣೆಯನ್ನೇ ಬಿಟ್ಟು ಬಿಟ್ಟಿದ್ದಾರೆ! ಕ್ಷೇತ್ರದ ಶಾಸಕರು ಕ್ಷೇತ್ರದ ಬೈಕ್ ಸವಾರರು ಹಾಗೂ ಅವರ ಕುಟುಂಬದ ದೃಷ್ಟಿಯಿಂದ ಹೆಲ್ಮೆಟ್ ಸಹಿತ ಸಂಚಾರಕ್ಕೆ ಪೊಲೀಸರಿಗೆ ಸೂಚನೆ ನೀಡಲಿ.ಶಾಸಕರ ಬೆಂಬಲಿಗರು ಪೊಲೀಸರಿಗೆ ಅವಾಜ್ ರೀತಿಯಲ್ಲಿ ಬೈಕ್ ಬಿಟ್ ಕಳುಹಿಸ್ರೀ ಎಂದು ಹೇಳುತ್ತಿದ್ದಾರೆ.ಹೆಲ್ಮೆಟ್ ರಹಿತ ಸಂಚಾರದಿಂದ ಹುಂಡೀಪುರ, ಚೌಡಹಳ್ಳಿ ಗ್ರಾಮದ ಇಬ್ಬರು ಬೈಕ್ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದನ್ನು ಗಮನಿಸಿ ಹೆಲ್ಮೆಟ್ ಸಹಿತ ಪ್ರಯಾಣಕ್ಕೆ ಶಾಸಕರು ಒತ್ತು ಕೊಡಲಿ ಎಂಬುದು ಕನ್ನಡಪ್ರಭದ ಕಳಕಳಿ.